ADVERTISEMENT

‘ನನ್ನ ಕೊಡುಗೆ ಪ್ರಶ್ನಿಸುವ ನೈತಿಕತೆ ಕಾಂಗ್ರೆಸ್‌ಗಿಲ್ಲ’

​ಪ್ರಜಾವಾಣಿ ವಾರ್ತೆ
Published 12 ಜನವರಿ 2018, 6:47 IST
Last Updated 12 ಜನವರಿ 2018, 6:47 IST
ಅಂಬೇಡ್ಕರ್ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಆಶ್ರಯ ಮನೆ ಫಲಾನುಭವಿಗಳನ್ನು ಶಾಸಕ ಎಚ್.ಡಿ. ಕುಮಾರಸ್ವಾಮಿ ಸಾಂಕೇತಿಕವಾಗಿ ಆಯ್ಕೆ ಮಾಡಿದರು
ಅಂಬೇಡ್ಕರ್ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಆಶ್ರಯ ಮನೆ ಫಲಾನುಭವಿಗಳನ್ನು ಶಾಸಕ ಎಚ್.ಡಿ. ಕುಮಾರಸ್ವಾಮಿ ಸಾಂಕೇತಿಕವಾಗಿ ಆಯ್ಕೆ ಮಾಡಿದರು   

ರಾಮನಗರ: ಕ್ಷೇತ್ರಕ್ಕೆ ಶಾಸಕರ ಕೊಡುಗೆ ಏನು? ಎಂದು ಟೀಕಿಸುವವರು ಮೊದಲು ಅವರ ಸರ್ಕಾರ ನೀಡಿರುವ ಕೊಡುಗೆ ಏನು ಎಂಬುದನ್ನು ಬಹಿರಂಗಪಡಿಸಲಿ ಎಂದು ಶಾಸಕ ಎಚ್‌.ಡಿ. ಕುಮಾರಸ್ವಾಮಿ ಸವಾಲು ಹಾಕಿದರು.

ಇಲ್ಲಿನ ಅಂಬೇಡ್ಕರ್ ಭವನದಲ್ಲಿ ಗುರುವಾರ ನಡೆದ ಕಾರ್ಯಕ್ರಮದಲ್ಲಿ ಆಶ್ರಯ ಯೋಜನೆಯ ಅಡಿ 240 ಮನೆಗಳ ಫಲಾನುಭವಿಗಳನ್ನು ಲಾಟರಿ ಮೂಲಕ ಸಾಂಕೇತಿಕವಾಗಿ ಆಯ್ಕೆ ಮಾಡಿ ಅವರು ಮಾತನಾಡಿದರು. ‘ಈ ಯೋಜನೆಯು 12 ವರ್ಷ ಹಳೆಯದು. ಒಟ್ಟು 1560 ಬಡವರು ತಲಾ ₹5100 ಶುಲ್ಕ ತುಂಬಿ ದಶಕದಿಂದ ಮನೆಗಳಿಗಾಗಿ ಕಾದಿದ್ದಾರೆ. ಅಂತಹವರಿಗೆ ಅನುಕೂಲ ಆಗಲಿ ಎನ್ನುವ ಕಾರಣಕ್ಕೆ ಈ ಕಾರ್ಯಕ್ರಮ ಹಮ್ಮಿಕೊಂಡಿದ್ದು, ವಸತಿ ಸಚಿವರನ್ನೂ ಸಂರ್ಪಕಿಸಿದ್ದೆ. ನೀವೆ ಕಾರ್ಯಕ್ರಮ ಮಾಡಿಕೊಳ್ಳಿ ಎಂದು ಅವರು ತಿಳಿಸಿದ್ದರು. ಹೀಗಾಗಿ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಯಾವುದೇ ಆಹ್ವಾನ ಪತ್ರಿಕೆ ಮುದ್ರಿಸಿಲ್ಲ’ ಎಂದು ಸ್ಪಷ್ಟನೆ ನೀಡಿದರು.

‘ಕಾರ್ಯಕ್ರಮ ಆಯೋಜನೆ ಸಂಬಂಧ ಇಲ್ಲಿನ ನಗರಸಭೆ ಅಧ್ಯಕ್ಷರು ಹಾಗೂ ಕಾಂಗ್ರೆಸ್ ಸದಸ್ಯರ ಹೇಳಿಕೆಗಳನ್ನು ಪತ್ರಿಕೆಯಲ್ಲಿ ಓದಿದೆ. ಸಚಿವರನ್ನು, ಸಂಸದರನ್ನು ಆಹ್ವಾನಿಸಿಲ್ಲ ಎಂದೆಲ್ಲ ಹೇಳಿದ್ದಾರೆ. ನಾನು ಮುಖ್ಯಮಂತ್ರಿಯಾಗಿದ್ದ ವೇಳೆ ಅವರು ಎಂದೂ ನನ್ನನ್ನು ಕನಕಪುರಕ್ಕೆ ಆಹ್ವಾನಿಸಲಿಲ್ಲ. ಎರಡು ಬಾರಿ ಸಂಸದನಾಗಿದ್ದ ಸಂದರ್ಭವೂ ಕನಿಷ್ಠ ಕಾರ್ಯಕ್ರಮಕ್ಕೆ ಕರೆಯುವ ಗೌರವ ತೋರಿಸಿಲ್ಲ. ಅಂತಹವರಿಂದ ನಾನು ಪಾಠ ಕಲಿಯಬೇಕೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ADVERTISEMENT

