ADVERTISEMENT

ವಿನಾಶದತ್ತ ಸಾಗಿದ ವೀರಗಲ್ಲುಗಳು: ಆತಂಕ

ಸಂರಕ್ಷಣೆಗೆ ತಾಲ್ಲೂಕು ಆಡಳಿತ ಮುಂದಾಗಲಿ– ಸಂಶೋಧನಾ ವಿದ್ಯಾರ್ಥಿನಿ ಸುಜಾತಾ ಸರ್ಕಾರಕ್ಕೆ ಮನವಿ

​ಪ್ರಜಾವಾಣಿ ವಾರ್ತೆ
Published 22 ಮೇ 2017, 7:45 IST
Last Updated 22 ಮೇ 2017, 7:45 IST

ಮಾಗಡಿ: ವೀರಗಲ್ಲುಗಳನ್ನು ರಕ್ಷಿಸಲು ತಾಲ್ಲೂಕು ಆಡಳಿತ ಮುಂದಾಗಬೇಕು ಎಂದು ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಸ್ನಾತಕೋತ್ತರ ಸಂಶೋಧನಾ ವಿದ್ಯಾರ್ಥಿ ಸುಜಾತಾ ತಿಳಿಸಿದರು.

ತಾಲ್ಲೂಕು ಸುಗ್ಗನ ಹಳ್ಳಿ ಮತ್ತು ಹೊನ್ನಾಪುರ ಗ್ರಾಮಗಳಲ್ಲಿ ಕ್ಷೇತ್ರ ಕಾರ್ಯ ನಡೆಸುತ್ತಿದ್ದಾಗ 10 ಅವಿಸ್ಮರಣೀಯ ವೀರಗಲ್ಲುಗಳನ್ನು ಪತ್ತೆ ಕುರಿತು   ಸುದ್ದಿಗಾರರ ಜೊತೆಗೆ ಅವರು ಮಾತನಾಡಿದರು.

ಮಾಗಡಿ ಸೀಮೆಯ ಕದನ ಕಲಿಗಳ ಸಾಹಸ  ಘಟನೆಗಳನ್ನು ನೆನಪಿಸುವ ವೀರಗಲ್ಲುಗಳು ರಕ್ಷಣೆ ಇಲ್ಲದೆ ವಿನಾಶದತ್ತ ಸಾಗಿವೆ. ನಮ್ಮ ಪೂರ್ವಿಕರು ಜೀವದ ಹಂಗು ತೊರೆದು ಹೋರಾಡಿ ಸಾಹಸ ಮೆರೆದು ಊರಿಗೆ ಉಪಕಾರಿ ಯಾಗಿರುವ ಸಾರ್ವತ್ರಿಕ ಸತ್ಯವನ್ನು ಸೂರ್ಯಚಂದ್ರರು ಇರುವ ತನಕ ಸಾರುತ್ತಿರುವ ವೀರಗಲ್ಲುಗಳು ಇಂದಿನ ಮತ್ತು ಮುಂದಿನ ಯುವಜನತೆಗೆ ಸ್ಫೂರ್ತಿಯಾಗಲಿವೆ ಎಂದು ಅವರು ಅಭಿಪ್ರಾಯಪಟ್ಟರು.

ವಿಜಯನಗರ ಸಾಮ್ರಾಜ್ಯದ ದೊರೆ ಅಚ್ಯುತರಾಯರ ಕಾಲದಲ್ಲಿ ಕೆಂಕೆರೆ ಗ್ರಾಮ ಮಹಾಮಂಡಲವಾಗಿತ್ತು, ಸುಗ್ಗನ ಹಳ್ಳಿ, ಹೊನ್ನಾಪುರ, ಹುಲಿಕಲ್ಲು, ವಿರೂಪಾಪುರ ಗ್ರಾಮಗಳಲ್ಲಿ ಖಾಸಾ ಬೇಡರ ಪಡೆಯ ವೀರರು ಮತ್ತು ಸ್ಥಳೀಯ ಆದಿಮೂಲದ ಭೂಮಿಪುತ್ರರು ಸೇನೆಯಲ್ಲಿ ಮತ್ತು ಗ್ರಾಮಗಳ ಕೊತ್ವಾಲ ರಾಗಿ ನಿಯುಕ್ತರಾಗಿದ್ದರು.

