ADVERTISEMENT

‘ಸ್ವಂತ ಬಲದಿಂದ ಜೆಡಿಎಸ್‌ ಸರ್ಕಾರ ರಚನೆ’

​ಪ್ರಜಾವಾಣಿ ವಾರ್ತೆ
Published 23 ಜನವರಿ 2018, 6:51 IST
Last Updated 23 ಜನವರಿ 2018, 6:51 IST
ಕೇತಿಗಾನಹಳ್ಳಿಯಲ್ಲಿ ಸೋಮವಾರ ನಡೆದ ಸಮಾರಂಭದಲ್ಲಿ ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಮಾತನಾಡಿದರು.
ಕೇತಿಗಾನಹಳ್ಳಿಯಲ್ಲಿ ಸೋಮವಾರ ನಡೆದ ಸಮಾರಂಭದಲ್ಲಿ ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಮಾತನಾಡಿದರು.   

ಬಿಡದಿ (ರಾಮನಗರ) : 2018 ರ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷ ಸ್ವಂತ ಬಲದ ಮೇಲೆ ಸರ್ಕಾರ ರಚನೆ ಮಾಡುವ ಮೂಲಕ ಪ್ರಾದೇಶಿಕ ಪಕ್ಷದ ಮಹತ್ವ ಏನು ಎಂಬುದನ್ನು ತೋರಿಸುತ್ತದೆ ಎಂದು ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಹೇಳಿದರು.

ಇಲ್ಲಿನ ಕೇತಿಗಾನಹಳ್ಳಿ ತೋಟದ ಮನೆಯಲ್ಲಿ ರಾಜ್ಯ ನಿಖಿಲ್ ಅಭಿಮಾನಿ ಬಳಗದಿಂದ ಸೋಮವಾರ ಆಯೋಜಿಸಿದ್ದ ನಿಖಿಲ್ ಕುಮಾರ್‌ ಹುಟ್ಟು ಹಬ್ಬದ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

‘ರಾಜ್ಯದ ಜನರು ಈ ಬಾರಿ ನನಗೆ ಆಶೀರ್ವಾದ ಮಾಡಿದರೆ ಇನ್ನು 50 ವರ್ಷ ಅನ್ಯ ಪಕ್ಷದವರು ಅಧಿಕಾರಕ್ಕೆ ಬಾರದ ರೀತಿಯಲ್ಲಿ ರಾಜ್ಯ ಅಭಿವೃದ್ಧಿ ಮಾಡಿ ತೋರಿಸುತ್ತೇನೆ. ಉತ್ತರ ಕರ್ನಾಟಕದಲ್ಲಿ 40 ಸ್ಥಾನ ಹೈದರಾಬಾದ್ ಕರ್ನಾಟಕದಲ್ಲಿ 19 ರಿಂದ 20 ಸ್ಥಾನ ಗೆದ್ದೇ ಗೆಲ್ಲುತ್ತೇವೆ. ಅದರಂತೆ ಹಳೇ ಕರ್ನಾಟಕ ಭಾಗದಲ್ಲಿ 70 ಸ್ಥಾನಗಳಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ, ಆಗ ನಾನು ಅಂದುಕೊಂಡ ರೈತರ ಸರ್ಕಾರಸ್ಥಾಪಿಸಲು ಸಾಧ್ಯವಾಗುತ್ತದೆ’
ಎಂದರು.

ADVERTISEMENT

‘ರಾಜಕೀಯ ಪಕ್ಷಗಳ ಜತೆಗೆ ಹೊಂದಾಣಿಕೆ ಮಾಡಿಕೊಳ್ಳದೆ ಸ್ವಂತ ಬಲದ ಮೇಲೆ ಸರ್ಕಾರ ನಡೆಸುತ್ತೇನೆ. ಉತ್ತರ ಕರ್ನಾಟಕದಲ್ಲಿ ಈ ಬಾರಿ ಜೆಡಿಎಸ್ ಪಕ್ಷಕ್ಕೆ ಉತ್ತಮ ಭವಿಷ್ಯವಿದೆ. ದೇವೇಗೌಡರು ಆರೋಗ್ಯ ಸರಿಯಿಲ್ಲದಿದ್ದರೂ ರಾಜ್ಯ ಪ್ರವಾಸ ಮಾಡಿ ಪಕ್ಷ ಸಂಘಟನೆ ಮಾಡುತ್ತಿದ್ದಾರೆ. ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬರುತ್ತದೆ. ಆಗ ಪ್ರತಿ ತಿಂಗಳ ಒಂದು ದಿನವನ್ನು ರೈತರೊಂದಿಗೆ ಚರ್ಚೆ ಮಾಡಲು ಮತ್ತು ಸರ್ಕಾರದಿಂದ ಅನುಷ್ಠಾನಗೊಳಿಸುವ ಅಭಿವೃದ್ಧಿ ಕಾರ್ಯಕ್ರಮಗಳ ಅನು ಷ್ಠಾನ ಚರ್ಚೆಗೆ ಮೀಸಲಿಡುತ್ತೇನೆ’ ಎಂದರು.

