ADVERTISEMENT

ಸುಗ್ಗನಹಳ್ಳಿ ಸೇತುವೆಗೆ ಬೇಕಿದೆ ತಡೆಗೋಡೆ

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2017, 5:37 IST
Last Updated 20 ಡಿಸೆಂಬರ್ 2017, 5:37 IST

ರಾಮನಗರ: ತಾಲ್ಲೂಕಿನ ಸುಗ್ಗನಹಳ್ಳಿ ಗ್ರಾಮದಲ್ಲಿ ಅರ್ಕಾವತಿ ನದಿಗೆ ಅಡ್ಡಲಾಗಿ ಕಟ್ಟಲಾಗಿರುವ ಸೇತುವೆಗೆ ತಡೆಗೋಡೆ ಇಲ್ಲದಾಗಿದ್ದು, ಅಪಾಯ ಆಹ್ವಾನಿಸುವಂತಿದೆ.
ನೆಲಮಟ್ಟಕ್ಕಿಂತ ಸುಮಾರು 10–12 ಅಡಿಗಳಷ್ಟು ಎತ್ತರದಲ್ಲಿ ಈ ಸೇತುವೆ ನಿರ್ಮಿಸಲಾಗಿದೆ. ಕೆಳಗೆ ನದಿ ನೀರು ಹರಿಯುತ್ತಲಿರುತ್ತದೆ. ಈ ವರ್ಷ ಉತ್ತಮ ಮಳೆಯಾಗಿರುವ ಕಾರಣ ಮಂಚನಬೆಲೆ ಜಲಾಶಯ ತುಂಬಿದ್ದು, ಆಗಾಗ್ಗೆ ನದಿಗೆ ನೀರು ಬಿಡಲಾಗುತ್ತಿದೆ.

ಸೇತುವೆಯ ಎರಡೂ ಬದಿಗಳಲ್ಲಿ ಕೇವಲ ಕಲ್ಲುಗಳನ್ನು ಅಡ್ಡಲಾಗಿ ನೆಡಲಾಗಿದೆ. ಆದರೆ, ಪೂರ್ಣ ಪ್ರಮಾಣದ ತಡೆಗೋಡೆ ನಿರ್ಮಾಣ ಸಾಧ್ಯವಾಗಿಲ್ಲ. ಇದರಿಂದಾಗಿ ವಾಹನ ಸವಾರರು ಭಯದಿಂದಲೇ ಚಾಲನೆ ಮಾಡುವಂತಾಗಿದೆ.

ಮುಖ್ಯ ರಸ್ತೆ: ಈ ಸೇತುವೆಯು ಬೆಂಗಳೂರು–ಮೈಸೂರು ಹೆದ್ದಾರಿಯನ್ನು ಮಾಗಡಿ ರಸ್ತೆಗೆ ಸಂಪರ್ಕಿಸುವ ಹಾದಿಯಲ್ಲಿ ಇದ್ದು, ಬೆಂಗಳೂರು ಕಡೆಯಿಂದ ಬರುವವರು ಮಾಯಗಾನಹಳ್ಳಿ ತಿರುವು ತೆಗೆದುಕೊಂಡು ಸುಗ್ಗನಹಳ್ಳಿಯ ಈ ಸೇತುವೆ ದಾಟಿ ಬೆಚ್ಚರಹಳ್ಳಿಕಟ್ಟೆ ಮೂಲಕ ಮಾಗಡಿ ಹೆದ್ದಾರಿಗೆ ಕೂಡಿಕೊಳ್ಳಬಹುದು. ರಾಮನಗರ ಬಳಸಿ ಬರುವುದನ್ನು ತಪ್ಪಿಸಲು ಈ ದಾರಿಯಲ್ಲಿ ವಾಹನಗಳ ಸಂಚಾರ ಹೆಚ್ಚಾಗಿರುತ್ತದೆ.

ADVERTISEMENT

ಸುತ್ತಲಿನ ಕರಡಿದೊಡ್ಡಿ, ಲಕ್ಕನದೊಡ್ಡಿ, ಧಾರಾಪುರ, ಎಲೇದೊಡ್ಡಿ, ಕುಂಬಾರದೊಡ್ಡಿ, ತಿಮ್ಮೇಗೌಡನ ದೊಡ್ಡಿ ಭಾಗಗಳ ಜನರು ಈ ರಸ್ತೆಯನ್ನು ಬಳಸುತ್ತಾ ಬಂದಿದ್ದಾರೆ. ಇದನ್ನು ಹೆದ್ದಾರಿ ಮಾದರಿಯಲ್ಲಿ ಅಭಿವೃದ್ಧಿಪಡಿಸುವ ಯೋಜನೆ ಇದೆಯಾದರೂ, ಅದು ಕಾಗದದ ರೂಪದಲ್ಲಿಯೇ ಉಳಿದಿದೆ ಎಂದು ಸ್ಥಳೀಯರು ದೂರಿದ್ದಾರೆ.
ಅಪಘಾತ ಸಂಭವಿಸುವ ಮುನ್ನ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕು. ಸೇತುವೆ ಎರಡೂ ಬದಿಯಲ್ಲಿ ತಡೆಗೋಡೆ ನಿರ್ಮಿಸಬೇಕು ಎನ್ನುವುದು ಸುತ್ತಲಿನ ನಿವಾಸಿಗಳ ಆಗ್ರಹ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.