ADVERTISEMENT

ಅರಣ್ಯ ಉಳಿಸುವತ್ತ ಎಲ್ಲರ ಚಿತ್ತ ಹರಿಯಲಿ

ಬೀಜದುಂಡೆ ಮಹಾ ಅಭಿಯಾನಕ್ಕೆ ಚಾಲನೆ ನೀಡಿದ ಹೆಚ್ಚುವರಿ ಎಸ್‌ಪಿ ಮುತ್ತುರಾಜ್ ಅಭಿಮತ

​ಪ್ರಜಾವಾಣಿ ವಾರ್ತೆ
Published 15 ಜುಲೈ 2017, 5:06 IST
Last Updated 15 ಜುಲೈ 2017, 5:06 IST

ಶಿವಮೊಗ್ಗ: ಎಲ್ಲರೂ ಅರಣ್ಯ ಹಾಗೂ ಅರಣ್ಯ ಉತ್ಪನ್ನ ಬಳಸಿಕೊಳ್ಳುವತ್ತ ಗಮನ ಹರಿಸುವ ಬದಲು, ಉಳಿಸುವತ್ತಲೂ ಚಿತ್ತ ಹರಿಸಬೇಕು ಎಂದು ಹೆಚ್ಚುವರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೆ.ಮುತ್ತುರಾಜ್ ಕಿವಿಮಾತು ಹೇಳಿದರು.

ಜಿಲ್ಲಾ ಪೊಲೀಸ್‌, ಉತ್ತಿಷ್ಟ ಭಾರತ ಸಂಘಟನೆ, ಓಪನ್‌ ಮೈಂಡ್‌ ಶಾಲೆ, ಸಿಹಿಮೊಗ್ಗೆ ಕ್ರಿಕೆಟ್‌ ಅಕಾಡೆಮಿ ಶುಕ್ರವಾರ ಮಂಡಗದ್ದೆ ಸಮೀಪದ ಸಿಂಗನ ಬಿದರೆ ಅರಣ್ಯ ಪ್ರದೇಶದಲ್ಲಿ ಹಮ್ಮಿಕೊಂಡಿದ್ದ ‘ಬೀಜದುಂಡೆ ಮಹಾ ಅಭಿಯಾನ’ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಉರುವಲು, ಕೃಷಿ ಮತ್ತಿತರ ಕಾರಣಗಳಿಗಾಗಿ ನಿರಂತರವಾಗಿ ಅರಣ್ಯ ನಾಶ ಮಾಡಲಾಗಿದೆ. ಇದು ಪರಿಸರ ಸಮತೋಲನದ ಮೇಲೆ ಪರಿಣಾಮ ಬೀರಿದೆ. ಹಲವು ಪ್ರಭೇದಗಳ ಕಾಡು ಪ್ರಾಣಿ, ಪಕ್ಷಿಗಳಿಗೆ ನೆಲೆ ಇಲ್ಲದೇ ವಿನಾಶದತ್ತ ಸಾಗಿವೆ. ಕಾಡು ನಾಶದ ಪರಿಣಾಮ ಪರಿಸರ ಕಲ್ಮಶವಾಗುತ್ತಿದೆ. ಶುದ್ಧ ಗಾಳಿ, ಸಮೃದ್ಧ ಮಳೆಯ ಕೊರತೆಯಾಗಿದೆ. ಇದು ಆಹಾರ ಭದ್ರತೆಗೂ ಅಪಾಯ ತಂದೊಡ್ಡಿದೆ ಎಂದು ಕಳವಳ ವ್ಯಕ್ತಪಡಿಸಿದರು.

ADVERTISEMENT

ಮಕ್ಕಳಿಗೆ ಬಾಲ್ಯದಿಂದಲೇ ಪರಿಸರ ಜಾಗೃತಿ ಮೂಡಿಸಬೇಕು. ಶಾಲಾ–ಕಾಲೇಜುಗಳಲ್ಲಿ ಅಭಿಯಾನ ಹಮ್ಮಿಕೊಳ್ಳಬೇಕು. ಪ್ರತಿ ಮಗುವೂ ಸಸಿ ನೆಟ್ಟು ಬೆಳೆಸುವ ಮನೋಭಾವವನ್ನು ರೂಢಿಸಬೇಕು. ದೊಡ್ಡವರಲ್ಲೂ ಪರಿಸರ ಪ್ರಜ್ಞೆ ಬೆಳೆಸಬೇಕು ಎಂದು ಸಲಹೆ ನೀಡಿದರು.

ಆಹಾರ ಉತ್ಪಾದನೆಗೆ ಭೂಮಿಯ ಆವಶ್ಯಕತೆ ಇದೆ. ಜತೆಗೆ,  ನಿರಂತರ ಕಾಡು ನಾಶವಾಗದಂತೆ ಕಾಪಾಡಬೇಕಿದೆ. ಎರಡರ ಸಮತೋಲನ ಇಲ್ಲದೇ ಹೋದರೆ ಭವಿಷ್ಯದಲ್ಲಿ ಬದುಕು ಸಂಕಷ್ಟಕ್ಕೆ ಸಿಲುಕುತ್ತದೆ. ಈಗಾಗಲೇ ಮೂರ್‍ನಾಲ್ಕು ವರ್ಷಗಳಿಂದ ಮಳೆ ಕೊರತೆಯಾಗಿರುವುದು ಇದಕ್ಕೆ ಉತ್ತಮ ಉದಾಹರಣೆ ಎಂದು ವಿಶ್ಲೇಷಿಸಿದರು.

ನೂರಾರು ಮಕ್ಕಳು, ಸಂಘಟನೆಗಳ ಸ್ವಯಂ ಸೇವಕರು ಅರಣ್ಯ ಪ್ರದೇಶದ ಖಾಲಿ ಜಾಗದಲ್ಲಿ ಗುಂಡಿ ತೆಗೆದು ಸಸಿ ನೆಟ್ಟರು. ಬೆಟ್ಟದ ಪ್ರದೇಶಗಳಲ್ಲಿ ಬೀಜದುಂಡೆ ಎರಚಿ ಸಸ್ಯವೃದ್ಧಿಗೆ ಕಾರಣರಾದರು.

ನಗರದ ಮುಖ್ಯ ಬಸ್‌ ನಿಲ್ದಾಣದಿಂದ ಬೆಳಿಗ್ಗೆ 8.30ಕ್ಕೆ  ಹೊರಟ ಪರಿಸರ ಜಾಥಾಕ್ಕೆ ಎಎಸ್‌ಪಿ ಮುತ್ತುರಾಜ್‌ ಹಸಿರು ನಿಶಾನೆ ತೋರಿದರು. ಸಂಘಟನೆಯ ಮುಖಂಡರಾದ ನಾಗರಾಜ್‌ ಶೆಟ್ಟರ್‌, ಬಾಲಕೃಷ್ಣ, ಉಪಾ ಕಿರಣ್‌, ಪ್ರಾಂಶುಪಾಲ ಕಿರಣ್‌ಕುಮಾರ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.