ADVERTISEMENT

ಹೆಚ್ಚುವರಿ ಅನುದಾನ, ಸೇವೆ ಕಾಯಂಗೆ ಒತ್ತಾಯ

ಕಂದಾಯ ಭವನದ ಎದುರು ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 21 ಜನವರಿ 2017, 7:52 IST
Last Updated 21 ಜನವರಿ 2017, 7:52 IST
ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ರಾಮನಗರದ ಕಂದಾಯ ಭವನ ಎದುರು ಅಂಗನವಾಡಿ ಕಾರ್ಯಕರ್ತೆಯರು ಶುಕ್ರವಾರ ಪ್ರತಿಭಟಿಸಿದರು
ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ರಾಮನಗರದ ಕಂದಾಯ ಭವನ ಎದುರು ಅಂಗನವಾಡಿ ಕಾರ್ಯಕರ್ತೆಯರು ಶುಕ್ರವಾರ ಪ್ರತಿಭಟಿಸಿದರು   

ರಾಮನಗರ: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಅಂಗನವಾಡಿ ನೌಕರರು ನಗರದ ಕಂದಾಯ ಭವನದ ಮುಂಭಾಗ ಶುಕ್ರವಾರ ಪ್ರತಿಭಟನೆ ನಡೆಸಿದರು.

ಕೇಂದ್ರ ಸರ್ಕಾರದ ಅಡಿಯಲ್ಲಿ ಆರೋಗ್ಯ, ಶಿಕ್ಷಣ, ಅಪೌಷ್ಟಿಕತೆ ಮತ್ತು ಗ್ರಾಮೀಣಾಭಿವೃದ್ಧಿ (ಐಸಿಡಿಎಸ್)ಯೋಜನೆಗಳಿಗೆ ಕಡಿತವಾಗಿರುವ ಅನುದಾನ ವಾಪಸ್‌ ನೀಡಬೇಕು. ಐಸಿಡಿಎಸ್ ಯೋಜನೆ ಬಲಿಷ್ಠಗೊಳಿಸಬೇಕು. ಈಯೋಜನೆ ಅಡಿಯಲ್ಲಿ ದುಡಿಯುವ ಒಂದು ಕೋಟಿ ಜನರನ್ನು ಎಲ್ಐಸಿ ಶಿಫಾರಸಿನಂತೆ ನೌಕರರೆಂದು ಪರಿಗಣಿಸಿ ಕಾಯಂಗೊಳಿಸಿ ಕನಿಷ್ಠ ವೇತನ ಮತ್ತು ನಿವೃತ್ತಿ ಸೌಲಭ್ಯಗಳನ್ನು ಕಲ್ಪಿಸಬೇಕು ಎಂದು ಆಗ್ರಹಿಸಿದರು.

ಅಂಗನವಾಡಿ ನೌಕರರಿಗೆ ಕನಿಷ್ಠ ವೇತನ ನಿಗದಿಗೊಳಿಸಿ ಕನಿಷ್ಠ ಕೂಲಿ ಕಾಯ್ದೆ ವ್ಯಾಪ್ತಿಗೆ ತರಬೇಕು. ಅಂಗನವಾಡಿ ಕಾರ್ಯಕರ್ತೆ, ಸಹಾಯಕಿ
ಯರಿಗೆ ಪ್ರತ್ಯೇಕ ಸೇವಾ ನಿಯಮಾವಳಿ ರೂಪಿಸಬೇಕು. ಸಣ್ಣಪುಟ್ಟ ದೋಷಗಳಿಗೆ ಕೆಲಸದಿಂದ ಅಮಾನ್ಯ ಮಾಡಬಾರದು ಎಂದು ಒತ್ತಾಯಿಸಿದರು.

