ADVERTISEMENT

₹5ಕೋಟಿ ವೆಚ್ಚದ ಸೇತುವೆ ಉದ್ಘಾಟನೆ

ಕಾಮಗಾರಿಗೆ ಅಡ್ಡಿ ಪಡಿಸಿದ್ದ ಹಿಂದಿನ ಅರಣ್ಯ ಸಚಿವ– ಡಿ.ಕೆ.ಶಿವಕುಮಾರ್‌

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2017, 7:21 IST
Last Updated 25 ಫೆಬ್ರುವರಿ 2017, 7:21 IST

ಕನಕಪುರ: ತುಂಬಾ ವಿರೋಧದ ನಡುವೆಯು ಮಡಿವಾಳದ ಶಿವನಾಂಕಾರೇಶ್ವರ ದೇವಸ್ಥಾನಕ್ಕೆ ಬರುವ ಅರ್ಕಾವತಿ ನದಿಗೆ ಅಡ್ಡಲಾಗಿ ಸೇತುವೆ ನಿರ್ಮಾಣ ಮಾಡಲಾಯಿತು ಎಂದು ಇಂಧನ ಸಚಿವ ಡಿ.ಕೆ.ಶಿವಕುಮಾರ್‌ ಹೇಳಿದರು.

ತಾಲ್ಲೂಕಿನ ಸಂಗಮ ಬಳಿಯ ಮಡಿವಾಳದ ಶಿವನಾಂಕಾರೇಶ್ವರ ದೇವಾಲಯಕ್ಕೆ ಹೋಗುವ ಅರ್ಕಾವತಿ ನದಿಗೆ ಅಡ್ಡಲಾಗಿ ₹ 5 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಿದ್ದ ಸೇತುವೆಯನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿದರು.

ನೂರಾರು ವರ್ಷಗಳ ಇತಿಹಾಸವಿರುವ ಮಡಿವಾಳಕ್ಕೆ ಬರುವ ಅರ್ಕಾವತಿ ನದಿಗೆ ಸೇತುವೆ ನಿರ್ಮಾಣ ಮಾಡಿಕೊಡುವಂತೆ ಭಕ್ತರು ಮತ್ತು ತಮ್ಮಡಗೇರಿ ಗ್ರಾಮದ ಜನತೆ ಒತ್ತಾಯ ಮಾಡುತ್ತಿದ್ದರು. ಆದರೆ ಸೇತುವೆ ನಿರ್ಮಾಣ ಮಾಡಲು ಆಗಿರಲಿಲ್ಲ. ನಾಲ್ಕೈದು ವರ್ಷಗಳ ಹಿಂದೆ ಸೇತುವೆ ನಿರ್ಮಾಣಕ್ಕೆ ಚಾಲನೆ ನೀಡಿ ಕಾಮಗಾರಿ ನಡೆಯುತ್ತಿದ್ದಾಗ ಅರಣ್ಯ ಸಚಿವರಾಗಿದ್ದ ಸಿ.ಪಿ.ಯೋಗೇಶ್ವರ್‌ ಬಂದು ಸೇತುವೆ ನಿರ್ಮಾಣಕ್ಕೆ ಅಡ್ಡಿಪಡಿಸಿ ಗುತ್ತಿಗೆದಾರರು ಮತ್ತು ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಿ ತೊಂದರೆ ಕೊಟ್ಟಿದ್ದರು ಎಂದರು.

ನಂತರದ ದಿನಗಳಲ್ಲಿ ಕಾನೂನಿನಡಿ ಅವಕಾಶ ಮಾಡಿಸಿ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ತುಂಬಾ ಶ್ರಮ ತೆಗೆದುಕೊಂಡು ಸೇತುವೆಯನ್ನು ಪೂರ್ಣಗೊಳಿಸಿ ಈಗ ಸಾರ್ವಜನಿಕರ ಉಪಯೋಗಕ್ಕೆ ನೀಡಿದ್ದಾರೆ. ಅಭಿವೃದ್ದಿ ಕೆಲಸ ಮಾಡಲು ಯಾರು ತೊಂದರೆ ಕೊಡಬಾರದು, ಒಳ್ಳೆಯದಾಗುವುದಿಲ್ಲ ಎಂದು ತಿಳಿಸಿದರು.

ಇಲ್ಲಿನ ದೇವಾಲಯ ತುಂಬಾ ಪುರಾತನವಾದದ್ದು ಹಾಗೂ ತನ್ನದೇ ಇತಿಹಾಸವನ್ನು ಹೊಂದಿದೆ, ಪ್ರತಿ ಶಿವರಾತ್ರಿಯಂದೇ ಜಾತ್ರಾ ಮಹೋತ್ಸವ, ಕೊಂಡೋತ್ಸವ ನಡೆಯುವುದರಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಬರುತ್ತಾರೆ, ನೆಮ್ಮದಿ ಹುಡುಕಿಕೊಂಡು ಬರುವ ಭಕ್ತರಿಗೆ ಭಗವಂತ ಒಳ್ಳೆಯದನ್ನು ಮಾಡಲಿ ಎಂದರು.

ತೇಜಸ್ವಿನಿಯವರು ದುರ್ಯೋಧನರೆಂದು ಹೇಳಿದ್ದಾರಲ್ಲಾ ಅದಕ್ಕೆ ಏನು ಹೇಳುತ್ತೀರಾ ಎಂದು ಕೇಳಿದಾಗ ದೊಡ್ಡವರ ಬಗ್ಗೆ ನಾನೇನು ಹೇಳುವುದಿಲ್ಲ ಎಂದು ಹೇಳಿ ಹೊರಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.