ADVERTISEMENT

ಅಡಿಕೆ ಬೆಳೆಗಾರರ ನೆರವಿಗೆ ಎಪಿಎಂಸಿ ಬದ್ಧ

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2017, 9:50 IST
Last Updated 2 ಸೆಪ್ಟೆಂಬರ್ 2017, 9:50 IST
ಸಾಗರದ ಎಪಿಎಂಸಿ ಆವರಣದಲ್ಲಿ ತೋಟಗಾರ್ಸ್‌ ಸೊಸೈಟಿ ನಿರ್ಮಿಸಿರುವ ನೂತನ ಗೋದಾಮು ಕಟ್ಟಡವನ್ನು ಎಪಿಎಂಸಿ ಅಧ್ಯಕ್ಷ ಕೆ.ಹೊಳಿಯಪ್ಪ ಶುಕ್ರವಾರ ಉದ್ಘಾಟಿಸಿದರು. ಸೊಸೈಟಿ ಅಧ್ಯಕ್ಷ ಕೆ.ಸಿ.ದೇವಪ್ಪ ಅವರೂ ಹಾಜರಿದ್ದರು.
ಸಾಗರದ ಎಪಿಎಂಸಿ ಆವರಣದಲ್ಲಿ ತೋಟಗಾರ್ಸ್‌ ಸೊಸೈಟಿ ನಿರ್ಮಿಸಿರುವ ನೂತನ ಗೋದಾಮು ಕಟ್ಟಡವನ್ನು ಎಪಿಎಂಸಿ ಅಧ್ಯಕ್ಷ ಕೆ.ಹೊಳಿಯಪ್ಪ ಶುಕ್ರವಾರ ಉದ್ಘಾಟಿಸಿದರು. ಸೊಸೈಟಿ ಅಧ್ಯಕ್ಷ ಕೆ.ಸಿ.ದೇವಪ್ಪ ಅವರೂ ಹಾಜರಿದ್ದರು.   

ಸಾಗರ: ಸಂಕಷ್ಟದಲ್ಲಿರುವ ಅಡಿಕೆ ಬೆಳೆಗಾರರಿಗೆ ಅಗತ್ಯವಿರುವ ನೆರವು ನೀಡಲು ಎಪಿಎಂಸಿ ಬದ್ಧವಾಗಿದೆ ಎಂದು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷ ಕೆ.ಹೊಳಿಯಪ್ಪ ಹೇಳಿದರು. ಇಲ್ಲಿನ ಎಪಿಎಂಸಿ ಆವರಣದಲ್ಲಿ ತೋಟಗಾರ್ಸ್‌ ಸೊಸೈಟಿ ನಿರ್ಮಿಸಿರುವ ನೂತನ ಗೋದಾಮು ಕಟ್ಟಡವನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿದ ಅವರು, ಅಡಿಕೆ ಬೆಲೆ ಕುಸಿತದ ಸಂದರ್ಭದಲ್ಲಿ ಬೆಳೆಗಾರರಿಗೆ ಅವರ ಬೆಳೆಯ ಆಧಾರದ ಮೇಲೆ ₹ 2 ಲಕ್ಷದವರೆಗೂ ಬಡ್ಡಿರಹಿತ ಸಾಲ ನೀಡಿದ ಶ್ರೇಯಸ್ಸು ಎಪಿಎಂಸಿಗೆ ಸಲ್ಲುತ್ತದೆ ಎಂದರು.

ಎಪಿಎಂಸಿಯಿಂದ ಬೆಳೆಗಾರರಿಗೆ ನ್ಯಾಯಯುತ ಬೆಲೆ, ನಿಖರವಾದ ಅಳತೆಯ ಮಾಪನ ವ್ಯವಸ್ಥೆ ಕಲ್ಪಿಸುವತ್ತ ಹೆಚ್ಚಿನ ನಿಗಾ ವಹಿಸಲಾಗಿದೆ. ಅಡಿಕೆ ಸುಲಿಯುವ ಕಣ, ಕೃಷಿ ಭೂಮಿ ಸಂಪರ್ಕಿಸುವ ರಸ್ತೆ, ಕಾಲುಸಂಕ ನಿರ್ಮಾಣಕ್ಕೆ ₹ 50 ಲಕ್ಷ ವ್ಯಯಿಸಲಾಗುತ್ತಿದೆ ಎಂದು ತಿಳಿಸಿದರು.

