ADVERTISEMENT

ಅದ್ದೂರಿ ಹಳದಮ್ಮ ದೇವಿಯ ಸಿಡಿ ಉತ್ಸವ

ದೇವಿಗೆ ಹರಕೆ ಸಲ್ಲಿಸಿದ ಭಕ್ತರು, ಗಮನ ಸೆಳೆದ ತೊಟ್ಟಿಲು ಸೇವೆ, ಮೂಢನಂಬಿಕೆಯ ಪರಾಕಷ್ಠೆ

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2014, 6:55 IST
Last Updated 25 ಏಪ್ರಿಲ್ 2014, 6:55 IST
ಭದ್ರಾವತಿ ಊರಹಬ್ಬ ನಿಮಿತ್ತ ಗುರುವಾರ ‘ಸಿಡಿ’ ಆಚರಣೆ ಅದ್ದೂರಿಯಾಗಿ ಸಹಸ್ರಾರು ಜನರ ಸಮ್ಮುಖದಲ್ಲಿ ಗ್ರಾಮದೇವತೆ ಹಳದಮ್ಮ ದೇವಾಲಯ ಮುಂಭಾಗದಲ್ಲಿ ನಡೆಯಿತು
ಭದ್ರಾವತಿ ಊರಹಬ್ಬ ನಿಮಿತ್ತ ಗುರುವಾರ ‘ಸಿಡಿ’ ಆಚರಣೆ ಅದ್ದೂರಿಯಾಗಿ ಸಹಸ್ರಾರು ಜನರ ಸಮ್ಮುಖದಲ್ಲಿ ಗ್ರಾಮದೇವತೆ ಹಳದಮ್ಮ ದೇವಾಲಯ ಮುಂಭಾಗದಲ್ಲಿ ನಡೆಯಿತು   

ಭದ್ರಾವತಿ: ಬೆಳ್ಳಂಬೆಳಿಗ್ಗೆ ಗ್ರಾಮ ದೇವತೆಯ ಕೃಪೆಗಾಗಿ ಸೇರಿದ್ದ ಸಹಸ್ರಾರು ಮಂದಿ, ದೇವಾಲಯ ಒಳ ಆವರಣದಲ್ಲಿ ವಿಶೇಷ ಪೂಜೆ, ವ್ಯಕ್ತಿಯೊಬ್ಬರಿಗೆ ವಿವಿಧ ರೀತಿಯಲ್ಲಿ ಗೌರವ ಸಮರ್ಪಣೆ ಮಾಡುವ ಪರಿ, ಜತೆಗೆ ಮಂಗಳ ವಾದ್ಯದ ಮೇಳ...
ಹೀಗೆ ಹಲವು ಆಡಂಬರದ, ಅದ್ದೂರಿತನದ, ಭಕ್ತಿ ಪರಾಕಷ್ಠೆಯ ವಾತಾವರಣ ಇಲ್ಲಿನ ಹಳೇನಗರ ಗ್ರಾಮದೇವತೆ ಹಳದಮ್ಮ ದೇವಾಲಯ ಆವರಣದ ಮುಂಭಾಗದಲ್ಲಿ ಗುರುವಾರ ಸೃಷ್ಟಿಯಾಗಿತ್ತು.

ಪ್ರತಿ ಎರಡು ವರ್ಷಕ್ಕೊಮ್ಮೆ ನಡೆಯುವ ಊರಹಬ್ಬದ ವಿಶೇಷಗಳಲ್ಲಿ ಒಂದು ‘ಸಿಡಿ ಉತ್ಸವ’. ಇದಕ್ಕಾಗಿ ಎರಡು ವರ್ಷಗಳಿಂದ ಸಹಸ್ರಾರು ಭಕ್ತರು ಕಾದು ತಮ್ಮ ಹರಕೆ ಸಲ್ಲಿಸಲು ಸಜ್ಜಾಗಿರುತ್ತಾರೆ. ಹೀಗಾಗಿ ಅವರ ನೆಟ್ಟ ದೃಷ್ಟಿಯೆಲ್ಲಾ ದೇವಾಲಯ ಮುಂಭಾಗದ ’ಸಿಡಿ’ ಕಂಬದ ಮೇಲೆ ಇತ್ತು.

