ADVERTISEMENT

ವ್ಯರ್ಥವಾಗುತ್ತಿರುವ ಕಣ್ವ ಜಲಾಶಯದ ನೀರು !

ಮೂರ್ನಾಲ್ಕು ಗ್ರಾಮಗಳಿಗೆ ಮಾತ್ರ ನೀರು

​ಪ್ರಜಾವಾಣಿ ವಾರ್ತೆ
Published 14 ಏಪ್ರಿಲ್ 2017, 9:01 IST
Last Updated 14 ಏಪ್ರಿಲ್ 2017, 9:01 IST
ಕಾಲುವೆ ಸುಸ್ಥಿತಿಯಲ್ಲಿ ಇಲ್ಲದ ಕಾರಣ ನೀರು ವ್ಯರ್ಥವಾಗಿ ತೋಟವೊಂದಕ್ಕೆ ನುಗ್ಗಿರುವುದು
ಕಾಲುವೆ ಸುಸ್ಥಿತಿಯಲ್ಲಿ ಇಲ್ಲದ ಕಾರಣ ನೀರು ವ್ಯರ್ಥವಾಗಿ ತೋಟವೊಂದಕ್ಕೆ ನುಗ್ಗಿರುವುದು   

ಚನ್ನಪಟ್ಟಣ: ತಾಲ್ಲೂಕಿನ ಹಲವು ಗ್ರಾಮಗಳಲ್ಲಿ ಜನ ಜನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗಿರುವ ಹಿನ್ನಲೆಯಲ್ಲಿ ಕಣ್ವ ಜಲಾಶಯದಿಂದ ಕಾಲುವೆ ಮೂಲಕ ನೀರು ಬಿಡಲಾಗಿದ್ದು, ನೀರು ಕಾಲುವೆಯಲ್ಲಿ ಹರಿಯದೆ ಹೊಲಗದ್ದೆಗಳಿಗೆ ನುಗ್ಗಿ ವ್ಯರ್ಥವಾಗುತ್ತಿದೆ.

ಕಾವೇರಿ ಅಚ್ಚುಕಟ್ಟು ಅಭಿವೃದ್ಧಿ ಪ್ರಾಧಿಕಾರವು ಜಲಾಶಯದಿಂದ 61.99 ಎಂಸಿಎಫ್ಟಿ ನೀರನ್ನು ಅವಶ್ಯಕತೆಗೆ ಅನುಗುಣವಾಗಿ ಬಳಸಿಕೊಳ್ಳಲು ನೀರಾವರಿ ಸಲಹಾ ಸಮಿತಿಯ ಸಭೆಯಲ್ಲಿ ಅನುಮೋದನೆ ನೀಡಿದ್ದು, ಅದರನ್ವಯ ಅಧಿಕಾರಿಗಳು ತೂಬುಗಳ ಮೂಲಕ ಜಲಾಶಯದಿಂದ ಕಾಲುವೆಗೆ ನೀರು ಹರಿಸಿದ್ದಾರೆ. ಆದರೆ ಹಲವಾರು ವರ್ಷಗಳಿಂದ ಕಾಲುವೆಗಳನ್ನು ನಿರ್ವಹಣೆ ಮಾಡದ ಕಾರಣ ಕಾಲುವೆಗಳು ದುಸ್ಥಿತಿಗೆ ತಲುಪಿದ್ದು, ನೀರು ಸಿಕ್ಕ ಸಿಕ್ಕ ಕಡೆಗಳಲ್ಲಿ ಹರಿದು ಅಕ್ಕಪಕ್ಕದ ಹೊಲ ಗದ್ದೆಗಳಿಗೆ ನುಗ್ಗುತ್ತಿದೆ.

