ADVERTISEMENT

ಶಿವಲಿಂಗ ತಯಾರಿಕೆಯೇ ಇವರ ಬದುಕು

ಶಿವರಾತ್ರಿಗೆ ಎಲ್ಲೆಡೆ ಸಂಭ್ರಮದ ಸಿದ್ಧತೆ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2017, 5:44 IST
Last Updated 24 ಫೆಬ್ರುವರಿ 2017, 5:44 IST
ರಾಮನಗರ ತಾಲ್ಲೂಕಿನ ಕೈಲಾಂಚ ಹೋಬಳಿಯ ವಿಭೂತಿಕೆರೆ ಗ್ರಾಮದಲ್ಲಿ ಶಿವಲಿಂಗ ತಯಾರಿಕೆಯಲ್ಲಿ ತೊಡಗಿರುವ ಶಿವಾನಂದ
ರಾಮನಗರ ತಾಲ್ಲೂಕಿನ ಕೈಲಾಂಚ ಹೋಬಳಿಯ ವಿಭೂತಿಕೆರೆ ಗ್ರಾಮದಲ್ಲಿ ಶಿವಲಿಂಗ ತಯಾರಿಕೆಯಲ್ಲಿ ತೊಡಗಿರುವ ಶಿವಾನಂದ   

ರಾಮನಗರ: ಶಿವರಾತ್ರಿಗೆ ಎಲ್ಲೆಡೆ ಸಂಭ್ರಮದ ಸಿದ್ಧತೆ ನಡೆಯುತ್ತಿದೆ. ಈ ಸಂದರ್ಭದಲ್ಲಿ ವಿವಿಧ ರೀತಿಯ ಲಿಂಗಗಳಿಗೂ ಬೇಡಿಕೆ ಬಂದಿದೆ. ಲಿಂಗಗಳನ್ನು ತಯಾರಿಸಿ ಮಾರಾಟ ಮಾಡುವ 8 ಕುಟುಂಬಗಳು ತಾಲ್ಲೂಕಿನ ಕೈಲಾಂಚ ಹೋಬಳಿಯ ವಿಭೂತಿಕೆರೆ ಗ್ರಾಮದಲ್ಲಿವೆ.

55 ವರ್ಷಗಳಿಂದ ಈ ಕುಟುಂಬಗಳು ಜೀವನೋಪಯಕ್ಕಾಗಿ ಈ ಕಸುಬನ್ನೇ ನಂಬಿಕೊಂಡಿವೆ. ಮೈಸೂರಿನ ರಾಜವಂಶಸ್ಥರು, ತುಮಕೂರಿನ ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿ ಸೇರಿದಂತೆ ಹಲವಾರು ಪೀಠಾಧಿಪತಿಗಳು, ದೇವಸ್ಥಾನಗಳ ಅಗತ್ಯಕ್ಕೆ ತಕ್ಕಂತೆ ಲಿಂಗಗಳನ್ನು ಈ ಕುಟುಂಬಗಳು ಮಾಡಿಕೊಟ್ಟಿವೆ.

‘ಗ್ರಾಮದಲ್ಲಿ ಲಿಂಗ ತಯಾರಿಸುವವರು ಬೆಂಗಳೂರು, ಸಿದ್ದಗಂಗಾಮಠ ಹಾಗೂ ಕುಣಿಗಲ್‌ ನ ಎಡೆಯೂರು ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಕೆಲಸವನ್ನು ಮಾಡುತ್ತಿದ್ದಾರೆ. ಇವರಲ್ಲಿ ಸಿದ್ದರಾಮಯ್ಯ ಎಂಬುವವರು ಉಪರಾಷ್ಟ್ರಪತಿಯಾಗಿದ್ದ ಬಿ.ಡಿ. ಜತ್ತಿ ಅವರ ಪರಿಚಯದ ಮೂಲಕ ಮೈಸೂರು ಚಾಮರಾಜೇಂದ್ರ ಒಡೆಯರ್ ಗೆ ಇಷ್ಟಲಿಂಗ ಮಾಡಿಕೊಟ್ಟರೆ, ಶಿವಲಿಂಗಯ್ಯ ಎಂಬುವರು ಶಿವಕುಮಾರ ಸ್ವಾಮೀಜಿ ಅವರಿಗೆ ಇಷ್ಟ ಲಿಂಗ ಮಾಡಿಕೊಟ್ಟರು’ ಎಂದು ಮಾಹಿತಿ ನೀಡಿದರು.

ಬೇಡಿಕೆ: ‘ಬೆಂಗಳೂರು, ಮೈಸೂರು, ಚಿಕ್ಕಮಗಳೂರು, ಶಿವಮೊಗ್ಗ, ದಾವಣಗೆರೆ, ತುಮಕೂರು ಸೇರಿದಂತೆ ರಾಜ್ಯದ ದಕ್ಷಿಣ ಜಿಲ್ಲೆಗಳಲ್ಲಿ ವಿಭೂತಿಕೆರೆ ಗ್ರಾಮದ ಲಿಂಗಗಳಿಗೆ ಬೇಡಿಕೆ ಇದೆ. ಈ ಭಾಗದಲ್ಲಿ ವೀರಶೈವ ಸಮುದಾಯದ ಕಾರ್ಯಕ್ರಮಗಳು ನಡೆದರೆ ಲಿಂಗ ತಯಾರಿಸುವ ಕುಟುಂಬಗಳಿಗೆ ವಿಶೇಷ ಆಹ್ವಾನವಿರುತ್ತದೆ. ಅಲ್ಲಿಗೆ ಹೋಗಿ ಲಿಂಗಗಳನ್ನು ಮಾರಾಟ ಮಾಡಿಕೊಂಡು ಬರುತ್ತೇವೆ’ ಎಂದು ತಿಳಿಸಿದರು.

‘ಲಿಂಗ ತಯಾರಿಕೆಗಾಗಿ ತಮಿಳುನಾಡಿನಲ್ಲಿ ದೊರೆಯುವ ಗೇರು, ಕರ್ಪೂರ ಬಳಸಲಾಗುತ್ತಿದೆ. ₹30 ರಿಂದ ಹಿಡಿದು ₹ 4 ಸಾವಿರದರೆಗಿನ ಲಿಂಗ್ನು ತಯಾರಿಸಿ ಮಾರಾಟ ಮಾಡಲಾಗುತ್ತಿದೆ. ಶಿವರಾತ್ರಿಯಲ್ಲಿ ಲಿಂಗಗಳಿಗೆ ಬೇಡಿಕೆ ಹೆಚ್ಚಿರುತ್ತದೆ.  ಆಧುನಿಕತೆ ಬೆಳೆದಂತೆಲ್ಲ ಲಿಂಗಧಾರಿಗಳು ಅಪರೂಪವಾಗುತ್ತಿದ್ದಾರೆ’ ಎಂದು ತಿಳಿಸಿದರು.
–ಎಸ್. ರುದ್ರೇಶ್ವರ

*
ವಿಭೂತಿಕೆರೆ ಗ್ರಾಮದಲ್ಲಿ 55 ವರ್ಷಗಳ ಹಿಂದೆ ಸಿದ್ದಪ್ಪ ಕುಟುಂಬದವರು ಈ ಕಾಯಕ ಆರಂಭಿಸಿದ್ದು, ನಿರಂತರವಾಗಿ ಮುಂದುವರಿದೆ.
-ಶಿವಾನಂದ, ಲಿಂಗ ತಯಾರಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT