ADVERTISEMENT

ಶೆಡ್‌ಗೆ ಬೆಂಕಿ: 39 ಕುರಿ ಸಾವು

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2018, 6:32 IST
Last Updated 27 ಫೆಬ್ರುವರಿ 2018, 6:32 IST

ಕನಕಪುರ: ತಾಲ್ಲೂಕಿನ ಮರಳವಾಡಿ ಹೋಬಳಿ ದೊಡ್ಡಸಾದೇನಹಳ್ಳಿ ಗ್ರಾಮದಲ್ಲಿ ರೈತ ಬಾಳೇಗೌಡ ಅವರಿಗೆ ಸೇರಿದ ಕುರಿ ಶೆಡ್ಡಿಗೆ ಸೋಮವಾರ ಆಕಸ್ಮಿಕ ಬೆಂಕಿ ತಗುಲಿ 39 ಕುರಿ ಮತ್ತು ಕೋಳಿಗಳು ಸುಟ್ಟು ಸುಮಾರು ₹ 4 ಲಕ್ಷದಷ್ಟು ನಷ್ಟವಾಗಿದೆ.

ರೈತ ಬಾಳೇಗೌಡ ಮಾತನಾಡಿ, ಬೆಳಿಗ್ಗೆ ಕುರಿಗಳನ್ನು ಹೊರಗಡೆ ಮೇಯಿಸಿಕೊಂಡು ಮಧ್ಯಾಹ್ನ ಮನೆಗೆ ಬಂದು ಕೊಪ್ಪಲಿನಲ್ಲಿ ಕುರಿಗಳನ್ನು ಕೂಡಿ ಹೊರಗಡೆ ಹೋದ ಮೇಲೆ ಸುಮಾರು ಎರಡು ಗಂಟೆಗೆ ಈ ದುರ್ಘಟನೆ ನಡೆದಿದೆ ಎಂದರು.

ಶೆಡ್ಡಿನಲ್ಲಿ ಕುರಿಗಳು ಚೀರಾಡುವುದನ್ನು ಕೇಳಿ ಅಕ್ಕಪಕ್ಕದ ಮನೆಯವರು ಓಡಿ ಬಂದು ನೋಡಿದಾಗ ಬೆಂಕಿ ಹತ್ತಿಕೊಂಡಿರುವುದು ಗೊತ್ತಾಗಿದೆ. ಬೆಂಕಿ ನಂದಿಸಲು ಸ್ಥಳೀಯರು ಪ್ರಯತ್ನಿಸಿದ್ದಾರೆ. ಅಗ್ನಿಶಾಮಕ ದಳದವರು ಬಂದ ನಂತರ ಬೆಂಕಿ ನಂದಿಸಿದ್ದಾರೆ ಎಂದು ತಿಳಿಸಿದರು. ಅಷ್ಟರಲ್ಲಾಗಲೇ ಶೆಡ್ಡಿನಲ್ಲಿದ್ದ ಎಲ್ಲಾ 39 ಕುರಿ ಮತ್ತು ಕೋಳಿಗಳು ಸಂಪೂರ್ಣವಾಗಿ ಸುಟ್ಟು ಕರಕಲಾಗಿವೆ ಎಂದರು.

ADVERTISEMENT

ಹಾರೋಹಳ್ಳಿ ಪೊಲೀಸ್‌ ಠಾಣೆಯಲ್ಲಿ ಆಕಸ್ಮಿಕ ಬೆಂಕಿ ತಗುಲಿ ಆಗಿರುವ ಅವಘಡ ಸಂಬಂಧ ದೂರು ನೀಡಲಾಗಿದೆ. ಕಂದಾಯ ಇಲಾಖೆ, ಪಂಚಾಯಿತಿ ಅಧಿಕಾರಿಗಳು ಬಂದು ಸ್ಥಳ ಪರಿಶೀಲನೆ ನಡೆಸಿ ಸ್ಥಳೀಯರಿಂದ ಮಾಹಿತಿ ಪಡೆದರು. ಘಟನೆ ಸಂಬಂಧ ವರದಿ ತಯಾರಿಸಿ ತಾಲ್ಲೂಕು ಆಡಳಿತಕ್ಕೆ ಕಳುಹಿಸಿ ಸೂಕ್ತ ಪರಿಹಾರ ಕೊಡಿಸುವ ಭರವಸೆ ನೀಡಿದ್ದಾರೆ.

