ADVERTISEMENT

‘ವೀರಶೈವ ಲಿಂಗಾಯತ ಸಮುದಾಯ ಸಮಾಜದ ಪ್ರಗತಿಗೆ ದುಡಿಯಲಿ’

​ಪ್ರಜಾವಾಣಿ ವಾರ್ತೆ
Published 24 ಜುಲೈ 2017, 9:35 IST
Last Updated 24 ಜುಲೈ 2017, 9:35 IST

ಚನ್ನಪಟ್ಟಣ: ವೀರಶೈವ ಲಿಂಗಾಯತ ಸಮುದಾಯವು ಸಮಾಜದ ಪ್ರಗತಿಗೆ ದುಡಿಯಲು ಮುಂದಾಗಬೇಕು ಎಂದು ಕನಕಪುರ ಮರಳೇಗವಿ ಮಠದ ಮುಮ್ಮುಡಿ ಶಿವರುದ್ರಸ್ವಾಮಿ ಸಲಹೆ ನೀಡಿದರು.

ಪಟ್ಟಣದಲ್ಲಿ ಈಚೆಗೆ ವಿಶ್ವ ವೀರಶೈವ ಲಿಂಗಾಯತ ಒಕ್ಕೂಟದ ತಾಲ್ಲೂಕು ಘಟಕವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸಮುದಾಯವು ಯಾವುದೇ ಭಿನ್ನಾಭಿಪ್ರಾಯಕ್ಕೆ ಒಳಗಾಗದೆ ಒಗ್ಗಟ್ಟಿನಿಂದ ದುಡಿಯಬೇಕು. ಸಮುದಾಯದ ಪ್ರಗತಿಯ ಜೊತೆಗೆ ಸಮಾಜದ ಪ್ರಗತಿಯೂ ಆಗಬೇಕು. ಇದರ ಜೊತೆಗೆ ಧರ್ಮವನ್ನೂ ಬೆಳೆಸಬೇಕು ಎಂದರು.

ADVERTISEMENT

ಶಾಸಕ ಸಿ.ಪಿ.ಯೋಗೇಶ್ವರ್ ಮಾತನಾಡಿ, ಸಮಾಜಮುಖಿ ಹಾಗೂ ಧರ್ಮದ ಕಾರ್ಯದಲ್ಲಿ ವೀರಶೈವ ಸಮಾಜದ ಕೊಡುಗೆ ಅಪಾರ. ಸಮಾಜದ ಆಗುಹೋಗುಗಳನ್ನು ಸರಿಪಡಿಸುವಲ್ಲಿ ಧರ್ಮದ ಪಾತ್ರ ಮುಖ್ಯವಾದುದು ಎಂದರು.

ಎಲ್ಲರೂ ಧರ್ಮದ ನೆಲೆಯಲ್ಲಿಯೇ ಮುಂದುವರೆಯಬೇಕು. ವಿಶ್ವ ವೀರಶೈವ ಲಿಂಗಾಯತ ಒಕ್ಕೂಟವು ಸಮಾಜದ ಶ್ರೇಯೋಭಿವೃದ್ಧಿಗೆ ದುಡಿಯಲಿ ಎಂದು ಆಶಿಸಿದರು.

ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಬಸವರಾಜು ಸಂಘದ ಜವಾಬ್ದಾರಿಗಳನ್ನು ವಿವರಿಸಿದರು. ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ಬೇವೂರು ಮಠದ ಶಿವಾಚಾರ್ಯ ಸ್ವಾಮೀಜಿ, ವಿರಕ್ತ ಮಠದ ಶಿವರುದ್ರ ಸ್ವಾಮೀಜಿ, ಗುರುವಿನಪುರ ಮಠದ ಜಗದೀಶಾಚಾರ್ಯ ಸ್ವಾಮೀಜಿ, ಸಂಘಟನೆ ಸಂಸ್ಥಾಪಕ ಜ್ಯೋತಿ ಪ್ರಕಾಶ್ ಮಿರ್ಜಿ, ವೀರಶೈವ ಸಮಾಜದ ಮುಖಂಡರಾದ ನಂಜಪ್ಪ, ಕೆ.ಎಸ್.ಮಂಜುನಾಥ್, ಸಿದ್ದಲಿಂಗಸ್ವಾಮಿ  ಭಾಗವಹಿಸಿದ್ದರು. ವೀರಶೈವ ಸಮಾಜದ ರುದ್ರಮಾದಪ್ಪ ಸ್ವಾಗತಿಸಿದರು. ಮಹೇಶ್ ನಿರೂಪಿಸಿದರು. ಸಂಘದ ಕಾರ್ಯದರ್ಶಿ ಬಸಪ್ಪ ವಂದಿಸಿದರು.

*
ಸಂಘ ಸಂಸ್ಥೆಗಳನ್ನು ಸ್ಥಾಪಿಸುವುದು ಮುಖ್ಯವಲ್ಲ. ಅದನ್ನು ಸಮಾಜದ ಪ್ರಗತಿಗೆ ಬಳಸಿಕೊಳ್ಳಬೇಕು.
–ಮುಮ್ಮುಡಿ ಶಿವರುದ್ರಸ್ವಾಮಿ,
ಕನಕಪುರ ಮರಳೇಗವಿ ಮಠ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.