ADVERTISEMENT

ಅರ್ಚಕರ ಹತ್ಯೆ: ಶಿಕ್ಷೆ ಪ್ರಕಟ

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2018, 13:53 IST
Last Updated 6 ಅಕ್ಟೋಬರ್ 2018, 13:53 IST

ರಾಮನಗರ: ಬಿಡದಿಯ ಈಶ್ವರ ದೇವಸ್ಥಾನದ ಅರ್ಚಕರಾಗಿದ್ದ ಡಿ.ಎಸ್. ಗುರುದೇವ್ ಹತ್ಯೆ ಪ್ರಕರಣದ ಆರೋಪಿಗಳಿಗೆ ಇಲ್ಲಿನ ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್‌ ನ್ಯಾಯಾಲಯವು ಶನಿವಾರ ಶಿಕ್ಷೆ ಹಾಗೂ ದಂಡ ಆದೇಶ ಪ್ರಕಟಿಸಿತು.

ಪ್ರಕರಣದ ಮೊದಲ ಆರೋಪಿ ಹರ್ಷವರ್ಧನ ಅಲಿಯಾಸ್ ಹರೀಶ್‌ಗೆ ಜೀವಾವಧಿ ಶಿಕ್ಷೆ ನೀಡಿದ್ದರೆ, ಉಳಿದ ಆರೋಪಿಗಳಾದ ಜ್ಞಾನಶೇಖರ, ಮೋಹನ್‌ ಹಾಗೂ ನೀಲಮ್ಮ ಅವರಿಗೆ ಮೂರು ವರ್ಷಗಳ ಶಿಕ್ಷೆ ವಿಧಿಸಿದೆ. ನಾಲ್ವರೂ ಆರೋಪಿಗಳಿಗೂ ತಲಾ ₹ 5 ಸಾವಿರ ದಂಡ ಹಾಕಿದೆ.

ಪ್ರಕರಣದ ಹಿನ್ನೆಲೆ: ಮನೆಯ ಮುಂದೆ ಕೊಳಚೆ ನೀರು ಹರಿಯುವ ವಿಚಾರಕ್ಕೆ ಸಂಬಂಧಿಸಿ 2010ರ ಮೇ 15ರಂದು ಬಿಡದಿಯ ಈಶ್ವರ ದೇವಸ್ಥಾನದ ಹಿಂಭಾಗದ ಕನ್ಸರ್ವೆನ್ಸಿ ರಸ್ತೆಯಲ್ಲಿನ ಎರಡು ಕುಟುಂಬಗಳ ನಡುವೆ ಗಲಾಟೆ ಆರಂಭವಾಗಿತ್ತು.

ADVERTISEMENT

ಈ ಸಂದರ್ಭ ಆರೋಪಿಗಳು ಇಟ್ಟಿಗೆ, ರಾಡ್‌ ಮೊದಲಾದ ವಸ್ತುಗಳಿಂದ ಎದುರಾಳಿಗಳ ಮೇಲೆ ಹಲ್ಲೆ ನಡೆಸಿದ್ದರು. ಘಟನೆಯಲ್ಲಿ ಗುರುದೇವ್‌ ಸ್ಥಳದಲ್ಲಿಯೇ ಮೃತಪಟ್ಟರೆ ಅವರ ಪತ್ನಿ ಪ್ರೇಮಕುಮಾರಿ, ಪುತ್ರರಾದ ಸೋಮಶೇಖರ್‌, ಲೋಕೇಶ್‌ಕುಮಾರ್, ಸೋಮಶೇಖರ್ ಪತ್ನಿ ಅನಿತಾ ಗಾಯಗೊಂಡಿದ್ದರು.

ಈ ಕುರಿತು ಬಿಡದಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಬಿಡದಿ ಠಾಣೆಯ ಅಂದಿನ ಸಬ್‌ ಇನ್‌ಸ್ಪೆಕ್ಟರ್ ಸತ್ಯನಾರಾಯಣ, ರಾಮನಗರ ಸಿಪಿಐ ಧರ್ಮೇಂದ್ರ ತನಿಖೆ ಕೈಗೊಂಡು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

ಎಂಟು ವರ್ಷಗಳ ವಿಚಾರಣೆ ನಡೆದಿತ್ತು. ಆರೋಪಿಗಳ ವಿರುದ್ಧ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ನ್ಯಾಯಾಧೀಶ ಪ್ರಕಾಶ್‌ ನಾಡಿಗೇರ್‌ ಶನಿವಾರ ಶಿಕ್ಷೆ ಪ್ರಮಾಣವನ್ನು ಪ್ರಕಟಿಸಿದರು. ಸರ್ಕಾರದ ಪರವಾಗಿ ವಿಶೇಷ ಅಭಿಯೋಜಕ ಎಂ.ಆರ್‌. ಬಾಲಕೃಷ್ಣ ವಾದ ಮಂಡಿಸಿದ್ದರು.

ಇಡೀ ಕುಟುಂಬವೇ ನೆರೆದಿತ್ತು
ಪ್ರಕರಣದ ವಿಚಾರಣೆಯು ಶುಕ್ರವಾರವೇ ಅಂತ್ಯಕೊಂಡಿದ್ದು, ನ್ಯಾಯಾಧೀಶರು ಶನಿವಾರಕ್ಕೆ ಆದೇಶವನ್ನು ಕಾಯ್ದಿರಿಸಿದ್ದರು. ಶಿಕ್ಷೆ ಪ್ರಕಟ ಸಂದರ್ಭ ಸಂತ್ರಸ್ಥರ ಇಡೀ ಕುಟುಂಬವೇ ನ್ಯಾಯಾಲಯದ ಆವರಣದಲ್ಲಿ ನೆರೆದಿತ್ತು.

ತೀರ್ಪಿನ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ ಗುರುದೇವ್ ಪತ್ನಿ ಪ್ರೇಮಕುಮಾರಿ ‘ಪೋಷಕರು ಮಕ್ಕಳಿಗೆ ಒಳ್ಳೆಯ ಬುದ್ಧಿ ಕಲಿಸದೇ ಹೋದರೆ ಈ ರೀತಿಯ ಘಟನೆಗಳಾಗುತ್ತವೆ. ಇನ್ನಾದರೂ ಎಲ್ಲರೂ ಸಂಯಮದಿಂದ ವರ್ತಿಸುವುದನ್ನು ಕಲಿಯಬೇಕು’ ಎಂದು ಕಿವಿಮಾತು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.