ADVERTISEMENT

ಶಕ್ತಿ ಪ್ರದರ್ಶನಕ್ಕೆ ವೇದಿಕೆ ಸಜ್ಜು

​ಪ್ರಜಾವಾಣಿ ವಾರ್ತೆ
Published 17 ಜನವರಿ 2018, 5:57 IST
Last Updated 17 ಜನವರಿ 2018, 5:57 IST
ಚನ್ನಪಟ್ಟಣದ ದೊಡ್ಡಮಳೂರಿನಲ್ಲಿ ಕಾರ್ಯಕ್ರಮಕ್ಕೆಂದು ನಿರ್ಮಿಸಿದ ವೇದಿಕೆ
ಚನ್ನಪಟ್ಟಣದ ದೊಡ್ಡಮಳೂರಿನಲ್ಲಿ ಕಾರ್ಯಕ್ರಮಕ್ಕೆಂದು ನಿರ್ಮಿಸಿದ ವೇದಿಕೆ   

ರಾಮನಗರ: ಬಿಜೆಪಿಯು ಹಮ್ಮಿಕೊಂಡಿರುವ ಪರಿವರ್ತನಾ ಯಾತ್ರೆ ಇದೇ 17ರಂದು ಜಿಲ್ಲೆಯ ನಾಲ್ಕು ತಾಲ್ಲೂಕುಗಳಲ್ಲಿ ಸಂಚರಿಸಲಿದೆ. ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ನಡೆದಿರುವ ಈ ಯಾತ್ರೆಯಲ್ಲಿ ಪಕ್ಷದ ಪ್ರಮುಖ ನಾಯಕರೆಲ್ಲರೂ ಪಾಲ್ಗೊಳ್ಳುತ್ತಿದ್ದಾರೆ. ಜಿಲ್ಲೆಯಲ್ಲಿಯೂ ನಡೆಯಲಿರುವ ಕಾರ್ಯಕ್ರಮಗಳಲ್ಲಿ ರಾಷ್ಟ್ರ ಹಾಗೂ ರಾಜ್ಯ ಮಟ್ಟದ ಪ್ರಭಾವಿ ನಾಯಕರು ಭಾಗವಹಿಸಲಿದ್ದಾರೆ.

ಮೊದಲ ಕಾರ್ಯಕ್ರಮ ಮಾಗಡಿಯ ಕೋಟೆ ಮೈದಾನದಲ್ಲಿ ನಿಗದಿಯಾಗಿದ್ದು, ಬೆಳಿಗ್ಗೆ 11ರ ಸುಮಾರಿಗೆ ಆರಂಭಗೊಳ್ಳಲಿದೆ. ನಂತರದಲ್ಲಿ ಚನ್ನಪಟ್ಟಣದ ದೊಡ್ಡಮಳೂರು ಬಳಿಯ ಮೈದಾನದಲ್ಲಿ ಮಧ್ಯಾಹ್ನ 12ಕ್ಕೆ ಬೃಹತ್‌ ಸಮಾವೇಶ ನಡೆಯಲಿದೆ. ರಾಮನಗರದ ಹಳೆಯ ಬಸ್‌ ನಿಲ್ದಾಣ ವೃತ್ತದ ಬಳಿ ಮಧ್ಯಾಹ್ನ 3.30ಕ್ಕೆ ಕಾರ್ಯಕ್ರಮ ಆಯೋಜಿಸಲಾಗಿದೆ. ಅಲ್ಲಿಂದ ಸಂಜೆ 5ಕ್ಕೆ ಕನಕಪುರದ ಚನ್ನಬಸಪ್ಪ ವೃತ್ತದಲ್ಲಿ ಯಡಿಯೂರಪ್ಪ ಅವರು ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ಕಾರ್ಯಕ್ರಮ ಆರಂಭಕ್ಕೂ ಮುನ್ನ ಅಲ್ಲಲ್ಲಿ ಮೆರವಣಿಗೆ ಮೂಲಕ ಜನರನ್ನು ಸೆಳೆಯಲು ಬಿಜೆಪಿಯು ಉದ್ದೇಶಿಸಿದೆ. ರಾಮನಗರದಿಂದ ಚನ್ನಪಟ್ಟಣಕ್ಕೆ ಬೈಕ್‌ ರ‍್ಯಾಲಿ ಆಯೋಜನೆ ಆಗಿದೆ. ಈ ನಾಲ್ಕೂ ಕಾರ್ಯಕ್ರಮಗಳ ಸಿದ್ಧತೆಗಳು ಪೂರ್ಣಗೊಂಡಿದ್ದು, ಸಾವಿರಾರು ಸಂಖ್ಯೆಯಲ್ಲಿ ಪಕ್ಷದ ಕಾರ್ಯಕರ್ತರು ಪಾಲ್ಗೊಳ್ಳಲಿದ್ದಾರೆ ಎಂದು ಬಿಜೆಪಿಯ ಜಿಲ್ಲಾ ಮಾಧ್ಯಮ ವಕ್ತಾರ ರುದ್ರದೇವರು ತಿಳಿಸಿದರು.

