ADVERTISEMENT

ವೈಭವದ ರಂಗನಾಥಸ್ವಾಮಿ ಬ್ರಹ್ಮರಥೋತ್ಸವ

ವಿವಿಧ ಅರವಟಿಗೆಗಳಲ್ಲಿ ದಾಸೋಹ –ರಸಾಯನ, ತಿಳಿ ಮಜ್ಜಿಗೆ, ಪಾನಕ ವಿತರಣೆ

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2017, 6:18 IST
Last Updated 10 ಏಪ್ರಿಲ್ 2017, 6:18 IST
ಮಾಗಡಿಯ ತಿರುವೆಂಗಳನಾಥ ರಂಗನಾಥಸ್ವಾಮಿ  ಬ್ರಹ್ಮರಥೋತ್ಸವ ಭಾನುವಾರ ಸಡಗರ ಸಂಭ್ರಮದಿಂದ ನಡೆಯಿತು.
ಮಾಗಡಿಯ ತಿರುವೆಂಗಳನಾಥ ರಂಗನಾಥಸ್ವಾಮಿ ಬ್ರಹ್ಮರಥೋತ್ಸವ ಭಾನುವಾರ ಸಡಗರ ಸಂಭ್ರಮದಿಂದ ನಡೆಯಿತು.   

ಮಾಗಡಿ: ತಿರುಮಲೆ ತಿರುವೆಂಗಳನಾಥ ರಂಗನಾಥಸ್ವಾಮಿ ಜಾತ್ರಾ ಮಹೋತ್ಸವದ ಅಂಗವಾಗಿ ಭಾನುವಾರ ಬೆಳಿಗ್ಗೆ ಬ್ರಹ್ಮರಥೋತ್ಸವ ಭಕ್ತರ ಗೋವಿಂದ ಗೋವಿಂದ ನಾಮಸ್ಮರಣೆಯೊಂದಿಗೆ ವೈಭವದಿಂದ ನಡೆಯಿತು.

ತಹಶೀಲ್ದಾರ್‌  ಎನ್‌. ಲಕ್ಷ್ಮೀಚಂದ್ರ ಯಾತ್ರಾದಾನ ಸೇವೆ ಸಲ್ಲಿಸಿದರು. ಸಹಸ್ರಾರು ಜನ ಭಕ್ತಾದಿಗಳು ಉರಿ ಬಿಸಿಲನ್ನು ಲೆಕ್ಕಿಸದೆ ಕಾದು ನಿಂತು ರಥವನ್ನು ಎಳೆದು ಭಕ್ತಿ ಸಮರ್ಪಿಸಿದರು.

ರಥ ಬೀದಿಯ ಸುತ್ತಲಿನ ಅರವಟಿಗೆಗಳಿಗೆ ಅಲಂಕೃತ ರಂಗನಾಥಸ್ವಾಮಿ ಉತ್ಸವ ಮೂರ್ತಿಯನ್ನು ಮಂಗಳ ವಾದ್ಯದೊಂದಿಗೆ ಹೊತ್ತುಕೊಂಡು ಹೋದ ಶ್ರೀಪಾದ ಕಾವಲುಗಾರರು ಪೂಜೆ ಸ್ವೀಕರಿಸಿ ರಥ ಮಂಟಪದಲ್ಲಿಟ್ಟರು. ಅಲಂಕೃತ ರಂಗನಾಥಸ್ವಾಮಿ ಶ್ರೀದೇವಿ ಭೂದೇವಿ ಸಹಿತ ಉತ್ಸವಮೂರ್ತಿಗಳನ್ನು  ವಿವಿಧ ಹೂವುಗಳಿಂದ ಅಲಂಕೃತವಾಗಿದ್ದ ರಥದ ಮೇಲಿಟ್ಟು ಪೂಜಿಸಲಾಯಿತು.

ಜೆಡಿಎಸ್‌ ವರಿಷ್ಠ ಎಚ್‌.ಡಿ. ದೇವೇಗೌಡ, ಶಿರಾ ತಾಲ್ಲೂಕು ಪಟ್ಟನಾಯಕನ ಹಳ್ಳಿ ಗುರುಗುಂಡ ಬ್ರಹ್ಮೇಶ್ವರ ಸ್ವಾಮಿ ಮಠಾಧೀಶ  ನಂಜಾವಧೂತ ಸ್ವಾಮಿ, ಆದಿಚುಂಚನಗಿರಿ ವಿಜಯನಗರ ಶಾಖಾ ಮಠಾಧೀಶ ಸೌಮ್ಯನಾಥ ಸ್ವಾಮಿ, ವಿಶ್ವ ಒಕ್ಕಲಿಗರ ಮಠದ ಕುಮಾರ ಚಂದ್ರಶೇಖರನಾಥ ಸ್ವಾಮಿ, ವಿಧಾನ ಪರಿಷತ್‌ ಸದಸ್ಯ ಎಚ್‌.ಎಂ.ರೇವಣ್ಣ, ಶಾಸಕ ಎಚ್‌.ಸಿ.ಬಾಲಕೃಷ್ಣ, ಕೆಂಪೇಗೌಡ ಅಭಿವೃದ್ಧಿ ಸಮಿತಿ ಅಧ್ಯಕ್ಷ ಎಚ್‌.ಎಂ. ಕೃಷ್ಣಮೂರ್ತಿ,