ಮೇಲ್ವಿಚಾರಕಿ ಹುದ್ದೆ ಶೇ 100ರಷ್ಟು ಕಾರ್ಯಕರ್ತೆಗೆ ನೀಡಬೇಕು. ವಯಸ್ಸಿನ ವಯೋಮಿತಿ ನಿಗದಿ, ಲಿಖಿತ ಪರೀಕ್ಷೆ ಇರಬಾರದು. ಸೇವಾ ಜೇಷ್ಠತೆ ಆಧಾರದ ಮೇಲೆ ಮುಂಬಡ್ತಿ ನೀಡಬೇಕು. ಸ್ವಯಂ ನಿವೃತ್ತಿ ಪಡೆದವರಿಗೆ ಎನ್ ಪಿಎಸ್ ಲೈಟ್ ಅಡಿಯಲ್ಲಿ ವಂತಿಗೆ ಹಣ ಹಿಂಪಡೆತ ಹಾಗೂ ಇಡಿಗಂಟು ನೀಡಬೇಕು ಎಂದು ಕೋರಿದರು.

ಗರ್ಭಕೋಶದ ಕಾಯಿಲೆಗೆ ಆರ್ಥಿಕ ನೆರವು ನೀಡಿ ಜಿಲ್ಲೆಯಲ್ಲಿ ಗುರುತಿಸಿದ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ಅವಕಾಶ ಇರುವಂತೆ ಆದೇಶದಲ್ಲಿ ಸೇರ್ಪಡೆ ಆಗಬೇಕು. ಶಸ್ತ್ರಚಿಕಿತ್ಸೆಗಳಿಗೆ ವೇತನ ಸಹಿತ ರಜೆ ನೀಡಬೇಕು. ಚಿಕಿತ್ಸೆ ವೆಚ್ಚ ₹1ಲಕ್ಷದವರೆಗೆ ಹೆಚ್ಚಿಸಬೇಕು. ಗೌರವಧನಪ್ರತಿ ತಿಂಗಳು 5ನೇ ತಾರೀಖಿನ ಒಳಗೆ ನೀಡಬೇಕು ಎಂದು ತಿಳಿಸಿದರು.

ಮಿನಿ ಕೇಂದ್ರಗಳನ್ನು ಪೂರ್ಣ ಕೇಂದ್ರಗಳಾಗಿ ಪರಿವರ್ತಿಸಬೇಕು. ಕಾರ್ಯಕರ್ತೆಯರಿಗೆ ನೀಡುವ ಸವಲತ್ತು ನೀಡಬೇಕು. ಆರ್ ಟಿಐ ಅಡಿಯಲ್ಲಿ ಅಂಗನವಾಡಿ ಕೇಂದ್ರಗಳನ್ನು ತರಬಾರದು. ಕಾರ್ಯಕರ್ತೆ, ಸಹಾಯಕಿ ಅನುಕಂಪದ ಆಧಾರದಲ್ಲಿ ನೇಮಕ ಮಾಡುವ ಆದೇಶದಲ್ಲಿ ತಿದ್ದುಪಡಿ ತರಬೇಕು ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ಖಾಲಿ ಇರುವ ಸ್ಥಾನಗಳನ್ನು ಕೂಡಲೇ ಭರ್ತಿ ಮಾಡಲು ಕ್ರಮ ವಹಿಸಬೇಕು. ಉರುವಲು ಬಿಲ್ಲನ್ನು ನಿಗದಿತ ಸಮಯಕ್ಕೆ ಪಾವತಿಸಬೇಕು ಎಂದರು.

ನಗರದ ಐಜೂರು ಟ್ಯಾಂಕಿನ ಬಳಿ ಸೇರಿದ ಅಂಗನವಾಡಿ ನೌಕರರು ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ಕಂದಾಯ ಭವನದ ಮುಂಭಾಗ ಪ್ರತಿಭಟಿಸಿದರು. ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಆರ್. ಪ್ರಶಾಂತ್‌ ಅವರಿಗೆ ಮನವಿ ಸಲ್ಲಿಸಿದರು.

ಸಂಘದ ಅಧ್ಯಕ್ಷೆ ಪುಷ್ಪಲತಾ, ಪ್ರಧಾನ ಕಾರ್ಯದರ್ಶಿ ಸಿ.ಜಯಲಕ್ಷ್ಮಮ್ಮ, ಅನ್ನಪೂರ್ಣ, ಸಿಐಟಿಯು ರಾಜ್ಯ ಉಪಾಧ್ಯಕ್ಷ ಪ್ರಕಾಶ್, ಬಿ.ವಿ. ರಾಘವೇಂದ್ರ, ಯತೀಶ್ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT