ADVERTISEMENT

ಅರಣ್ಯ ಸಾಗುವಳಿ ಅರ್ಜಿ ಪರಿಶೀಲಿಸಲು ಒತ್ತಾಯ

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2017, 6:03 IST
Last Updated 29 ಡಿಸೆಂಬರ್ 2017, 6:03 IST

ಆನವಟ್ಟಿ: ‘ನಮ್ಮ ಹಿರಿಯರ ಕಾಲದಿಂದಲೂ ಸಾಗುವಳಿ ಮಾಡಿಕೊಂಡು ಬಂದಿರುವ ಭೂಮಿಯ ಹಕ್ಕುಪತ್ರಕ್ಕಾಗಿ ಹಲವು ವರ್ಷಗಳಿಂದ ಅರ್ಜಿ ಸಲ್ಲಿಸುತ್ತಿದ್ದೇವೆ. ಆದರೆ, ಪ್ರಾರಂಭಿಕ ಹಂತ ಮುಗಿಸಿ ವಿಭಾಗ ಅಧಿಕಾರಿಗಳವರೆಗೆ ಅರ್ಜಿ ತಲುಪಿಲ್ಲ’ ಎಂದು ರೈತರು ಆಳಲು ತೋಡಿಕೊಂಡರು.

ಆನವಟ್ಟಿ, ತಿಮ್ಮಾಪುರ, ಟಿ.ಜಿ ಕೊಪ್ಪ, ಎಸ್‌.ಎನ್‌ ಕೊಪ್ಪ, ಮಾಳೆಕೊಪ್ಪ ಭಾಗದ ಹಳ್ಳಿಗಳ ರೈತರು ಅರಣ್ಯ ಸಾಗುವಳಿ ಅರ್ಜಿಗಳನ್ನು ಶೀಘ್ರವೇ ಪರಿಶೀಲಿಸಿ ವಿಭಾಗಾಧಿಕಾರಿಗೆ ಕಳುಹಿಸುವಂತೆ ಬುಧವಾರ ಹಮ್ಮಿಕೊಂಡ ಪ್ರತಿಭಟನೆ ಸಂದರ್ಭ ಮಾತನಾಡಿದರು.

ಕಾಂಗ್ರೆಸ್ ಕಿಸಾನ್ ಕೃಷಿ ಮತ್ತು ಕಾರ್ಮಿಕ ಘಟಕದ ಆನವಟ್ಟಿ ವಿಭಾಗದ ಅಧ್ಯಕ್ಷ ಟಿ.ಜಿ.ರೇವಣಪ್ಪ ಮಾತನಾಡಿ, ‘ಅರಣ್ಯ ಸಾಗುವಳಿ ರೈತರಿಗೆ ಹಾಗೂ ಅರಣ್ಯ ಭೂಮಿಯಲ್ಲಿ ಹಲವು ವರ್ಷಗಳಿಂದ ವಾಸವಾಗಿರುವ ಜನರಿಗೆ ನಿವೇಶನ ಅರ್ಜಿ ವಿಲೇವಾರಿ ತ್ವರಿತಗತಿಯಲ್ಲಿ ಆಗಬೇಕು. ಅರಣ್ಯ ಹಕ್ಕು ಸಮಿತಿಯ ಅಧ್ಯಕ್ಷರು ಹಾಗೂ ಕಾರ್ಯದರ್ಶಿ ವಲಯ ಅರಣ್ಯಾಧಿಕಾರಿಗಳಿಗೆ ಸಹಕಾರ ನೀಡಿ, ಫಲಾನುಭವಿಗಳ ಅರ್ಜಿಗಳನ್ನು ವಿಭಾಗ ಅಧಿಕಾರಿಗಳಿಗೆ ಬೇಗ ಕಳುಹಿಸಲು ಸಹಕರಿಸಬೇಕು’ ಎಂದರು.

ADVERTISEMENT

ಆರು ತಿಂಗಳ ಹಿಂದೆ ರೈತರ ಒತ್ತಾಯಕ್ಕೆ ಮಣಿದು ಜಿಪಿಎಸ್ ಪ್ರತಿಗಳನ್ನು ಪರಿಶೀಲಿಸದೆ ಕಳುಹಿಸಿದ್ದರಿಂದ ಅರ್ಜಿಗಳು ಅರಣ್ಯ ಇಲಾಖೆಗೆ ವಾಪಸ್ ಬಂದಿವೆ. ಕಳೆದ ಬಾರಿ ಮಾಡಿದ ತಪ್ಪನ್ನು ಮಾಡದೆ ಅರ್ಜಿಗಳನ್ನು ಸರಿಯಾಗಿ ಪರಿಶೀಲಿಸಿ ಕಳುಹಿಸಿಕೊಡುವಂತೆ ಮನವಿ ಮಾಡಿದರು. ಭೂಮಿ ನೀಡಲು ಪಕ್ಷಭೇದ ಮಾಡದೆ, ಅರ್ಹ ಫಲಾನುಭವಿಗಳಿಗೆ ನೀಡಬೇಕು. ಅಧಿಕಾರಿಗಳು ಸಮಸ್ಯೆಗಳಿಗೆ ಸ್ಪಂದಿಸಿ, ಬಗೆಹರಿಸಿಕೊಂಡಲು ಮುಂದಾಗಬೇಕು ಎಂದು ರೈತರು ಒತ್ತಾಯಿಸಿದರು.

ವಲಯ ಅರಣ್ಯಾಧಿಕಾರಿಎನ್.ಭಾಗ್ಯವಂತ ಅವರಿಗೆ ಮನವಿ ಪತ್ರ ಸಲ್ಲಿಸಿದರು. ಸ್ಥಳದಲ್ಲಿ ಕಾಂಗ್ರೆಸ್ ಆನವಟ್ಟಿ ಎಸ್.ಸಿ ಘಟಕದ ಅಧ್ಯಕ್ಷ ಪರಶುರಾಮ, ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ರಫೀಕ್ ಅಹಮದ್ ಪಟೇಲ್, ಎಚ್.ಕೆ.ನಾಗರಾಜ, ಎಂ.ಕೆರಿಯಪ್ಪ, ಕೆ.ಕುಮಾರ, ಹಬೀಬುಲ್ಲಾ ಬಾಳೆಬೀಡ್, ಅಲ್ಲಾ ಬಕ್ಷ್, ಸಂತೋಷ ಎಸ್‌ಎನ್ ಕೊಪ್ಪ, ಹಬಿಬುಲ್ಲಾ ಹವಾಲ್ದಾರ್, ಆನಂದಪ್ಪ, ರಾಮಪ್ಪ, ಪರಶುರಾಮ ಹಾಗೂ ವಿವಿಧ ಗ್ರಾಮಗಳ ರೈತರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.