ಜಿಲ್ಲಾ ಪಂಚಾಯಿತಿ ಸದಸ್ಯರಾದ ಚಂದ್ರಮ್ಮ ನಂಜಯ್ಯ, ಎ.ಮಂಜುನಾಥ, ನಾಗರತ್ನಮ್ಮ ಚಂದ್ರೇಗೌಡ , ಪುರಸಭೆಯ ಅಧ್ಯಕ್ಷೆ ಹೊಂಬಮ್ಮ, ಉಪಾಧ್ಯಕ್ಷೆ ನಿರ್ಮಲ ಸೀತಾರಾಮ್‌, ಮಾಗಡಿ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಎಂ,ಎನ್‌. ಮಂಜುನಾಥ, ಸಮಾಜಸೇವಕ ಕೆ.ಬಾಗೇಗೌಡ,

ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಪೂಜಾರಿ ಪಾಳ್ಯ ಕೃಷ್ಣಮೂರ್ತಿ, ರಾಜ್ಯ ಬೆಸ್ಕಾಂ ನಿರ್ದೇಶಕ ಬಿ.ವಿ.ಜಯರಾಮು, ಡಿವೈಎಸ್‌ಪಿ ಲಕ್ಷ್ಮಿಗಣೇಶ್‌, ಸಿಪಿಐ ಎಚ್‌.ಎಲ್‌. ನಂದೀಶ್‌, ಬಾಲಾಜಿ ರಂಗನಾಥ್‌, ಶ್ರೀರಂಗ ಸೇವಾ ಟ್ರಸ್ಟಿನ ಅಧ್ಯಕ್ಷ ಟಿ.ಎಸ್‌.ಸತೀಶ್‌ ಇತರರು ರಥೋತ್ಸವಕ್ಕೆ ಪೂಜೆ ಸಲ್ಲಿಸಿ ರಥವನ್ನು ಭಕ್ತರೊಂದಿಗೆ ಎಳೆದರು.

ರಥ ಬೀದಿಯಲ್ಲಿ ಹತ್ತಾರು ಸಹಸ್ರ ಭಕ್ತಾದಿಗಳು ಹಲಸಿನ ಹಣ್ಣಿನ ರಸಾಯನ, ತಿಳಿ ಮಜ್ಜಿಗೆ ಪಾನಕ, ಹೆಸರು ಬೇಳೆ ವಿತರಿಸಿದರು. ನವ ವಿವಾಹಿತ ದಂಪತಿ ರಥದ ಮೇಲೆ ಬಾಳೆ ಹಣ್ಣಿಗೆ ದವನ ಸಿಕ್ಕಿಸಿ ಎಸೆದು ಭಕ್ತಿ ಸಮರ್ಪಿಸಿದರು. 

ಪಿಎಸ್‌ಐ ಮಂಜುನಾಥ್‌, ರವಿ ನೇತೃತ್ವದಲ್ಲಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.  ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ವೀರಪ್ಪ, ಎಚ್.ವಿ. ಆರ್.ಜಗದೀಶ್, ಎಚ್‌.ಜೆ. ಪುರುಷೋತ್ತಮ್‌, ಭೈರಪ್ಪ,  ಹೊಸಪೇಟೆ ಕಿಟ್ಟಿ, ಗೋವಿಂದಪ್ಪ ಮಕ್ಕಳು, ಗುತ್ತಿಗೆದಾರರಾದ  ಶಂಕರ್‌, ಮಂಜುಳಕೆಂಪರಾಜು ಪುಳಿಯೋಗರೆ, ಲಾಡು ವಿತರಿಸಿದರು.

ಕಾಕತಾಳೀಯ: ಭಕ್ತರ ನಂಬಿಕೆಗೆ ಅನುಗುಣವಾಗಿ ರಥೋತ್ಸವಕ್ಕೆ ಮೊದಲು ಗರುಡ ಪಕ್ಷಿಯೊಂದು ರಥದ ಮೇಲೆ ಮೂರು ಸುತ್ತು ಹಾಕಿ ಕಣ್ಮರೆಯಾಯಿತು. ಭಕ್ತಾದಿಗಳು ಗರುಡನಿಗೂ ಜೈಕಾರ ಹಾಕಿ ನಮಸ್ಕರಿಸಿದರು.

ಜಾಗಟೆ, ಭವನಾಸಿ, ರಾಮ ಕಹಳೆಯೊಂದಿಗೆ ಬಂದಿದ್ದ ದಾಸಯ್ಯಗಳು ರಥಬೀದಿಯಲ್ಲಿ ನೆಲದ ಮೇಲೆ ಸೆಗಣಿಯಿಂದ ಬಳಿದು ರಸಾಯನ ಇಟ್ಟು ಪೂಜಿಸಿ ಹರಿದಾಸ ಸೇವೆ ಸಲ್ಲಿಸಿದರು.

ಶ್ರೀರಂಗಸೇವಾ ಟ್ರಸ್ಟಿನ ವತಿಯಿಂದ ನೀಡಿದ ರಂಗನಾಥ ಸ್ವಾಮಿ ಕ್ಯಾಲೆಂಡರ್‌ಗಳನ್ನು ಭಕ್ತರೆಲ್ಲರಿಗೂ ಜಿಲ್ಲಾ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಹೊಸಪೇಟೆ ಶಂಕರ್‌ ವಿತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.