ಈಬಾರಿ ಸಹ ಹಳೇನಗರದ ಮಲ್ಲಿಕಾ ’ಸಿಡಿ’ ಉತ್ಸವಕ್ಕೆ ಸಜ್ಜಾಗಿ ಹೊಸಬಟ್ಟೆ ತೊಟ್ಟು, ಕೈಯಲ್ಲಿ ಬೇವಿನೆಲೆಯ ಗೊಂಚಲು ಹಿಡಿದು, ಹಣೆಗೆ ಭಂಡಾರ ಹಚ್ಚಿಕೊಂಡು  ದೇವಾಲಯ ಪ್ರವೇಶಿಸಿದರು. ಇವರನ್ನು ಸ್ವಾಗತಿಸಿದ ಸಮಿತಿ ಪದಾಧಿಕಾರಿಗಳು ಪೂಜೆ ಸಮರ್ಪಿಸಿ ನಂತರ ಸಿಡಿ ಕಂಬದ ಬಳಿ ಕರೆ ತಂದರು.

ಕಂಬದ ಮೇಲ್ಭಾಗದ ತಿರುಗನ್ನು ಕೆಳಗಿಳಿಸಿ ಅದರ ತುದಿಗೆ ‘ಸಿಡಿ’ ಹೊರುವ ಮಲ್ಲಿಕಾ ಅವರನ್ನು ಅಂಗಾತ ಮಲಗಿಸಿ ಅವರ ಹೊಟ್ಟೆಗೆ ಹಗ್ಗ ಬಿಗಿದು, ಮೇಲೆತ್ತಿ ಸುತ್ತಿಸಲು ಆರಂಭಿಸಿದರು, ಮೇಲೆರಿದ ಅವರು ಕೈಯಲ್ಲಿನ ಬೇವಿನ ಗೊಂಚಲು ಬೀಸುತ್ತಾ ಉಧೋ, ಉಧೋ... ಎಂದು ಕೂಗುತ್ತಾ ಸುತ್ತು ಹಾಕುತ್ತಾ ದೇವಿಗೆ ತನ್ನ ಭಕ್ತಿಯನ್ನು ಸಮರ್ಪಣೆ ಮಾಡಿದರೆ, ಕೆಳಗೆ ನಿಂತ ಸಹಸ್ರಾರು ಮಂದಿ ಜೈಕಾರ ಹಾಕುತ್ತಾ, ದೇವಿ ಸ್ಮರಿಸುತ್ತಾ ‘ಸಿಡಿ’ ತಿರುಗುವಿಕೆ ಸುತ್ತಾ ಕಣ್ಣಾಡಿಸಿದರು.

ಮೂರು ಸುತ್ತಿನ ನಂತರ ಕಂಬ ಕೆಳಗೆ ಇಳಿಯಿತು. ಸಿಡಿ ಭಕ್ತ ಕೆಳಗೆ ಹೆಜ್ಜೆ ಇಡುತ್ತಿದ್ದಂತೆ ನೆರೆದಿದ್ದ ಜನರು ಚಪ್ಪಾಳೆ ತಟ್ಟಿದರು. ಇದರಿಂದ ತೃಪ್ತರಾದ ನೆರೆದಿದ್ದ ಭಕ್ತರು ಈ ಬಾರಿಯ ಊರಹಬ್ಬದ ಪ್ರಮುಖ ಧಾರ್ಮಿಕ ವಿಧಿ ಪೂರೈಸಿದ ನೆಮ್ಮದಿಯನ್ನು ಕಂಡರು.
ಇದಾದ ನಂತರ ಜರಗುವ ಮಕ್ಕಳ ತೊಟ್ಟಿಲ ‘ಸಿಡಿ’ ಆಟಕ್ಕೆ ವಾತಾವರಣ ಸಜ್ಜಾಯಿತು. ನೂರಾರು ಪೋಷಕರು ತಮ್ಮ ಮಕ್ಕಳ ಕೊರಳಿಗೆ ಹಾರ ಹಾಕಿ ಈ ಸಿಡಿಯ ಅರ್ಣೆಗಾಗಿ ಸರದಿ ಸಾಲಿನಲ್ಲಿ ನಿಂತರು. ಹೀಗೆ ಈಬಾರಿಯ ಸಿಡಿ ಉತ್ಸವ ನಿರಂತರವಾಗಿ ಒಂದೆರಡು ಗಂಟೆಗಳ ಕಾಲ ನಡೆಯಿತು.

ದೇವಾಲಯ ಸಮಿತಿಯ ಸಿ.ಮಹೇಶ್ ಕುಮಾರ್, ಕೆ.ಎನ್‌.ಕೃಷ್ಣಪ್ಪ, ಲೋಕೇಶಪ್ಪ, ರಾಮಚಂದ್ರರಾವ್,
ಕೆ.ಹಾಲಸ್ವಾಮಿ, ಎಲ್. ಮಂಜುನಾಥ, ನಗರಸಭಾ ಸದಸ್ಯರಾದ ಶಿವರಾಜ್, ಮುರ್ತೂಝಾ ಖಾನ್ ಸೇರಿದಂತೆ ಇತರರು ಈ ಸಂದರ್ಭದಲ್ಲಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.