ADVERTISEMENT

ವಿಮೆ ನೋಂದಣಿಗೆ ಸರ್ವರ್ ಸಮಸ್ಯೆ

ಆರ್.ಜಿತೇಂದ್ರ
Published 15 ಜುಲೈ 2017, 10:34 IST
Last Updated 15 ಜುಲೈ 2017, 10:34 IST

ರಾಮನಗರ: ಮಾವು ಬೆಳೆ ವಿಮೆಗೆ ಅರ್ಜಿ ಸಲ್ಲಿಸಲು ಶನಿವಾರ ಕಡೆಯ ದಿನವಾಗಿದೆ. ಆದರೆ ಸರ್ವರ್ ಸಮಸ್ಯೆಯಿಂದಾಗಿ ಇನ್ನೂ ಸಾಕಷ್ಟು ರೈತರು ವಿಮೆಗೆ ನೋಂದಾಯಿಸಿಲ್ಲ. ಕೇಂದ್ರ ಸರ್ಕಾರದ ಫಸಲ್‌ ಬಿಮಾ (ವಿಮಾ) ಯೋಜನೆಯ ಅಡಿ ಕೃಷಿ ಹಾಗೂ ತೋಟಗಾರಿಕೆ ಬೆಳೆಗಳಿಗೆ ಈ ಮುಂಗಾರು ಹಂಗಾಮಿನಲ್ಲಿ ವಿಮೆ ಸೌಲಭ್ಯ ಕಲ್ಪಿಸಲಾಗುತ್ತಿದೆ.

ಉಳಿದ ಬೆಳೆಗಳ ನೋಂದಣಿಗೆ ಇನ್ನೂ 10–15 ದಿನ ಅವಕಾಶ ಇದೆ. ಆದರೆ ಮಾವು ಬೆಳೆಗೆ ಇದೇ 15 ಕಡೆಯ ದಿನವಾಗಿದೆ. ಬೆಳೆ ಸಾಲ ಪಡೆದಿರುವ ರೈತರಿಗೆ ಆಯಾ ಬ್ಯಾಂಕುಗಳೇ ಕಡ್ಡಾಯವಾಗಿ ವಿಮೆ ಅರ್ಜಿ ಹಾಕಿಸುತ್ತಿವೆ. ಆದರೆ ಸ್ವಯಂ ಪ್ರೇರಿತರಾಗಿ ವಿಮೆಗೆ ಮುಂದಾಗುವವರಿಗೆ ಹಲವು ತೊಡಕುಗಳು ಎದುರಾಗಿವೆ.

ರಾಜ್ಯದಾದ್ಯಂತ ಸತತ ಬರಗಾಲದಿಂದಾಗಿ ರೈತರು ಕಂಗೆಟ್ಟಿ ದ್ದಾರೆ. ಈ ಬಾರಿಯೂ ಮಳೆ ಕೈಕೊಡುವ ಲಕ್ಷಣಗಳು ಕಂಡು ಬಂದಿರುವ ಕಾರಣ ಹೆಚ್ಚು ಕೃಷಿಕರು ವಿಮೆ ಮಾಡಿಸಲು ಮುಂದಾಗಿದ್ದಾರೆ. ಆದರೆ ಗ್ರಾಮೀಣ ಭಾಗದ ಸಹಕಾರಿ ಹಾಗೂ ವಾಣಿಜ್ಯ ಬ್ಯಾಂಕ್‌ಗಳಲ್ಲಿ ರೈತರನ್ನು ಸತಾಯಿಸಲಾಗುತ್ತಿದೆ.

ADVERTISEMENT

ಸರ್ವರ್‌ ಸಮಸ್ಯೆಯ ನೆಪವೊಡ್ಡಿ ಅರ್ಜಿಯನ್ನು ಸ್ವೀಕರಿಸುತ್ತಿಲ್ಲ. ನಗರ ವ್ಯಾಪ್ತಿಯ ಕೆಲವು ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಖಾತೆ ಹೊಂದಿದ ರೈತರಿಂದ ಮಾತ್ರ ವಿಮೆ ಅರ್ಜಿ ಸ್ವೀಕರಿಸಲಾಗುತ್ತಿದೆ. ಇದರಿಂದ ಸಾಕಷ್ಟು ಸಾಕಷ್ಟು ರೈತರು ವಿಮೆ ಬಗ್ಗೆ ಆಸಕ್ತಿ ಹೊಂದಿದ್ದಾಗ್ಯೂ ಅರ್ಜಿ ಸಲ್ಲಿಸಲು ಆಗುತ್ತಿಲ್ಲ ಎಂದು ರೈತ ಮುಖಂಡರು ಆರೋಪಿಸುತ್ತಾರೆ.

ಸರ್ವರ್‌ನದ್ದೇ ಸಮಸ್ಯೆ: ಬೆಳೆ ವಿಮೆಗೆ ನೋಂದಾಯಿಸಿಕೊಳ್ಳುವ ರೈತರಿಂದ ಬ್ಯಾಂಕ್‌ಗಳು ಅರ್ಜಿ ಸ್ವೀಕರಿಸಿ, ಆನ್‌ಲೈನ್ ಮೂಲಕ ಖಾತೆ ವಿವರ  ಪರಿಶೀಲಿಸಿ, ಅಲ್ಲಿಯೇ ಸಲ್ಲಿಸಬೇಕಾಗುತ್ತದೆ. ರಾಜ್ಯ ಸರ್ಕಾರವು ಎನ್‌ಐಸಿ ಉಸ್ತುವಾರಿಯಲ್ಲಿ ಇದಕ್ಕೆಂದೇ ‘ಸಂ ರಕ್ಷಣೆ’ ಎಂಬ ವೆಬ್‌ಸೈಟ್‌ ರೂಪಿಸಿದೆ.