‘ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವಿದೆ. ನಗರಸಭೆಯಲ್ಲಿಯೂ ಅವರದ್ದೇ ಆಡಳಿತ ಇದೆ. ಹೀಗಿದ್ದೂ ಇಲ್ಲಿನ ಜನರಿಗೆ ಯಾವುದೇ ಕೊಡುಗೆ ನೀಡಿಲ್ಲ. ಕನಿಷ್ಠ ನಾನು ಕಟ್ಟಿಸಿರುವ ಕಟ್ಟಡಗಳಿಗೆ ಬಣ್ಣ ಹೊಡೆಯಲಿ, ರಸ್ತೆಗಳ ಗುಂಡಿ ಮುಚ್ಚಿಸಲಿ’ ಎಂದು ಟೀಕೆ ಮಾಡಿದರು.

‘ಈಗ ನನ್ನನ್ನು ಟೀಕಿಸಿದವರಲ್ಲಿ ಕೆಲವರು ತಿಬ್ಬೇಗೌಡನ ದೊಡ್ಡಿ ಬಳಿ ರೈತರ ಜಮೀನುಗಳನ್ನು ಅಕ್ರಮವಾಗಿ ಜಿಪಿಎ ಮಾಡಿಕೊಂಡಿದ್ದು, ಅದನ್ನೇ ಸರ್ಕಾರಕ್ಕೆ ಮಾರಿ ಕೋಟಿಗಟ್ಟಲೆ ಹಣ ಹೊಡೆಯಲು ಹುನ್ನಾರ ನಡೆಸಿದ್ದರು. ಅಂತಹವರಿಗೆ ನನ್ನನ್ನು ಟೀಕಿಸುವ ನೈತಿಕತೆ ಏನಿದೆ’ ಎಂದು ಪ್ರಶ್ನಿಸಿದರು.

ಸಾಂಕೇತಿಕ ಆಯ್ಕೆ: ಸದ್ಯ ಲಾಟರಿ ಮೂಲಕ ಫಲಾನುಭವಿಗಳನ್ನು ಸಾಂಕೇತಿಕವಾಗಿ ಆಯ್ಕೆ ಮಾಡಲಾಗಿದೆ. ಮುಂದೆ ಮತ್ತೊಮ್ಮೆ ಕಾರ್ಯಕ್ರಮ ಆಯೋಜಿಸಿ ಅಧಿಕಾರಿಗಳು ಉಳಿದ ಫಲಾನುಭವಿಗಳನ್ನು ಆಯ್ಕೆ ಮಾಡಲಿದ್ದಾರೆ ಎಂದು ಕುಮಾರಸ್ವಾಮಿ ತಿಳಿಸಿದರು.

ನಿರ್ಮಾಣವಾಗಿರುವ ಮನೆಗಳು ಈಗಾಗಲೇ ಹಾನಿಗೆ ಒಳಗಾಗಿದ್ದು, ಎಲ್ಲವನ್ನೂ ದುರಸ್ತಿಪಡಿಸಿದ ನಂತರವಷ್ಟೇ ಹಸ್ತಾಂತರ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಮುಂಬರುವ ಚುನಾವಣೆಯಲ್ಲಿ ನಮ್ಮ ಪಕ್ಷವೇ ಅಧಿಕಾರಕ್ಕೆ ಬರಲಿದೆ. ಕ್ಷೇತ್ರದಲ್ಲಿನ ಎಲ್ಲ ಬಡ ಕುಟುಂಬಗಳಿಗೂ ತಿಂಗಳ ಒಳಗೆ ಸೂರು ಕಲ್ಪಿಸಲಾಗುವುದು ಎಂದು ಅವರು ಭರವಸೆ ನೀಡಿದರು.

ವಿಧಾನ ಪರಿಷತ್ ಸದಸ್ಯ ಅಪ್ಸರ್ ಆಗಾ, ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಅಶೋಕ್‌ಕುಮಾರ್, ತಾಲ್ಲೂಕು ಘಟಕದ ಅಧ್ಯಕ್ಷ ರಾಜಶೇಖರ್, ಹಿಂದುಳಿದ ವರ್ಗಗಳ ಅಧ್ಯಕ್ಷ ಉಮೇಶ್‌, ನಗರಸಭೆ ಸದಸ್ಯರಾದ ರವಿ, ಮಂಜುನಾಥ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.