ADVERTISEMENT

‘ಆರ್ಥಿಕವಾಗಿ ಸಬಲರಾದಲ್ಲಿ ಮುಖ್ಯವಾಹಿನಿಗೆ ಬರಲು ಸಾಧ್ಯ’

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2017, 9:16 IST
Last Updated 10 ಸೆಪ್ಟೆಂಬರ್ 2017, 9:16 IST
ಶಿವಮೊಗ್ಗದ ಕುವೆಂಪು ರಂಗಮಂದಿರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸ್ತ್ರೀ ಬಂಧು ವಿವಿಧೋದ್ದೇಶ ಸೌಹಾರ್ದ ಸಹಕಾರಿಯ 4ನೇ ಸಾಮಾನ್ಯ ಸಭೆ ಮತ್ತು ವಾರ್ಷಿಕೋತ್ಸವವನ್ನು ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾಲಯದ ಮುಖ್ಯಸ್ಥೆ ಅನಸೂಯಾ ಮಾತಾ ಉದ್ಘಾಟಿಸಿದರು.
ಶಿವಮೊಗ್ಗದ ಕುವೆಂಪು ರಂಗಮಂದಿರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸ್ತ್ರೀ ಬಂಧು ವಿವಿಧೋದ್ದೇಶ ಸೌಹಾರ್ದ ಸಹಕಾರಿಯ 4ನೇ ಸಾಮಾನ್ಯ ಸಭೆ ಮತ್ತು ವಾರ್ಷಿಕೋತ್ಸವವನ್ನು ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾಲಯದ ಮುಖ್ಯಸ್ಥೆ ಅನಸೂಯಾ ಮಾತಾ ಉದ್ಘಾಟಿಸಿದರು.   

ಶಿವಮೊಗ್ಗ: ಮಹಿಳೆಯರು ಯಾರನ್ನೂ ಅವಲಂಬಿಸದೆ ಆರ್ಥಿಕವಾಗಿ ಸಬಲರಾದಲ್ಲಿ ಸಮಾಜದ ಮುಖ್ಯವಾಹಿನಿಗೆ ಬರಬಹುದು ಎಂದು ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಮುಖ್ಯಸ್ಥೆ ಅನಸೂಯಾ ಹೇಳಿದರು.

ಕುವೆಂಪು ರಂಗಮಂದಿರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ದಿ ಶಿವಮೊಗ್ಗ ಮಲ್ಟಿಪರ್ಪಸ್ ಸೋಷಿಯಲ್ ಸರ್ವೀಸ್ ಸೊಸೈಟಿಯ ಸ್ತ್ರೀ ಬಂಧು ವಿವಿಧೋದ್ದೇಶ ಸೌಹಾರ್ದ ಸಹಕಾರಿಯ 4ನೇ ಸಾಮಾನ್ಯ ಸಭೆ ಮತ್ತು ವಾರ್ಷಿಕೋತ್ಸವ ಉದ್ಘಾಟಿಸಿ ಮಾತನಾಡಿದರು.

ಸಮಾಜದ ಅಭಿವೃದ್ಧಿಗೆ ಪ್ರತಿಯೊಬ್ಬ ಮಹಿಳೆಯ ದುಡಿಮೆಯೂ ಅಗತ್ಯ. ಮಹಿಳೆಯರು ಜೀವನದಲ್ಲಿ ಎದುರಾಗುವ ಎಲ್ಲಾ ಕಷ್ಟಗಳನ್ನು ಸಮರ್ಥವಾಗಿ ಎದುರಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ಹಿಂದಿನ ದಿನದಲ್ಲಿ ಕೇವಲ ನಗರ ಪ್ರದೇಶದ ಮಹಿಳೆಯರು ಮಾತ್ರ ಸಂಘ, ಸಂಸ್ಥೆಗಳಲ್ಲಿ ಗುರುತಿಸಿಕೊಳ್ಳುತ್ತಿದ್ದರು. ಆದರೆ, ಪ್ರಸ್ತುತ ಗ್ರಾಮೀಣ ಮಹಿಳೆಯರೂ ಸಂಸ್ಥೆಗೆ ಸದಸ್ಯರಾಗುತ್ತಿದ್ದಾರೆ. ಗ್ರಾಮೀಣ ಭಾಗದ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಶಿಕ್ಷಿತರಾಗಬೇಕು ಎಂದು ಕರೆ ನೀಡಿದರು.