ಈ ವೆಬ್‌ನೊಂದಿಗೆ ರಾಜ್ಯ ಸರ್ಕಾರದ ಭೂಮಿ ತಂತ್ರಾಂಶವನ್ನು ಲಿಂಕ್‌ ಮಾಡಲಾಗಿದೆ. ಭೂಮಿಯಲ್ಲಿ ಪಹಣಿ ವಿವರ ಬಂದರೆ ಮಾತ್ರ ವಿಮೆಗೆ ಅರ್ಜಿ ಸಲ್ಲಿಸಲು ಸಾಧ್ಯವಾಗುತ್ತದೆ. ಅದರೆ ಸರ್ವರ್‌ನಲ್ಲಿನ ತೊಂದರೆಯಿಂದಾಗಿ ಸದ್ಯ ಆನ್‌ಲೈನ್ ಪಹಣಿ ಅಲಭ್ಯವಾಗಿದ್ದು, ಅರ್ಜಿ ಸಲ್ಲಿಕೆಗೆ ತೊಡಕಾಗಿದೆ.

‘ವಿಮೆ ಅರ್ಜಿ ಸಲ್ಲಿಕೆಯು ಸಂಪೂರ್ಣ ಆನ್‌ಲೈನ್‌ ಆಗಿದೆ. ಆದರೆ ಸಾಕಷ್ಟು ಸಂದರ್ಭಗಳಲ್ಲಿ ವೆಬ್‌ಸೈಟ್ ತೆರೆದುಕೊಳ್ಳುವುದಿಲ್ಲ. ಸರ್ವರ್‌ ಕೈಕೊಡುತ್ತಲೇ ಇರುತ್ತದೆ. ಸರ್ವರ್‌ ಸರಿಯಿದ್ದಾಗ ಮಾತ್ರ ಅರ್ಜಿ ಅಪ್‌ಲೋಡ್ ಮಾಡಬೇಕಾಗುತ್ತದೆ’ ಎಂದು ಬ್ಯಾಂಕ್‌ವೊಂದರ ಸಿಬ್ಬಂದಿ ಹೇಳುತ್ತಾರೆ.

ಅರ್ಜಿ ಖಾಲಿ: ‘ಬ್ಯಾಂಕುಗಳಿಗೆ ತೆರಳುವ ರೈತರಿಗೆ ಅರ್ಜಿ ಖಾಲಿ ಎಂಬ ಉತ್ತರಗಳು ಸಿಗುತ್ತಿವೆ. ಸಂಬಂಧಿಸಿದ ಇಲಾಖೆಗಳಿಂದಲೇ ಅರ್ಜಿ ಪಡೆಯಲು ಸೂಚಿಸಲಾಗುತ್ತಿದೆ. ಹೀಗಾಗಿ ರೈತರು ಕೇವಲ ಅರ್ಜಿಗಾಗಿ ಸರ್ಕಾರಿಗಳ ಕಚೇರಿಗಳ ಮೆಟ್ಟಿಲು ತುಳಿಯಬೇಕಿದೆ’ ಎಂದು ಅರೇ ಹಳ್ಳಿಯ ರೈತ ತ್ರಿಮೂರ್ತಿ ಆರೋಪಿಸುತ್ತಾರೆ.
ಪರಿಹಾರ ಏನು: ಸರ್ವರ್ ಸಮಸ್ಯೆ, ಬ್ಯಾಂಕ್‌ಗಳು ಅರ್ಜಿ ಸ್ವೀಕರಿಸದಿರುವ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಲೀಡ್‌ ಬ್ಯಾಂಕ್ ಅಧಿಕಾರಿ ರವೀಂದ್ರ ‘ಪ್ರತಿ ಬ್ಯಾಂಕ್‌ ಕೂಡ ಕಡ್ಡಾಯವಾಗಿ ಬೆಳೆ ವಿಮೆ ಅರ್ಜಿ ಪಡೆಯಬೇಕು. ಅದಕ್ಕೆ ನಿರಾಕರಿಸುವ ಸಿಬ್ಬಂದಿ ವಿರುದ್ಧ ಕ್ರಮ ಜರುಗಿಸಲಾಗುವುದು’  ಎಂದರು.

‘ಮಾವು ಬೆಳೆ ವಿಮೆ ಕಂತು ಪಾವತಿಗೆ ನಾಳೆಯೇ ಕಡೆಯ ದಿನ. ಸರ್ವರ್‌ನ ಸಮಸ್ಯೆ ನಮ್ಮ ಗಮನಕ್ಕೂ ಬಂದಿದೆ. ಒಂದು ವೇಳೆ ವೆಬ್‌ಸೈಟ್‌ನ ಸಮಸ್ಯೆ ಇದ್ದಲ್ಲಿ ರೈತರಿಂದ ಅರ್ಜಿ ಮತ್ತು ವಿಮೆ ಕಂತಿನ ಹಣ ಪಡೆಯಬಹುದು. ವೆಬ್‌ಸೈಟಿಗೆ ಅರ್ಜಿ ಅಪ್‌ಲೋಡ್‌ ಮಾಡ ಲು ಅಲ್ಲಿಂದ ಒಂದು ವಾರದತನಕ ಅವಕಾಶ ಇರುತ್ತದೆ’ ಎಂದು ಅವರು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.