ADVERTISEMENT

ಸಾಗುವಳಿ ಚೀಟಿ ನೀಡಲು ರೈತರ ಒತ್ತಾಯ

​ಪ್ರಜಾವಾಣಿ ವಾರ್ತೆ
Published 31 ಜನವರಿ 2017, 9:14 IST
Last Updated 31 ಜನವರಿ 2017, 9:14 IST
ಸಾಗುವಳಿ ಚೀಟಿ ನೀಡಲು ರೈತರ ಒತ್ತಾಯ
ಸಾಗುವಳಿ ಚೀಟಿ ನೀಡಲು ರೈತರ ಒತ್ತಾಯ   
ರಾಮನಗರ: ಭೂ ಹಿಡುವಳಿದಾರರಿಗೆ ಸಾಗುವಳಿ ಚೀಟಿ ನೀಡಲು ಶೀಘ್ರ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಬಿಡದಿ ಹೋಬಳಿಯ ರೈತರು ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಆರ್‌. ಪ್ರಶಾಂತ್ ಅವರಿಗೆ ಸೋಮವಾರ ಮನವಿ ಸಲ್ಲಿಸಿದರು.
 
‘40ವರ್ಷಗಳಿಂದ ಭೂ ಹಿಡುವಳಿದಾರರಿಗೆ ಸಾಗುವಳಿ ಚೀಟಿ ನೀಡುವ ಕೆಲಸ ಜಿಲ್ಲೆಯಲ್ಲಿ ನನೆಗುದಿಗೆ ಬಿದ್ದಿದೆ.  ಅಧಿಕಾರಿ ವರ್ಗ ಆಸಕ್ತಿ ತೋರುತ್ತಿಲ್ಲ. ಭೂಮಿಯನ್ನು ಉಳುಮೆ ಮಾಡಿಕೊಂಡು ನಾವೇ ಸ್ವಾಧೀನದಲ್ಲಿದ್ದರೂ ಇಲ್ಲಿಯವರೆವಿಗೂ ಸಾಗುವಳಿ ಚೀಟಿ ನೀಡಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು. 
 
‘ಅಲ್ಲದೇ ಬಿಎಂಐಸಿಗೆ ಉಳುಮೆ ಭೂಮಿಯನ್ನು ಅಧಿಸೂಚನೆ ಮಾಡಿದ್ದು, ರೈತರ ಬಳಿ ಯಾವುದೇ ದಾಖಲೆಗಳಿಲ್ಲದ ಕಾರಣ ಅವರಿಗೆ ತಲುಪಬೇಕಾದ ಪರಿಹಾರವೂ ದೊರೆತಿಲ್ಲ. ಈ ಎಲ್ಲ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಒದಗಿಸಬೇಕು’ ಎಂದು ಮನವಿ ಮಾಡಿದರು.
 
ಭರವಸೆ: ‘ಆಡಳಿತಾತ್ಮಕ ಸಮಸ್ಯೆಗಳಿಂದ ಸಾಗುವಳಿ ಚೀಟಿ ನೀಡಲು ಸಾಧ್ಯವಾಗುತ್ತಿಲ್ಲ. 2011ರ ಜಾನುವಾರು ಗಣತಿಯಂತೆ ಒಂದು ಗ್ರಾಮಕ್ಕೆ ನೂರು ರಾಸುಗಳಿದ್ದರೆ ಅಲ್ಲಿ 30 ಎಕರೆ ಜಮೀನನ್ನು ಗೋಮಾಳವಾಗಿ ಮೀಸಲಿಡಬೇಕು. ಈ ಸಂಬಂಧ ಸರ್ಕಾರ ತೆಗೆದುಕೊಳ್ಳುವ ತೀರ್ಮಾನದಂತೆ ರೈತರಿಗೆ ನ್ಯಾಯ ದೊರಕಿಸಿಕೊಡುತ್ತೇವೆ’ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಡಾ. ಆರ್‌. ಪ್ರಶಾಂತ್‌ ಭರವಸೆ ನೀಡಿದರು. 
 
ಜಿಲ್ಲಾ ಪಂಚಾಯಿತಿ ಸದಸ್ಯ ಎ. ಮಂಜುನಾಥ್‌, ತಾಲ್ಲೂಕು ಪಂಚಾಯಿತಿ ಸದಸ್ಯ ಗಾಣಕಲ್‌ ನಟರಾಜ್‌, ಭೂ ಮಂಜೂರಾತಿ ಸಮಿತಿ ಸದಸ್ಯ ಗೋಪಾಲ್‌ರಾಜ್‌, ಮಾದಿಗೊಂಡನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆಂಚೇಗೌಡ ಇತರರು ಇದ್ದರು. 
 
**
ಬಾಲಕೃಷ್ಣ ಕಾಂಗ್ರೆಸ್ ಸೇರಲ್ಲ!
‘ಮಾಗಡಿ ಶಾಸಕ ಎಚ್.ಸಿ.ಬಾಲಕೃಷ್ಣ ಅವರನ್ನು ಕಾಂಗ್ರೆಸ್ ಸೇರುವಂತೆ ಯಾರೂ ಆಹ್ವಾನ ನೀಡಿಲ್ಲ. ಅವರು ಇಲ್ಲ ಸಲ್ಲದ ಹೇಳಿಕೆಗಳ ಮೂಲಕ ಬಿಟ್ಟಿ ಪ್ರಚಾರ ಪಡೆಯುತ್ತಿದ್ದಾರೆ’ ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಎ.ಮಂಜು ದೂರಿದರು. 
 
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ‘ಬಾಲಕೃಷ್ಣ ತಮ್ಮ ವೈಯಕ್ತಿಕ ಲಾಭಕ್ಕಾಗಿ ಕಾಂಗ್ರೆಸ್ ಸೇರುವ ಬಗ್ಗೆ ಮಾತನಾಡುತ್ತಿದ್ದಾರೆ. ಪಕ್ಷವನ್ನು ಓಲೈಸುವಂತೆ ನಟಿಸುತ್ತಿರುವ ಅವರು  ಇಲ್ಲ ಸಲ್ಲದ ಹೇಳಿಕೆಗಳ ಮೂಲಕ ಗೊಂದಲ ಸೃಷ್ಟಿಸುತ್ತಿದ್ದಾರೆ. ಆದರೆ ಯಾವುದೇ ಕಾರಣಕ್ಕೂ ಅವರು ಕಾಂಗ್ರೆಸ್ ಸೇರುವುದಿಲ್ಲ. ಇದೆಲ್ಲ ಕೇವಲ ಹೇಳಿಕೆಗಳು ಮಾತ್ರ’ ಎಂದರು. 

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.