ADVERTISEMENT

ಶಾಸಕ ಬಾಲಕೃಷ್ಣ ವಿರುದ್ಧ ಜಿಪಂ ಸದಸ್ಯೆ ಟೀಕೆ

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2017, 8:30 IST
Last Updated 12 ಏಪ್ರಿಲ್ 2017, 8:30 IST
ಮಾಗಡಿ ತಾಲ್ಲೂಕಿನ ಮಾಡಬಾಳ್‌ ಜಿಲ್ಲಾ ಪಂಚಾಯಿತಿ ಸದಸ್ಯೆ ಚಂದ್ರಮ್ಮ ನಂಜಯ್ಯ ಸುದ್ದಿಗೋಷ್ಠಿಯಲ್ಲಿ ಮಂಚನಬೆಲೆ ಜಲಾಶಯದಿಂದ 33 ಹಳ್ಳಿಗಳಿಗೆ ಕುಡಿಯುವ ನೀರು ಸರಬರಾಜು ಮಾಡಿರುವ ಕಾಮಗಾರಿಯ ದಾಖಲೆ ಪ್ರದರ್ಶಿಸಿದರು
ಮಾಗಡಿ ತಾಲ್ಲೂಕಿನ ಮಾಡಬಾಳ್‌ ಜಿಲ್ಲಾ ಪಂಚಾಯಿತಿ ಸದಸ್ಯೆ ಚಂದ್ರಮ್ಮ ನಂಜಯ್ಯ ಸುದ್ದಿಗೋಷ್ಠಿಯಲ್ಲಿ ಮಂಚನಬೆಲೆ ಜಲಾಶಯದಿಂದ 33 ಹಳ್ಳಿಗಳಿಗೆ ಕುಡಿಯುವ ನೀರು ಸರಬರಾಜು ಮಾಡಿರುವ ಕಾಮಗಾರಿಯ ದಾಖಲೆ ಪ್ರದರ್ಶಿಸಿದರು   

ಮಾಗಡಿ: ಮಂಚನಬೆಲೆ ಜಲಾಶಯಕ್ಕೆ ಭೇಟಿ ನೀಡಿದ್ದ ಶಾಸಕ ಎಚ್‌.ಸಿ.ಬಾಲಕೃಷ್ಣ ಅವರು 33 ಹಳ್ಳಿಗಳಿಗೆ ಕುಡಿಯುವ ನೀರು ಸರಬರಾಜು ಕಾಮಗಾರಿ ಮಾಡಿಸುವಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯರು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು  ಆರೋಪಿಸಿರುವುದು ಸರಿಯಲ್ಲ ಎಂದು ಜಿಲ್ಲಾ ಪಂಚಾಯಿತಿ ಸದಸ್ಯೆ ಚಂದ್ರಮ್ಮ ನಂಜಯ್ಯ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಶಾಸಕರು ನಮ್ಮ ಜೊತೆ ಜೆಡಿಎಸ್‌ನಲ್ಲಿ ಇದ್ದಾಗ ಎಲ್ಲವೂ ಸರಿಯಾಗಿತ್ತು. ಜೆಡಿಎಸ್‌ ರಾಜ್ಯ ಅಧ್ಯಕ್ಷ  ಎಚ್‌.ಡಿ.ಕುಮಾರಸ್ವಾಮಿ ಮತ್ತು ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಅವರನ್ನು ಮಾಗಡಿಗೆ ಕರೆಸಿಕೊಂಡು ಜೆಡಿಎಸ್‌ ಬಲವರ್ಧನೆಗೆ ನಾವು ಮುಂದಾಗಿದ್ದನ್ನು ಕಂಡು ಸಹಿಸಲಾರದ ಶಾಸಕರು ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ನಾವು ಜಿಲ್ಲಾ ಪಂಚಾಯಿತಿ ಸದಸ್ಯರಾಗಿ 8 ತಿಂಗಳು ಕಳೆದಿದೆ.

ಜಿಲ್ಲಾ ಪಂಚಾಯಿತಿ ವತಿಯಿಂದ 80 ಕೊಳವೆ ಬಾವಿ ಕೊರೆಸಿ, ನೀರು ಸರಬರಾಜಿಗೆ ಅನುಕೂಲ ಮಾಡಿಸಿದ್ದೇವೆ. ಜಿಲ್ಲಾ ಪಂಚಾಯಿತಿ ಅಧ್ಯಕ್ಷ ರಾಜೇಶ್‌, ಜಿಲ್ಲಾ ಪಂಚಾಯಿತಿ ಸಿಇಒ, ಅವರನ್ನು ಮಂಚನಬೆಲೆಗೆ ಕರೆಸಿಕೊಂಡು 33 ಹಳ್ಳಿಗಳಿಗೆ ಕುಡಿಯುವ ನೀರು ಸರಬರಾಜು ಕಾಮಗಾರಿಯ ಮುಂದುವರೆದ ಕಾಮಗಾರಿಗೆ ₹60ಲಕ್ಷ ಮಂಜೂರಾಗಿದೆ. ಟೆಂಡರ್‌ ಸಹ ಕರೆಯಲಾಗಿದೆ.

₹3ಲಕ್ಷ ಸ್ವಂತ ಹಣ ಖರ್ಚು ಮಾಡಿ ನೀರು ಸರಬರಾಜು ಮಾಡುವ ಸಿಬ್ಬಂದಿಗೆ ವೇತನ ನೀಡಿದ್ದೇವೆ. ಅತ್ತಿಂಗೆರೆ ಮತ್ತು ಉಡುವೆಗೆರೆ ಗ್ರಾಮಗಳಿಗೆ ₹1.90 ಲಕ್ಷ ವೆಚ್ಚದಲ್ಲಿ ಕುಡಿಯುವ ನೀರು ಸರಬರಾಜು ಕಾಮಗಾರಿ ನಡೆಯುತ್ತಿದೆ’ ಎಂದರು.

‘ಎಚ್‌.ಡಿ.ಕುಮಾರಸ್ವಾಮಿ ಅವರು ನಮ್ಮ ಮನೆಗೆ ಭೇಟಿ ನೀಡಿದುದು ಶಾಸಕ ಎಚ್‌.ಸಿ.ಬಾಲಕೃಷ್ಣ ಅವರ ಕೆಂಗಣ್ಣಿಗೆ ಗುರಿಯಾಗಿದೆ. ಎಚ್‌.ಸಿ.ಬಾಲಕೃಷ್ಣ ಅವರು 4 ಬಾರಿ ಶಾಸಕರಾಗಿದ್ದವರು. ತಾಲ್ಲೂಕಿನ ಹಳ್ಳಿಗಳಿಗೆ ಕುಡಿಯುವ ನೀರು ಸರಬರಾಜು ಮಾಡಿಸಿಲ್ಲ ಎಂದು ನಮ್ಮನ್ನು ದೂರುವುದಾದರೆ, ಶಾಸಕರಾಗಿ 20 ವರ್ಷಗಳಿಂದ ತಾವೇನು ಮಾಡಿದ್ದೀರಿ? ಎಂದು ಮತದಾರರು ಕೇಳುವ ಕಾಲ ಬರಲಿದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT