ADVERTISEMENT

ಸ್ವಚ್ಛತೆ ಜಾಗೃತಿಗೆ ಬೀದಿ ನಾಟಕ ಪ್ರದರ್ಶನ

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2016, 9:43 IST
Last Updated 5 ಡಿಸೆಂಬರ್ 2016, 9:43 IST

ರಾಮನಗರ: ಸ್ವಚ್ಛಭಾರತ ಅಭಿಯಾನಕ್ಕೆ ಕೈಜೋಡಿಸುವ ದೃಷ್ಟಿಯಿಂದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ನಗರದ ಬಾಲಗೇರಿ ಸರ್ಕಾರಿ ಪ್ರಾಥಮಿಕ ಶಾಲೆ ಆವರಣದಲ್ಲಿ ಭಾನುವಾರ ಬೀದಿ ನಾಟಕ ಪ್ರದರ್ಶಿಸುವ ಮೂಲಕ ಜಾಗೃತಿ ಮೂಡಿಸಲಾಯಿತು.

ಮನೆಗೊಂದು ಶೌಚಗೃಹ ನಿರ್ಮಿಸಬೇಕು. ಕಸ, ತ್ಯಾಜ್ಯಗಳನ್ನು ರಸ್ತೆಗಳಲ್ಲಿ ಸುರಿಯದೇ, ಕಸದ ಬುಟ್ಟಿಗಳಲ್ಲೇ ಹಾಕಬೇಕು. ನಗರಸಭೆಯೊಂದಿಗೆ ಪ್ರತಿಯೊಬ್ಬರು ಕೈಜೋಡಿಸಬೇಕು ಎಂಬುದು ಸೇರಿದಂತೆ ಇನ್ನಿತರ ಸಂದೇಶಗಳನ್ನು ಜಾಗೃತಿ ಗೀತೆ, ನಾಟಕಗಳ ಮೂಲಕ ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಯಿತು.

ಕಸ ಹಾಗೂ ಬಯಲು ಶೌಚದಿಂದ ರೋಗಗಳು ಉಲ್ಬಣಿಸುತ್ತವೆ. ಜತೆಗೆ ನಗರದ ಸೌಂದರ್ಯಕ್ಕೆ ಧಕ್ಕೆ ಉಂಟಾಗುತ್ತದೆ. ಹೀಗಾಗಿ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಸುತ್ತಲಿನ ಪ್ರದೇಶ ಶುಚಿಯಾಗಿ ಇಟ್ಟುಕೊಳ್ಳುವುದರಿಂದ ಆಗುವ ಪ್ರಯೋಜನಗಳನ್ನು ಕುರಿತು  ಜೀವೊದಯ ಕಲಾತಂಡದ ಬೀದಿ ನಾಟಕದ ಮೂಲಕ ತಿಳಿಸಿಕೊಟ್ಟರು.

ನಗರಸಭೆ ಸದಸ್ಯ ಎ.ರವಿ, ಬಿಸಿಯೂಟ ಕಾರ್ಯಕರ್ತರ ಸಂಘಟನೆ ಜಿಲ್ಲಾ ಘಟಕದ ಅಧ್ಯಕ್ಷೆ ನಿರ್ಮಲ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ತಾಲ್ಲೂಕು ಯೋಜನಾಧಿಕಾರಿ ಸೂರ್ಯನಾರಾಯಣ, ಜ್ಞಾನ ವಿಕಾಸ ಸಮನ್ವಯಾಧಿಕಾರಿ ಮಲ್ಲಿಕಾ, ವಲಯ ಮೇಲ್ವಿಚಾರಕಿ ಕವಿತಾ  ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.