‘ಮಾಗಡಿ ಕ್ಷೇತ್ರದಲ್ಲಿ ಏನಾದರೂ ಸೋತರೆ ನಾನು ಮುಂದೆ ರಾಜಕೀಯ ಮಾಡಲು ಬೆಲೆ ಇರುವುದಿಲ್ಲ. ಆದ್ದರಿಂದ ಮಾಗಡಿ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷ ಗೆಲ್ಲಲ್ಲೇಬೇಕು. ಬಾಲಕೃಷ್ಣ ನನ್ನ ಜತೆ ಇದ್ದಾಗ ಜನ ಸೇರಿಸಲು ಏನನ್ನೂ ಕೊಡುತ್ತಿರಲಿಲ್ಲ. ಆದರೆ ಇವತ್ತು ಸೀರೆ, ಹಣ ಕೊಟ್ಟು ಜನ ಸೇರಿಸುವ ಪರಿಸ್ಥಿತಿ ಅವರಿಗೆ ಬಂದಿದೆ’ ಎಂದು ತಿಳಿಸಿದರು.

‘ಚನ್ನಪಟ್ಟಣ ಕ್ಷೇತ್ರದ ಜನರು ನನ್ನ ಕೈ ಹಿಡಿಯುತ್ತಿಲ್ಲ, ಅದು ಯಾಕೆ ಅಂತ ತಿಳಿಯುತ್ತಿಲ್ಲ. ಚನ್ನಪಟ್ಟಣದಲ್ಲಿ ಅನ್ಯ ಪಕ್ಷದವರನ್ನು ಶಾಸಕರನ್ನಾಗಿ ಮಾಡಬೇಡಿ. ಅಲ್ಲಿನ ಮುಖಂಡರ ಒಳ ಜಗಳದಿಂದ ಪಕ್ಷ ಹಿನ್ನಡೆ ಅನು ಭವಿಸಿದ್ದರೂ, 73 ಸಾವಿರಕ್ಕೂ ಹೆಚ್ಚು ಮತದಾರರು ಜೆಡಿಎಸ್ ಪರ ಇದ್ದಾರೆ. ಈ ಬಗ್ಗೆ ಕನಕಪುರ ಮತ್ತು ಚನ್ನಪಟ್ಟಣ ಮುಖಂಡರ ಪ್ರತ್ಯೇಕ ಸಭೆಯನ್ನು ಶೀಘ್ರವಾಗಿ ಕರೆಯಲಾಗುತ್ತದೆ’ ಎಂದರು.

ಮೈಸೂರು ಜಿಲ್ಲೆಯಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯ ಇಲವಾಲ ಶಿವಮೂರ್ತಿ ಮನೆಗೆ ಮಧ್ಯರಾತ್ರಿ ಹೋಗಿ ಅವರಿಗೆ ₹5 ಕೋಟಿ ಹಣ ಕೊಟ್ಟು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಗೆಲ್ಲಲ್ಲು ತಂತ್ರ ಮಾಡು ತ್ತಿದ್ದಾರೆ. ಅವರಿಗೆ ಚುನಾವಣೆ ನಡೆಸಲು ರಾಜ್ಯದಲ್ಲಿ ಎಷ್ಟು ಹಣ ಖರ್ಚು ಮಾಡಲು ಸಿದ್ಧರಿದ್ದು, ಹಣಕ್ಕೆ ಮತವನ್ನು ಮಾರಿಕೊಳ್ಳದೆ ಜನರು ಸ್ವಾಭಿಮಾನ ಮೆರೆಯಬೇಕಿದೆ ಎಂದರು.