ಸ್ಥಳಕ್ಕೆ ಕಾಂಗ್ರೆಸ್‌ ಮುಖಂಡ ಇಕ್ಬಾಲ್‌ ಹುಸೇನ್‌, ಜೆ.ಡಿ.ಎಸ್‌. ಜಿಲ್ಲಾ ಘಟಕದ ಉಪಾಧ್ಯಕ್ಷ ರಾಮಕೃಷ್ಣ ಮರಳವಾಡಿ, ಮುಖಂಡ ಪಡುವಣಗೆರೆ ಸಿದ್ದರಾಜು, ದೊಡ್ಡ ಸಾದೇನಹಳ್ಳಿ ಗ್ರಾಮದ ಪಂಚಾಯಿತಿ ಸದಸ್ಯ ಲೋಕೇಶ್‌, ಮುಖಂಡರಾದ ರಮೇಶ್‌, ಮಂಜು ಭೇಟಿ ನೀಡಿ ಸಂತ್ರಸ್ತರಿಗೆ ಆತ್ಮಸ್ಥೈರ್ಯ ತುಂಬಿದರು. ವೈಯಕ್ತಿಕ ಸಹಾಯದ ಜತೆಗೆ ಸರ್ಕಾರದಿಂದ ಹೆಚ್ಚಿನ ಪರಿಹಾರ ಕೊಡಿಸುವ ಭರವಸೆ ನೀಡಿದರು.

ಪಶುಪಾಲನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಯು.ಸಿ.ಕುಮಾರ್‌  ಮಾತನಾಡಿ,  ಶೆಡ್ಡಿನಲ್ಲಿದ್ದ ಎಲ್ಲಾ ಕುರಿ ಕೋಳಿಗಳು ಸಾವನಪ್ಪಿ ಸುಮಾರು ₹ 4 ಲಕ್ಷದಷ್ಟು ನಷ್ಟವಾಗಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ರೈತನಿಗೆ ಆರ್ಥಿಕ ತೊಂದರೆಯಾಗಿರುವ ಬಗ್ಗೆ ಸರ್ಕಾರಕ್ಕೆ ವರದಿ ಕಳುಹಿಸಿ ರೈತರಿಗೆ ಹೆಚ್ಚಿನ ಪರಿಹಾರ ಕೊಡಿಸಲು ಪ್ರಯತ್ನಿಸಲಾಗುವುದು ಎಂದರು.

ರಾಮಕೃಷ್ಣ ಮರಳವಾಡಿ ಮಾತನಾಡಿ, ಕನಕಪುರ ಬಾಳೇಗೌಡ ಕುಟುಂಬ ಮೊದಲಿಂದಲೂ ಕುರಿ ಸಾಕಾಣಿಕೆ ಮಾಡಿಕೊಂಡು ಜೀವನ ನಿರ್ವಹಿಸುತ್ತಿತ್ತು. ಆಕಸ್ಮಿಕ ಬೆಂಕ ಅವಘಡದಿಂದ ಇಡೀ ಕುಟುಂಬ ಆರ್ಥಿಕ ಮೂಲವನ್ನೇ ಕಳೆದುಕೊಂಡು ಅತಂತ್ರ ಸ್ಥಿತಿ ತಲುಪಿದೆ. ಕುರಿಗಳಿಂದ ವಾರ್ಷಿಕವಾಗಿ ₹ 2 ಲಕ್ಷ ಸಂಪಾದಿಸುತ್ತಿದ್ದರು. ಸರ್ಕಾರವು ಸಂಕಷ್ಟಕ್ಕೆ ಸಿಲುಕಿರುವ ರೈತ ಬಾಳೇಗೌಡ ಹೆಚ್ಚಿನ ಪರಿಹಾರವನ್ನು ಆರ್ಥಿಕ ಭದ್ರತೆ ಒದಗಿಸಬೇಕು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.