ADVERTISEMENT

ಇಂದು ಕನ್ನಡ ನುಡಿ ಜಾತ್ರೆಗೆ ಅದ್ಧೂರಿ ಚಾಲನೆ

ಸಮ್ಮೇಳನ ಉದ್ಘಾಟಿಸಲಿರುವ ನಾ.ಡಿಸೋಜ,ಸರ್ವಾಧ್ಯಕ್ಷರ ಭವ್ಯ ಮೆರವಣಿಗೆ, ಸಜ್ಜುಗೊಂಡ ವೇದಿಕೆ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2017, 7:50 IST
Last Updated 4 ಫೆಬ್ರುವರಿ 2017, 7:50 IST
ಶಿವಮೊಗ್ಗ: ಜಿಲ್ಲಾ 11ನೇ ಸಾಹಿತ್ಯ ಸಮ್ಮೇಳನ ಫೆ. 4 ಮತ್ತು 5ರಂದು ನಗರದ ಕುವೆಂಪು  ರಂಗಮಂದಿರದಲ್ಲಿ ಹಮ್ಮಿಕೊಳ್ಳ ಲಾಗಿದೆ. ಸಮ್ಮೇಳನ ನಿಮಿತ್ತ ರಾಷ್ಟ್ರಕವಿ ಕುವೆಂಪು ಮಹಾಮಂಟಪ, ರಾಷ್ಟ್ರಕವಿ ಡಾ. ಜಿ.ಎಸ್.ಶಿವರುದ್ರಪ್ಪ  ಮಹಾ ವೇದಿಕೆ, ಪ್ರೊ.ಬಿ. ಕೃಷ್ಣಪ್ಪ ಮಹಾದ್ವಾರ ನಿರ್ಮಿಸಲಾಗಿದೆ. 
 
ಫೆ. 4ರಂದು ಬೆಳಿಗ್ಗೆ 8ಕ್ಕೆ ಶಾಸಕ ಕೆ.ಬಿ. ಪ್ರಸನ್ನಕುಮಾರ್ ರಾಷ್ಟ್ರಧ್ವಜ, ಮೇಯರ್‌ ಎಸ್‌.ಕೆ.ಮರಿಯಪ್ಪ ನಾಡಧ್ವಜ ನೆರವೇರಿಸುವರು. ಬೆಳಿಗ್ಗೆ 8.30ಕ್ಕೆ ರಾಮಣ್ಣ ಶ್ರೇಷ್ಠಿ ಪಾರ್ಕ್‌ನಿಂದ ವಿವಿಧ ಜನಪದ ಕಲಾತಂಡ ಗಳೊಂದಿಗೆ ಸಮ್ಮೇಳನಾಧ್ಯಕ್ಷರ ಮೆರವಣಿಗೆ ಆಯೋಜಿಸಲಾಗಿದೆ.  
 
ಸಮ್ಮೇಳನ ಉದ್ಘಾಟನೆ ನಾ.ಡಿಸೋಜ ಹೆಗಲಿಗೆ: ಎಸ್‌.ಎಲ್‌.ಭೈರಪ್ಪ ಗೈರುಹಾಜರಿ ಕಾರಣ 4ರಂದು ಬೆಳಿಗ್ಗೆ 10.30ಕ್ಕೆ  ಸಾಹಿತಿ ನಾ.ಡಿಸೋಜ ಸಮ್ಮೇಳನ ಉದ್ಘಾಟಿಸುವರು. ಸಂಸತ್‌ ಸದಸ್ಯ ಬಿ.ಎಸ್. ಯಡಿಯೂರಪ್ಪ ಆಶಯ ಮಾತು ಆಡುವರು. ರಾಜ್ಯ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮನು ಬಳಿಗಾರ್‌  ‘ತುಂಗ’ ಸ್ಮರಣಸಂಚಿಕೆ ಬಿಡುಗಡೆ ಮಾಡುವರು.  
 
 2 ಸಾವಿರ ಜನರಿಗೆ ಸಿಹಿ ಊಟ: ಸಮ್ಮೇಳನಕ್ಕೆ ಬಂದ ಅತಿಥಿಗಳು, ಸಾಹಿತ್ಯಾಸಕ್ತರಿಗೆ ಪರಿಷತ್‌  ಎರಡೂ ದಿನವೂ ಭಾರಿ ಭೋಜನ ವ್ಯವಸ್ಥೆ ಮಾಡಿದೆ. ಫೆ. 4ರಂದು ಬೆಳಿಗ್ಗೆ 500 ಜನರಿಗೆ ಕೇಸರಿಬಾತ್–ಉಪ್ಪಿಟ್ಟು, ಮಧ್ಯಾಹ್ನ 2 ಸಾವಿರ ಜನರಿಗೆ ಲಾಡು, ರೊಟ್ಟಿ, ರಾತ್ರಿ 800 ಜನರಿಗೆ ವಿಶೇಷ ಊಟ, 5ರಂದು ಬೆಳಿಗ್ಗೆ ಮಂಡಕ್ಕಿ ತಿಂಡಿ, ಮಧ್ಯಾಹ್ನ ಮೈಸೂರು ಪಾಕ್ ಹಾಗೂ ರಾತ್ರಿ ಅನ್ನಸಂಬಾರ್ ಬಡಿಸಲಾಗುತ್ತಿದೆ.
 