ADVERTISEMENT

ಶಕ್ತಿ ಪ್ರದರ್ಶನ: ಚನ್ನಪಟ್ಟಣದಲ್ಲಿ ನಡೆಯಲಿರುವ ಸಮಾವೇಶದಲ್ಲಿ ಬಿಜೆಪಿಯ ಶಕ್ತಿ ಪ್ರದರ್ಶನ ಮಾಡಲು ಶಾಸಕ ಸಿ.ಪಿ. ಯೋಗೇಶ್ವರ್ ಯೋಜಿಸಿದ್ದಾರೆ. ಕಮಲ ಪಾಳಯಕ್ಕೆ ಸೇರ್ಪಡೆಗೊಂಡ ಬಳಿಕ ಅವರು ಆಯೋಜಿಸುತ್ತಿರುವ ಮೊದಲ ಸಾರ್ವಜನಿಕ ಸಮಾವೇಶ ಇದಾಗಿದೆ.

ದೊಡ್ಡಮಳೂರು ಬಳಿಯ ಜಮೀನಿನಲ್ಲಿ ಈಗಾಗಲೇ ಬೃಹತ್‌ ಆದ ವೇದಿಕೆ ಸಜ್ಜಾಗಿದೆ. ಬರೋಬ್ಬರಿ 40 ಸಾವಿರ ಮಂದಿಗೆ ಆಸನದ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಬಿಜೆಪಿ ರಾಷ್ಟ್ರ ಘಟಕದ ಅಧ್ಯಕ್ಷ ಅಮಿತ್‌ ಶಾ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಾರೆ ಎಂದು ಹೇಳಲಾಗಿತ್ತಾದರೂ ಅದು ಸಾಧ್ಯವಾಗಿಲ್ಲ. ಬದಲಾಗಿ ಕೇಂದ್ರ  ಸಚಿವರಾದ ಅರುಣ್‌ ಜೇಟ್ಲಿ ಅಥವಾ ನಿತಿನ್ ಗಡ್ಕರಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಸಾಧ್ಯತೆ ಇದೆ.

ಸಚಿವರಿಗೆ ಟಾಂಗ್ ನೀಡುವ ಉದ್ದೇಶ’

ಈಚೆಗೆ ಚನ್ನಪಟ್ಟಣದ ಸರ್ಕಾರಿ ಪ್ರೌಢಶಾಲೆ ಮೈದಾನದಲ್ಲಿ ನಡೆದ ರಾಜ್ಯ ಸರ್ಕಾರದ ಸಾಧನಾ ಸಮಾವೇಶವು ಸರ್ಕಾರದ ಸಾಧನೆಗಳ ಜೊತೆಗೆ ಕಾಂಗ್ರೆಸ್‌ ಶಕ್ತಿ ಪ್ರದರ್ಶನದ ವೇದಿಕೆಯೂ ಆಗಿತ್ತು. ಅದಕ್ಕೆ ಉತ್ತರವಾಗಿ ಬುಧವಾರ ದೊಡ್ಡಮಳೂರಿನಲ್ಲಿ ಅದ್ದೂರಿ ಕಾರ್ಯಕ್ರಮ ಆಯೋಜನೆಗೆ ಯೋಗೇಶ್ವರ್‌ ಮುಂದಾಗಿದ್ದಾರೆ. ಮುಖ್ಯವಾಗಿ ಸಚಿವ ಡಿ.ಕೆ. ಶಿವಕುಮಾರ್‌ಗೆ ಟಾಂಗ್‌ ನೀಡುವ ಯೋಜನೆ ಅವರ ತಲೆಯಲ್ಲಿದೆ. ಹೀಗಾಗಿ ಚನ್ನಪಟ್ಟಣದ ಸಮಾವೇಶದತ್ತ ಎಲ್ಲರ ಚಿತ್ತ ನೆಟ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.