‘ಚಿಕ್ಕಮಾದು ಕುಟುಂಬದವರಿಗೆ ಪಕ್ಷದ ಟಿಕೆಟ್ ಕೊಡುವುದುದಾಗಿ ಹೇಳಿದ್ದೇನೆ, ಅದರೂ ಅವರ ಕುಟುಂಬ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ್ದಾರೆ. ನಾವು ಅವರನ್ನು ನಾಯಕನನ್ನಾಗಿ ಸೃಷ್ಟಿ ಮಾಡಿ ಅವರನ್ನು ಚುನಾವಣೆಯಲ್ಲಿ ಗೆಲ್ಲಿಸಿದ್ದೇನೆ’ ಎಂದು ತಿಳಿಸಿದರು.

ಶಾಸಕ ಮಧು ಬಂಗಾರಪ್ಪ, ನಟ ನಿಖಿಲ್‌ಕುಮಾರ್‌, ಹಿರಿಯ ಮುಖಂಡರಾದ ಕೆ. ಅನ್ನದಾನಿ, ಮರಿಲಿಂ ಗೇಗೌಡ, ಜಿಲ್ಲಾ ಪಂಚಾಯಿತಿ ಸದಸ್ಯ ಎ.ಮಂಜು, ಮಂಡ್ಯಶಿವಕುಮಾರ್, ಜೆಡಿಎಸ್‌ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಪಿ. ಅಶೋಕ್‌ಕುಮಾರ್, ತಾಲ್ಲೂಕು ಘಟದ ಅಧ್ಯಕ್ಷ ರಾಜಶೇಖರ್, ಬಿಡದಿ ಪುರಸಭೆ ಅಧ್ಯಕ್ಷೆ ವೆಂಕಟೇಶಮ್ಮರಾಮಕೃಷ್ಣಯ್ಯ, ಮುಖಂಡರಾದ ಗೂಳಿಗೌಡ, ನರಸಿಂಹಯ್ಯ, ಜಗದೀಶ್, ಪ್ರಕಾಶ್, ನೇತ್ರಾವತಿ ಮಂಜುನಾಥ್ ಇತರರು ಇದ್ದರು.

ಪ್ರೀತಿ ತೋರಿದ ಜನರು

‘ರಾಮನಗರ ಜಿಲ್ಲೆಯಲ್ಲಿ ನಾನು ಸೋಲು–ಗೆಲವು ಎರಡನ್ನು ಕಂಡಿದ್ದೇನೆ. ನಾನು ಸಾತನೂರು ಕ್ಷೇತ್ರದಿಂದ ಸೋತ ನಂತರ ರಾಜಕೀಯ ಬೇಡ ಎಂದು ನಿರ್ಧಾರ ಮಾಡಿದ್ದೆ. ಆದರೆ ರಾಮನಗರದ ಜನರು ತೋರಿದ ಪ್ರೀತಿ ನನ್ನ ನಿರ್ಧಾರ ಬದಲಿಸಿ ಈ ಹಂತದಲ್ಲಿ ರಾಜ್ಯದಲ್ಲಿ ಗುರುತಿಸಿಕೊಳ್ಳಲು ಸಾಧ್ಯವಾಯಿತು’ ಎಂದು ಎಚ್‌.ಡಿ.ಕುಮಾರಸ್ವಾಮಿ ತಿಳಿಸಿದರು.

‘ಮುಖಂಡರು ಸಣ್ಣಪುಟ್ಟ ಸಮಸ್ಯೆಗಳನ್ನು ಬದಿಗೊತ್ತಿ ಈ ಬಾರಿ ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ನನಗೆ ಬೆಂಬಲ ನೀಡಿ’ ಎಂದು ಮನವಿ ಮಾಡಿದರು.

* * 

ರಾಮನಗರ ಕ್ಷೇತ್ರದೊಡನೆ ನನಗೆ ತಾಯಿ -ಮಗನ ಸಂಬಂಧವಿದೆ. ಕ್ಷೇತ್ರದ ಜನರು ಯಾವತ್ತಿಗೂ ನನಗೆ ವಿಷ ಹಾಕುವುದಿಲ್ಲ.
ಎಚ್.ಡಿ. ಕುಮಾರಸ್ವಾಮಿ
ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.