ADVERTISEMENT

ಸೋಮೇಶ್ವರಸ್ವಾಮಿ ಜಾತ್ರೆ: ದೇವರ ಶ್ರೀಮುಖ ಮೆರವಣಿಗೆ

​ಪ್ರಜಾವಾಣಿ ವಾರ್ತೆ
Published 28 ಜನವರಿ 2017, 11:03 IST
Last Updated 28 ಜನವರಿ 2017, 11:03 IST
ಸೋಮೇಶ್ವರಸ್ವಾಮಿ ಜಾತ್ರೆ: ದೇವರ ಶ್ರೀಮುಖ ಮೆರವಣಿಗೆ
ಸೋಮೇಶ್ವರಸ್ವಾಮಿ ಜಾತ್ರೆ: ದೇವರ ಶ್ರೀಮುಖ ಮೆರವಣಿಗೆ   

ಮಾಗಡಿ: ಪಟ್ಟಣದ ಚಾರಿತ್ರಿಕ ಸೋಮೇಶ್ವರ ಸ್ವಾಮಿ ಜಾತ್ರಾ ಮಹೋತ್ಸವದ ಅಂಗವಾಗಿ ದೇವರ ಶ್ರೀಮುಖ  ಅಲಂಕೃತ ಮುತ್ತಿನ ಪೆಟ್ಟಿಗೆಯಲ್ಲಿ ಮೆರವಣಿಗೆಯಲ್ಲಿಟ್ಟು ತಹಶೀಲ್ದಾರ್‌ ಕಚೇರಿಗೆ ತರಲಾಯಿತು.

ತಹಶೀಲ್ದಾರ್‌ ಎನ್‌.ಲಕ್ಷ್ಮೀಚಂದ್ರ ದೇವರ ಶ್ರೀಮುಖಕ್ಕೆ ವಿಧ್ಯುಕ್ತ  ಪೂಜೆ ಸಲ್ಲಿಸಿದರು. ದೇವಾಲಯದ ಪ್ರಧಾನ ಅರ್ಚಕ ಆಗಮಿಕ ವಿದ್ವಾನ್‌ ಕೆ.ಎನ್‌.ಗೋಪಾಲ ದೀಕ್ಷಿತ್‌ ಜಾತ್ರೆಯ ಆಮಂತ್ರಣ ಪತ್ರ ಓದಿ ಮುಜರಾಯಿ ಇಲಾಖೆಯಿಂದ ಅನುಮತಿ ಪಡೆದರು.

ತಹಶೀಲ್ದಾರ್‌ ಎನ್‌.ಲಕ್ಷ್ಮೀಚಂದ್ರ ಮಾತನಾಡಿ, ಸೋಮೇಶ್ವರ ಸ್ವಾಮಿ ದೇವಾಲಯದಲ್ಲಿ ನಡೆಯುವ ಜಾತ್ರೆಗೆ ಬೇಕಾದ ಸವಲತ್ತು ದೊರಕಿಸಿಕೊಟ್ಟು ಭಕ್ತರಿಗೆ ಅನುಕೂಲ ಮಾಡಿಕೊಡುವಂತೆ ಮುಜರಾಯಿ ಇಲಾಖೆಯ ಅಧಿಕಾರಿ ಚಂದ್ರಶೇಖರ್‌ ಅವರಿಗೆ ಸೂಚಿಸಿದರು.

ರಾಜಸ್ವ ನಿರೀಕ್ಷಕ ಗಂಗಮಾರಯ್ಯ, ದೇವಾಲಯದ ಅರ್ಚಕರಾದ ಕಿರಣ್ ದೀಕ್ಷಿತ್‌, ಕಲ್ಯಾದ ಗೋಪಾಲ್‌ ರಾವ್‌. ಅಜ್ಜನಹಳ್ಳಿ ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷ ಸುರೇಶ್‌, ಕಲ್ಲೂರು ರಂಗನಾಥ್‌ ಗವಿನಾಗಮಂಗಲ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯಶಿಕ್ಷಕ  ತಿಮ್ಮೇಗೌಡ ಹಾಗೂ ಭಕ್ತಾದಿಗಳು ಇದ್ದರು.

ಪೊಲೀಸ್‌ ಠಾಣೆಯಲ್ಲಿ ಸೋಮೇಶ್ವರ ಸ್ವಾಮಿ ಶ್ರೀಮುಖ ಹಾಗೂ ಇಮ್ಮಡಿ ಕೆಂಪೇಗೌಡರ ಕಾಲದ ಬೆಳ್ಳಿಯ ರಾಜದಂಡಕ್ಕೆ ಪೂಜೆ ಸಲ್ಲಿಸಿದ ಪಿಎಸ್‌ಐ , ಮಂಜುನಾಥ. ಡಿ.ಆರ್‌. ಶ್ರೀಮುಖದ ಮೆರವಣಿಗೆಗೆ ಚಾಲನೆ ನೀಡಿದರು. ಮಂಗಳವಾದ್ಯ ಸಹಿತ ರಾಜಬೀದಿಗಳಲ್ಲಿ ಶ್ರೀಮುಖದ ಮೆರವಣಿಗೆ ನಡೆಯಿತು. ರಾಜಬೀದಿಯ ಇಕ್ಕಡೆಗಳಲ್ಲಿ ವರ್ತಕರು ಸೋಮೇಶ್ವರ ಸ್ವಾಮಿ ಶ್ರೀಮುಖಕ್ಕೆ ಪೂಜೆ ಸಲ್ಲಿಸಿದರು.

ಪಟ್ಟಣದ ತಿರುವೆಂಗಳನಾಥ ಮತ್ತು ಸೋಮೇಶ್ವರ ಸ್ವಾಮಿ ಜಾತ್ರೆ ವಿಜೃಂಭಣೆಯಿಂದ ನಡೆಯುತ್ತದೆ.  ರಾಜರ ಕಾಲ ಮತ್ತು ದೇಶಕ್ಕೆ ಸ್ವಾತಂತ್ರ್ಯ ಬಂದ ನಂತರ, ದೇವರ ಉತ್ಸವ ಮೂರ್ತಿಯ ಶ್ರೀಮುಖ ತಹಶೀಲ್ದಾರ್‌ ಮತ್ತು ಪೊಲೀಸ್‌ ಠಾಣೆಗೆ ಭೇಟಿ ನೀಡಿ ಪೂಜೆ ಸಲ್ಲಿಸಿದ ನಂತರ ಮಹೋತ್ಸವ ಆರಂಭವಾಗುವುದು  ಸಂಪ್ರದಾಯ ಎಂದು ಪ್ರಧಾನ ಅರ್ಚಕ ಕೆ.ಎನ್‌.ಗೋಪಾಲ ದೀಕ್ಷಿತ್‌ ತಿಳಿಸಿದರು. ದೇಗುಲದ ಜಾತ್ರಾ ಮಹೋತ್ಸವ ಇಂದಿನಿಂದ ಶ್ರೀಮುಖದ ಪೂಜೆಯೊಂದಿಗೆ ಆರಂಭವಾಯಿತು, ಅಂಕುರಾರ್ಪಣೆಯ ಸರ್ಕಾರಿ ಸೇವೆಯೊಂದಿಗೆ ಆರಂಭವಾದ  ಮಹೋತ್ಸವದ ಅಂಗವಾಗಿ ಪ್ರತಿನಿತ್ಯ ವಿವಿಧ ಉತ್ಸವಗಳು ಫೆ.6ರವರೆಗೆ ನಡೆಯಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.