ADVERTISEMENT

ಎಲ್ಲಿಯವರೆಗೆ ಸಮಾಜವನ್ನು ನಾವು ಒಂದು ಕುಟುಂಬದ ದೃಷ್ಟಿಕೋನದಲ್ಲಿ ನೋಡುವುದಿಲ್ಲವೋ, ಅಲ್ಲಿಯವರೆಗೂ ಸಮಾಜ ಅಭಿವೃದ್ಧಿ ಹೊಂದಲು ಸಾಧ್ಯವಿಲ್ಲ. ಸಮಾಜವನ್ನು ಒಂದೇ ಕುಟುಂಬವೆಂದು ಭಾವಿಸಬೇಕು. ಸೇವೆ, ಸಹಕಾರ ಮನೋಭಾವ ಬೆಳೆಸಿಕೊಳ್ಳಬೇಕು. ಅಭಿವೃದ್ಧಿಪರ ಚಿಂತನೆಗಳನ್ನು ಕಾರ್ಯರೂಪಕ್ಕೆ ತರಬೇಕು ಎಂದು ಅಭಿಪ್ರಾಯಪಟ್ಟರು.

ಮನುಷ್ಯ ತನ್ನ ಕುಟುಂಬವನ್ನು ಸಂತೋಷದಿಂದಿರಿಸಲು ತನ್ನ ಆರೋಗ್ಯ ಲೆಕ್ಕಿಸದೆ ಆರ್ಥಿಕ ಮಟ್ಟವನ್ನು ಉತ್ತಮ ಸ್ಥಿತಿಗೆ ತರಲು ಪ್ರಯತ್ನಿಸುತ್ತಾನೆ. ಆಗ ತನ್ನ ಮಾನಸಿಕ, ದೈಹಿಕ ಆರೋಗ್ಯವನ್ನು ಕಳೆದುಕೊಳ್ಳುತ್ತಾನೆ. ಮೊದಲು ಆರೋಗ್ಯದ ಕಡೆಗೆ ಗಮನಹರಿಸಬೇಕು. ನಂತರ ಹಣ ಸಂಪಾದನೆ ಕಡೆ ಗಮನಹರಿಸಬೇಕು ಎಂದು ಸಲಹೆ ನೀಡಿದರು.

ಶಿವಮೊಗ್ಗದ ಧರ್ಮಾಧ್ಯಕ್ಷ ಫ್ರಾನ್ಸಿಸ್ ಸೆರಾವೋ ಪ್ರಾಸ್ತಾವಿಕ ಮಾತನಾಡಿ, ಸ್ತ್ರೀ ಸಂಘಟನೆಗಳ ಮೂಲಕ ಮಹಿಳೆಯರು ಒಂದೆಡೆ ಸಂಘಟಿತರಾಗಬೇಕು. ಎಸ್ಎಂಎಸ್ಎಸ್ ಸಂಸ್ಥೆ ಮಹಿಳೆಯರ ಶ್ರೇಯೋಭಿವೃದ್ಧಿಗೆ ಅನೇಕ ವರ್ಷಗಳಿಂದ ಶ್ರಮಿಸುತ್ತಾ ಬಂದಿದೆ. ಅನೇಕ ಕಾರ್ಯಕ್ರಮಗಳನ್ನು ಮಹಿಳೆಯರಿಗಾಗಿ ರೂಪಿಸಿದೆ. ಅವುಗಳ ಪ್ರಯೋಜನ ಪಡೆದುಕೊಂಡು ಸಬಲರಾಗಬೇಕು ಎಂದರು.

ಶಾಸಕ ಕೆ.ಬಿ. ಪ್ರಸನ್ನಕುಮಾರ್ ಮಾತನಾಡಿ, ಗ್ರಾಮೀಣ ಪ್ರದೇಶದ ಮಹಿಳೆಯರು ಆರ್ಥಿಕವಾಗಿ ಸದೃಢಗೊಳ್ಳಲು ಸಂಘ, ಸಂಸ್ಥೆಗಳ ಸಹಕಾರ ಪಡೆಯಬೇಕು ಎಂದರು.
ಸ್ತ್ರೀ ಬಂಧು ವಿವಿದ್ಧೋದ್ದೇಶ ಸೌಹಾರ್ದ ಸಹಕಾರಿ ಅಧ್ಯಕ್ಷೆ ಪ್ರೆಸಿಲ್ಲಾ ಮಾರ್ಟಿಸ್, ದಿ ಶಿವಮೊಗ್ಗ ಮಲ್ಟಿ ಪರ್ಪಸ್ ಸೋಷಿಯಲ್ ಸರ್ವೀಸ್ ಸೊಸೈಟಿಯ ನಿರ್ದೇಶಕ ರಿಚರ್ಡ್‌ ಪಾಯ್ಸ್, ಸ್ತ್ರೀಬಂಧು ವಿವಿಧೋಶ ಸಹಕಾರಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವೀರೇಶ್ ವಿ.ಮೊರಾಸ್, ವಿಪ್ರ ವಿವಿದ್ಧೋದ್ದೇಶ ಸೌಹಾರ್ದ ಸಹಕಾರಿ ಅಧ್ಯಕ್ಷ ಎ.ಆರ್. ಪ್ರಸನ್ನಕುಮಾರ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.