ಅತಿಥಿಗಳಿಗೆ ಪ್ರತ್ಯೇಕ ಟೇಬಲ್‌ ವ್ಯವಸ್ಥೆ, ಸಾಹಿತ್ಯಾಭಿ ಮಾನಿಗಳಿಗೆ 6 ವಿಶೇಷ ಕೌಂಟರ್‌ ತೆರೆಯಲಾಗಿದೆ ಎಂದು ಜಿಲ್ಲಾ ಕಸಾಪ ಅಧ್ಯಕ್ಷ ಡಿ.ಬಿ.ಶಂಕರಪ್ಪ  ಮಾಹಿತಿ ನೀಡಿದರು.  ಸಮ್ಮೇಳನದ ಅಂಗವಾಗಿ ರಂಗಮಂದಿರದ ಸುತ್ತಲೂ ಪೊಲೀಸ್ ಬಂದೋಬಸ್ತ್‌ ಮಾಡಲಾಗಿದೆ.
 
ಭೈರಪ್ಪ ಅಭಿಮಾನಿಗಳ ಬಹಿಷ್ಕಾರ: ಎಸ್‌.ಎಲ್‌.ಭೈರಪ್ಪ ಅವರ ಆಗಮಕ್ಕೆ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಅವರ ಕೆಲವು ಅಭಿಮಾನಿಗಳು ಸಮ್ಮೇಳನ ಬಹಿಷ್ಕರಿಸಿರುವುದಾಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
 
**
ಸಮ್ಮೇಳನದಲ್ಲಿ  ಇಂದು
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌: 11ನೇ ಕನ್ನಡ ಸಾಹಿತ್ಯ ಸಮ್ಮೇಳನ. ಧ್ವಜಾರೋಹಣ: ಶಾಸಕ ಕೆ.ಬಿ.ಪ್ರಸನ್ನ ಕುಮಾರ್. ಸಮ್ಮೇಳನಾಧ್ಯಕ್ಷರ ಮೆರವಣಿಗೆ ಉದ್ಘಾಟನೆ: ಜಿಲ್ಲಾಧಿಕಾರಿ ಡಾ.ಎಂ.ಲೋಕೇಶ್. ಸಮ್ಮೇಳನ ಉದ್ಘಾಟನೆ: ಸಾಹಿತಿ ನಾ.ಡಿಸೋಜ. ಅತಿಥಿಗಳು: ಸಂಸತ್ ಸದಸ್ಯ ಬಿ.ಎಸ್.ಯಡಿಯೂರಪ್ಪ, ಬೆಂಗಳೂರು ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಮನು ಬಳಿಗಾರ್. ಸರ್ವಾಧ್ಯಕ್ಷ: ವಿಶ್ರಾಂತ ಪ್ರಾಧ್ಯಾಪಕ ಡಾ.ಸಣ್ಣರಾಮಣ್ಣ. ಸ್ಥಳ: ಕುವೆಂಪು ರಂಗಮಂದಿರ. ಬೆಳಿಗ್ಗೆ 8ಕ್ಕೆ.

ಗೋಷ್ಠಿ–1 ವಿಷಯ: ಭಾಷೆ ಮತ್ತು ಸಾಹಿತ್ಯ. ಉಪನ್ಯಾಸ:
ತೀರ್ಥಹಳ್ಳಿ ತುಂಗಾ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಬಿ.ಗಣಪತಿ, ಪ್ರಾಧ್ಯಾಪಕ ಡಾ.ಪ್ರಶಾಂತ್‌ ನಾಯಕ್‌. ಮಧ್ಯಾಹ್ನ: 1ಕ್ಕೆ.
ಗೋಷ್ಠಿ–2 ವಿಷಯ: ಚಳವಳಿ ಮತ್ತು ಸಾಹಿತ್ಯ. ಉಪನ್ಯಾಸ: ಡಿಎಸ್ಎಸ್ ಗುರುಮೂರ್ತಿ, ಪ್ರಾಧ್ಯಾಪಕ ಬಿ.ಎಲ್.ರಾಜು. ಮಧ್ಯಾಹ್ನ 2.35ಕ್ಕೆ.
ಗೋಷ್ಠಿ–3 ವಿಷಯ: ಸರ್ವಾಧ್ಯಕ್ಷರ ಸಾಹಿತ್ಯ: ಚಿಂತನೆ. ಸಂಶೋಧನ ಸಾಹಿತ್ಯ ಉಪನ್ಯಾಸ: ಸಹ್ಯಾದ್ರಿ ಕಾಲೇಜು ಪ್ರಾಧ್ಯಾಪಕ ನಾಗಾರ್ಜುನ, ಸೃಜನಶೀಲ ಸಾಹಿತ್ಯ ಉಪನ್ಯಾಸ: ಪ್ರೊ.ಓಂಕಾರಪ್ಪ, ವಿಚಾರ ಸಾಹಿತ್ಯ ಉಪನ್ಯಾಸ: ಪ್ರಾಧ್ಯಾಪಕ ಕೆ.ಅಂಜನಪ್ಪ. ಸಂಜೆ 4.10ಕ್ಕೆ.
ಗೋಷ್ಠಿ–4 ವಿಷಯ: ಜಿಲ್ಲೆಯ ನೆಲ–ಜಲ–ಕೃಷಿ. ಉಪನ್ಯಾಸ: ಅಖಿಲೇಶ್ ಚಿಪ್ಳಿ, ಶಿವಾನಂದ ಕರ್ಕಿ. ಸಂಜೆ   5.15ಕ್ಕೆ.
ಗೋಷ್ಠಿ–5: ಕವಿಗೋಷ್ಠಿ ಉದ್ಘಾಟನೆ: ಸಾಹಿತಿ ನವೀನ್‌ ಕುಮಾರ್. ಸಂಜೆ 6.35ಕ್ಕೆ. ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟನೆ: ಕೆ.ಯುವರಾಜ್. ರಾತ್ರಿ 8ಕ್ಕೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.