ADVERTISEMENT

ರೈತರಿಂದ ಬಳಕೆದಾರರಿಗೆ ಆಹಾರ ಧಾನ್ಯ ನೇರ ಮಾರಾಟ

​ಪ್ರಜಾವಾಣಿ ವಾರ್ತೆ
Published 27 ಮೇ 2018, 11:14 IST
Last Updated 27 ಮೇ 2018, 11:14 IST

ಚನ್ನಪಟ್ಟಣ: ದೇಶದ ಬೆನ್ನೆಲುಬು ಎಂದು ಕರೆಸಿಕೊಳ್ಳುವ ರೈತನ ಬೆನ್ನು ಮೂಳೆಯನ್ನೇ ಮುರಿಯುವ ಕೆಲಸವನ್ನು ಎಲ್ಲ ಸರ್ಕಾರಗಳು ಮಾಡಿಕೊಂಡು ಬರುತ್ತಿವೆ ಎಂದು ಜೆಡಿಎಸ್ ಹಿರಿಯ ಮುಖಂಡ ಸಿಂ.ಲಿಂ.ನಾಗರಾಜು ವಿಷಾದಿಸಿದರು.

ಪಟ್ಟಣದ ಗಾಂಧಿ ಭವನದಲ್ಲಿ ಕರ್ನಾಟಕ ರಾಜ್ಯ ಕೃಷಿ ಉತ್ಪಾದಕರ ರೈತ ಸಂಘದ ವತಿಯಿಂದ ಶುಕ್ರವಾರ ಹಮ್ಮಿಕೊಂಡಿದ್ದ ರೈತರಿಂದ ಬಳಕೆದಾರರಿಗೆ ಆಹಾರ ಪದಾರ್ಥಗಳ ನೇರ ಮಾರಾಟ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ರೈತರ ಸಮಸ್ಯೆಯನ್ನು ಸರಿಪಡಿಸುವ ಕೆಲಸವನ್ನು ಯಾವ ಸರ್ಕಾರಗಳೂ ಮಾಡುತ್ತಿಲ್ಲ. ಇದು ಬೇಸರದ
ಸಂಗತಿ. ರೈತನನ್ನು ಕೇವಲ ಭಾಷಣಗಳಿಗೆ ಮಾತ್ರ ಸೀಮಿತಗೊಳಿಸಲಾಗಿದೆ. ರೈತನ ಸಮಸ್ಯೆಗಳನ್ನು ಅರ್ಥ ಮಾಡಿಕೊಂಡು ಆತನ ಬೆಂಬಲಕ್ಕೆ ನಿಲ್ಲಬೇಕಿರುವುದು ಸರ್ಕಾರ ಹಾಗೂ ಅಧಿಕಾರಿಗಳ ಕರ್ತವ್ಯ ಎಂದರು.

ADVERTISEMENT

1980ರ ದಶಕದಲ್ಲಿ ಸ್ಥಾಪನೆಗೊಂಡ ರೈತ ಸಂಘ ಇತ್ತೀಚಿನ ದಿನಗಳಲ್ಲಿ ಹರಿದು ಹಂಚಿ ಹೋಗಿರುವುದು ರೈತ ನಾಯಕ ಪ್ರೊ. ನಂಜುಂಡಸ್ವಾಮಿಯವರಿಗೆ ಮಾಡಿರುವ ಅಪಮಾನವಾಗಿದೆ ಎಂದರೆ ತಪ್ಪಾಗಲಾರದು. ರೈತರ ಅಭಿವೃದ್ಧಿ ದೃಷ್ಟಿಯಿಂದ ಅಸ್ತಿತ್ವಕ್ಕೆ ಬಂದ ರೈತಸಂಘ ಮುಂದಾದರೂ ಒಮದಾಗಿ ರೈತರ ಏಳಿಗೆಗೆ ದುಡಿಯಲಿ ಎಂಬ ಆಶಯ ವ್ಯಕ್ತಪಡಿಸಿದರು.

ರೈತಸಂಘದ ರಾಜ್ಯ ಮಹಿಳಾ ಘಟಕದ ಉಪಾಧ್ಯಕ್ಷೆ ಅನುಸೂಯಮ್ಮ ಮಾತನಾಡಿ, ರೈತರು ಇಂದು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ದಿನಕಳೆದಂತೆ ರೈತರ ಸಮಸ್ಯೆಗಳು ಹೆಚ್ಚಾಗುತ್ತಿವೆಯೇ ಹೊರತು ಕಡಿಮೆ
ಯಾಗುತ್ತಿಲ್ಲ. ಇಷ್ಟಿದ್ದರೂ ಅದನ್ನು ಪರಿಹಾರ ಮಾಡಲು ಸರ್ಕಾರಗಳಾಗಲಿ, ಅಧಿಕಾರಿಗಳಾಗಲಿ ಮುಂದಾಗುತ್ತಿಲ್ಲ. ಮುಂದಿನ ದಿನಗಳಲ್ಲಿ ರೈತರು ಸಾಕಷ್ಟು ಸಮಸ್ಯೆಗಳನ್ನು ಎದುರಿಸುವಂತಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ರೈತರು ಎಚ್ಚೆತ್ತುಕೊಳ್ಳುವ ಅವಶ್ಯಕತೆ ಇದೆ ಎಂದರು.

ರೈತರಿಂದ ಬಳಕೆದಾರರಿಗೆ ಯಾವುದೇ ಮಧ್ಯವರ್ತಿಗಳಿಲ್ಲದೆ ನೇರ ಮಾರಾಟ ಹಮ್ಮಿಕೊಳ್ಳಲಾಗಿತ್ತು. ರಾಗಿ, ಅಕ್ಕಿ, ಸಿರಿಧಾನ್ಯಗಳನ್ನು ನೇರ ಮಾರಾಟ ಮಾಡಲಾಯಿತು. ಇದರ ಜೊತೆಗೆ ಬಿತ್ತನೆ ಬೀಜಗಳನ್ನು ಸಹ ಹಂಚಲಾಯಿತು.

ರೈತ ಸಂಘದ ಮುಖಂಡರಾದ ಸುಜೀವನ್ ಕುಮಾರ್, ಸಂಪತ್ ಕುಮಾರ್, ಪುರಂದಯ್ಯ, ಜಗದೀಶ್ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.