ದುರ್ಗಮ ವಾದ ಅರಣ್ಯದಿಂದ ಗ್ರಾಮಗಳತ್ತ ನುಗ್ಗಿ ಬರುತ್ತಿದ್ದ ವನ್ಯಮೃಗಗಳನ್ನು ತಡೆದು ಬಡಿದು ಕೊಂದ ಕಾಟನಾಯಕ, ಹನುಮಣ್ಣ, ಆದಿಮೂಲದ ಕರಿಯಣ್ಣ, ಕೆಂಪೀರಯ್ಯ ಇತರರು ಹುಲಿಗಳೊಡನೆ ಹೋರಾಡಿ ಮಡಿದ ಸ್ಥಳದಲ್ಲಿ ವೀರ ಗಲ್ಲುಗಳನ್ನು ನಿರ್ಮಿಸಲಾಗಿದೆ ಎಂದು ಹೇಳಿದರು.

ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರ  ಪ್ರಚಾರದ ಮೂಲಕ ಮತಗಳಿಕೆಗೆ ಮತ್ತು ಜಾತಿ ಸಂಘಟನೆಗೆ ಸೀಮಿತವಾಗದೆ  ಮಹತ್ವದ ಚಾರಿತ್ರಿಕ ಸ್ಮಾರಕಗಳನ್ನು ಸಂರಕ್ಷಿಸಲು ಮುಂದಾಗಬೇಕಿದೆ ಎಂದು ಅಭಿಪ್ರಾಯಪಟ್ಟರು. ಸಂಶೋಧನಾ ವಿದ್ಯಾರ್ಥಿ ಪದ್ಮ, ಸುಗ್ಗನಹಳ್ಳಿ ಕೃಷ್ಣಮೂರ್ತಿ, ನರಸಿಂಹ ರಾಜು ಇತರರು ಇದ್ದರು.

ಇತಿಹಾಸ ಉಳಿಸಿ
ಆಧುನಿಕ ಯುಗದಲ್ಲಿ ಪೂರ್ವಿಕರ ಜೀವವನ್ನು ತೆತ್ತಾದರೂ, ಊರು ಉಳಿಸುವ, ಪರೋಪಕಾರಿ ಗುಣಗಳನ್ನು ನೆನಪಿಸುವ ವೀರಗಲ್ಲು ಇಂದು ವಿನಾಶದತ್ತ ಸಾಗಿವೆ. ಹುಲಿಕಲ್ಲು, ಕಣ್ಣೂರು, ಚಿಕ್ಕಹಳ್ಳಿ ಗ್ರಾಮ ಪಂಚಾಯಿತಿ ಸ್ಥಳೀಯ ಇತಿಹಾಸ ಉಳಿಸಲು ಮುಂದಾಗಬೇಕಿದೆ ಎಂದು ಸುಜಾತಾ ತಿಳಿಸಿದರು.

*
ಸ್ಥಳೀಯ ಗ್ರಾಮದ ಚರಿತ್ರೆ ಉಳಿಸಲು ಮುಂದಾಗುವಂತೆ ಆದೇಶ ನೀಡಬೇಕು ಎಂದು ಸಂಶೋಧನಾ ವಿದ್ಯಾರ್ಥಿಗಳ ತಂಡ ಸರ್ಕಾರಕ್ಕೆ ಮನವಿ ಮಾಡಿದೆ.
-ಸುಜಾತಾ,
ಸಂಶೋಧನಾ ವಿದ್ಯಾರ್ಥಿನಿ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.