ಎಪಿಎಂಸಿ ಬೆಳೆಗಾರರಿಗೆ ಹಲವು ರೀತಿಯ ಸೌಲಭ್ಯಗಳನ್ನು ನೀಡುತ್ತಾ ಬಂದಿದ್ದರೂ ಮನೆ ಬಾಗಿಲ ಅಡಿಕೆ ವ್ಯಾಪಾರ ಇನ್ನೂ ಪೂರ್ತಿಯಾಗಿ ನಿಂತಿಲ್ಲದೆ ಇರುವುದು ಬೇಸರದ ಸಂಗತಿ. ಬೆಳೆಗಾರರು ಹೆಚ್ಚಿನ ಪ್ರಮಾಣದಲ್ಲಿ ಅಡಿಕೆಯನ್ನು ಎಪಿಎಂಸಿಗೆ ತಂದು ವ್ಯಾಪಾರ ನಡೆಸಿದಾಗ ಮಾತ್ರ ಸಮಿತಿ ಮತ್ತಷ್ಟು ಸೌಲಭ್ಯಗಳನ್ನು ನೀಡಬಹುದು ಎಂದರು.

ADVERTISEMENT

ಅಡಿಕೆ ಬೆಳೆಗಾರರ ಹಿತ ಕಾಯುವಲ್ಲಿ ಈ ಭಾಗದ ಸಹಕಾರಿ ಸಂಸ್ಥೆಗಳು ಪ್ರಮುಖ ಪಾತ್ರ ವಹಿಸುತ್ತಿವೆ. ಇವುಗಳಲ್ಲಿ ತೋಟಗಾರ್ಸ್‌ ಸೊಸೈಟಿ ಕೂಡ ಒಂದಾಗಿದೆ. ಸಹಕಾರಿ ಸಂಸ್ಥೆಗಳನ್ನು ಕಟ್ಟುವುದರ ಜೊತೆಗೆ ಅವುಗಳನ್ನು ಸಮರ್ಪಕವಾಗಿ ನಿರ್ವಹಿಸುವುದು ಸವಾಲಿನ ಕೆಲಸ. ತೋಟಗಾರ್ಸ್‌ನ ಅಧ್ಯಕ್ಷರು, ನಿರ್ದೇಶಕರು ಈ ಕೆಲಸವನ್ನು ಸಮರ್ಥವಾಗಿ ಮಾಡುತ್ತಿದ್ದಾರೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ತೋಟಗಾರ್ಸ್‌ ಸಂಸ್ಥೆ ಅಧ್ಯಕ್ಷ ಕೆ.ಸಿ.ದೇವಪ್ಪ ಮಾತನಾಡಿ, ‘41 ವರ್ಷಗಳ ಹಿಂದೆ ಆರಂಭಗೊಂಡ ತೋಟಗಾರ್ಸ್‌ ಕೇವಲ ಲಾಭ ಗಳಿಕೆಯನ್ನೇ ಉದ್ದೇಶವಾಗಿ ಇಟ್ಟುಕೊಂಡಿಲ್ಲ. ಅದರ ಬದಲು ಅಡಿಕೆ ಬೆಳೆಗಾರರಿಗೆ ನೆರವು ನೀಡುವುದೇ ಸಂಸ್ಥೆಯ ಪ್ರಮುಖ ಉದ್ದೇಶವಾಗಿದೆ’ ಎಂದರು.

ಎಪಿಎಂಸಿ ಕಾರ್ಯದರ್ಶಿ ಶೈಲಜಾ, ತೋಟಗಾರ್ಸ್‌ ಸಂಸ್ಥೆಯ ಪ್ರಮುಖರಾದ ಕೆ.ಆರ್‌.ಗಣಪತಿ ಭಟ್, ಟಿ.ಆರ್‌.ಕೃಷ್ಣಮೂರ್ತಿ, ಪಿ.ಎಸ್‌.ಕೃಷ್ಣಮೂರ್ತಿ, ಎ.ಆರ್‌.ಮಹಾಬಲೇಶ್ವರ್‌, ಕೆ.ಎಂ.ಸುಬ್ರಮಣ್ಯ, ಎಂ.ಸುಬ್ರಾಯ, ಎಚ್‌.ಟಿ.ಕನ್ನಪ್ಪ, ಚಿನ್ನಸ್ವಾಮಿ, ಎಂ.ಜಿ.ಪ್ರಕಾಶ್‌, ಕೆ.ಎಂ.ಸಾವಿತ್ರಿ, ವಿಶಾಲಾಕ್ಷಿ ಎಸ್.ರಾವ್‌ ಹಾಜರಿದ್ದರು.
ತಂಗಳಮನೆ ರಾಮಚಂದ್ರಪ್ಪ ಪ್ರಾರ್ಥಿಸಿದರು. ಕೆ.ಎಂ.ಜಯಶೀಲಪ್ಪ ಗೌಡ ಸ್ವಾಗತಿಸಿದರು. ವಿ.ಸಿ.ಪ್ರಕಾಶ್‌ ಪ್ರಾಸ್ತಾವಿಕವಾಗಿ ಮಾತನಾಡಿದರು. ಮುರುಗೇಂದ್ರಪ್ಪ ವಂದಿಸಿದರು. ಹು.ಭಾ.ಅಶೋಕ್‌ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.