ಜಲಾಶಯದಿಂದ ನೀರನ್ನು ಕಾಲುವೆ ಮೂಲಕ ಹರಿಸುತ್ತಿರುವುದರಿಂದ ಯಾವುದೇ ಪ್ರಯೋಜನವಾಗುತ್ತಿಲ್ಲ. ಇದರಿಂದ ಕೆಳಭಾಗದ ಮೂರ್ನಾಲ್ಕು ಗ್ರಾಮಗಳ ಬಳಿಗೆ ಮಾತ್ರ ನೀರು ತಲುಪುತ್ತದೆ. ಇದರಿಂದ ನೀರಿನ ಸಮಸ್ಯೆ ದೂರವಾಗುವುದಿಲ್ಲ ಎಂಬುದು ಈ ಭಾಗದ ಗ್ರಾಮಸ್ಥರ ಆರೋಪವಾಗಿದೆ.

ಜಲಾಶಯದಲ್ಲಿ ಈಗ ಕಡಿಮೆ ಪ್ರಮಾಣದಲ್ಲಿ ನೀರಿದ್ದು, ಬೇಸಿಗೆ ಸಮಯವಾಗಿರುವುದರಿಂದ ಇರುವ ನೀರನ್ನು ಹೊರಬಿಟ್ಟರೆ ಕಾಡುಪ್ರಾಣಿಗಳು, ಜಲಚರಗಳು, ಪಕ್ಷಿಸಂಕುಲಕ್ಕೆ ತೊಂದರೆಯಾಗುತ್ತದೆ, ಮಿಗಿಲಾಗಿ ನೀರು ಸಂಪೂರ್ಣ ಖಾಲಿಯಾದರೆ ಜಲಾಶಯಕ್ಕೂ ತೊಂದರೆಯಾಗುತ್ತದೆ ಎಂಬುದು ಜನರ ಅಭಿಪ್ರಾಯವಾಗಿದೆ.

ಹಾಗೆಯೆ ಕೆಲವು ಮಂದಿ ನೀರು ಹರಿಸಿರುವ ಕ್ರಮವನ್ನು ಸ್ವಾಗತಿಸಿದ್ದು, ಕಾಲುವೆಗೆ ನೀರು ಹರಿಸುವುದರಿಂದ ನೀರು ಹರಿದು ಜಾನುವಾರುಗಳಿಗೆ ನೀರು ಲಭ್ಯವಾಗುತ್ತದೆ. ಹಾಗೆಯೇ ಮೇವಿಗೂ ತೊಂದರೆಯಾಗುವುದಿಲ್ಲ, ಸಣ್ಣ ಪುಟ್ಟ ಕಟ್ಟೆಗಳು ತುಂಬಿ ಬೇಸಿಗೆಯಲ್ಲಿ ನೀರು ಸಮಸ್ಯೆ ಪರಿಹಾರವಾಗುತ್ತದೆ. ಇರುವ ಕಾಲುವೆಯನ್ನು ಸರಿಪಡಿಸಿ ನೀರುಹರಿಸುವುದು ಒಳಿತು ಎಂದು ಅಭಿಪ್ರಾಯಪಟ್ಟಿದ್ದಾರೆ.

ಇಗ್ಗಲೂರು ದೇವೇಗೌಡ ಬ್ಯಾರೇಜ್ ನಿಂದ ಏತ ನೀರಾವರಿ ಯೋಜನೆ ಮೂಲಕ ಕಣ್ವ ಜಲಾಶಯಕ್ಕೆ ನೀರು ಹರಿಸಲಾಗಿದ್ದು, ಈ ನೀರನ್ನು ವ್ಯರ್ಥ ಮಾಡದೆ ಕಾಲುವೆಯನ್ನು ಶೀಘ್ರ ದುರಸ್ತಿ ಮಾಡಿ ಆನಂತರ ಅಧಿಕಾರಿಗಳು ನೀರು ಹರಿಸಲಿ ಎಂಬುದು ಈ ಭಾಗದ ಜನರ ಒತ್ತಾಯವಾಗಿದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.