ADVERTISEMENT

ಇತ್ಯರ್ಥಕ್ಕೆ ಬಾಕಿ ಇರುವ ಪ್ರಕರಣಗಳು 16 ಲಕ್ಷ!

ಶಿವಮೊಗ್ಗ ವಕೀಲರ ಸಂಘದ ಕಾರ್ಯಕ್ರಮದಲ್ಲಿ ಕಾನೂನು ಸಚಿವ ಟಿ.ಬಿ.ಜಯಚಂದ್ರ ಮಾಹಿತಿ

​ಪ್ರಜಾವಾಣಿ ವಾರ್ತೆ
Published 14 ಜನವರಿ 2017, 8:58 IST
Last Updated 14 ಜನವರಿ 2017, 8:58 IST
ಶಿವಮೊಗ್ಗ ವಕೀಲರ ಸಂಘ ಶುಕ್ರವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕಾನೂನು ಸಚಿವ ಟಿ.ಬಿ.ಜಯಚಂದ್ರ ದಿವಂಗತ ಮಾಜಿ ಮುಖ್ಯಮಂತ್ರಿಗಳ ಭಾವಚಿತ್ರ ಅನಾವರಣಗೊಳಿಸಿದರು.
ಶಿವಮೊಗ್ಗ ವಕೀಲರ ಸಂಘ ಶುಕ್ರವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕಾನೂನು ಸಚಿವ ಟಿ.ಬಿ.ಜಯಚಂದ್ರ ದಿವಂಗತ ಮಾಜಿ ಮುಖ್ಯಮಂತ್ರಿಗಳ ಭಾವಚಿತ್ರ ಅನಾವರಣಗೊಳಿಸಿದರು.   
ಶಿವಮೊಗ್ಗ: ರಾಜ್ಯದ ವಿವಿಧ ಹಂತಗಳ 1,300 ನ್ಯಾಯಾಲಯಗಳಲ್ಲಿ ವಿಚಾರಣೆಗೆ ಬಾಕಿ ಇರುವ ಪ್ರಕರಣಗಳ ಸಂಖ್ಯೆ ಬರೋಬ್ಬರಿ 16 ಲಕ್ಷ!
 
ಶಿವಮೊಗ್ಗ ವಕೀಲರ ಸಂಘದ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ವಕೀಲರ ಭವನದ ಎರಡನೇ ಮಹಡಿ ಕಟ್ಟಡ ಉದ್ಘಾಟನೆ, ಮೂವರು ಮಾಜಿ ಮುಖ್ಯಮಂತ್ರಿಗಳ ಭಾವಚಿತ್ರ ಅನಾವರಣ ಕಾರ್ಯಕ್ರಮದಲ್ಲಿ ಕಾನೂನು ಸಚಿವ ಟಿ.ಬಿ.ಜಯಚಂದ್ರ ಮಾಹಿತಿ ನೀಡಿದರು.
 
ಬೇರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದ ನ್ಯಾಯಾಂಗ ವ್ಯವಸ್ಥೆ ಐದು ವರ್ಷ ಮುಂದೆ ಇದೆ. ಆದರೆ, ನ್ಯಾಯಾಲಯಗಳ ಸಂಖ್ಯೆ ಎಷ್ಟು ಹೆಚ್ಚಾದರೂ ಪ್ರಕರಣಗಳ ಸಂಖ್ಯೆಯೂ ಹೆಚ್ಚಾಗುತ್ತಿದೆ. ನ್ಯಾಯದಾನದ ವಿಳಂಬ ಕಳವಳ ಮೂಡಿಸುತ್ತದೆ ಎಂದರು.
 
ನ್ಯಾಯಾಂಗ ವ್ಯವಸ್ಥೆಗೆ ಅಗತ್ಯ ಮೂಲ ಸೌಕರ್ಯ ಒದಗಿಸುವುದು ಆಯಾ ಸರ್ಕಾರಗಳ ಕರ್ತವ್ಯ. ಹಿಂದಿನಿಂದಲೂ ಆಳ್ವಿಕೆ ನಡೆಸಿದ ಎಲ್ಲ ಸರ್ಕಾರಗಳೂ ಅಂತಹ ಜವಾಬ್ದಾರಿಯನ್ನು ಸೂಕ್ತವಾಗಿ ನಿಭಾಯಿಸಿವೆ. ವರ್ಷದಿಂದ ವರ್ಷಕ್ಕೆ ಹೆಚ್ಚಿನ ಅನುದಾನ ನೀಡಲಾಗಿದೆ. ಪ್ರಸಕ್ತ ಹಣಕಾಸಿನ ವರ್ಷದಲ್ಲೇ ₹ 697 ಕೋಟಿ ನೀಡಲಾಗಿದೆ ಎಂದು ವಿವರ ನೀಡಿದರು.
 
ಕೆಳಹಂತದ ನ್ಯಾಯಾಲಯಗಳು ಇನ್ನಷ್ಟು ಸುಧಾರಿಸಬೇಕು. ಪ್ರಕರಣಗಳ ತ್ವರಿತ ಇತ್ಯರ್ಥಕ್ಕೆ ನ್ಯಾಯಾಧೀಶರಿಗೆ ವಕೀಲರೂ ಅಗತ್ಯ ಸಹಕಾರ ನೀಡ
ಬೇಕು. ಕಾನೂನಾತ್ಮಕ ಆಳ್ವಿಕೆ ಬಲಪಡಿಸಬೇಕು. ನ್ಯಾಯಾಂಗ ವ್ಯವಸ್ಥೆಯಲ್ಲಿ ನೂತನ ತಂತ್ರಜ್ಞಾನ ಅಳವಡಿಸಿಕೊಳ್ಳಬೇಕು. ಯುವ ವಕೀಲರಿಗೆ ಸೂಕ್ತ ತರಬೇತಿ ನೀಡಬೇಕು. ತರಬೇತಿಗಾಗಿಯೇ ಸರ್ಕಾರ ₹ 60 ಲಕ್ಷ ಅನುದಾನ ನೀಡಿದೆ. ಈ ಅನುದಾನ ವಕೀಲರ ಸಂಘಗಳು ಬಳಸಿಕೊಂಡು ತರಬೇತಿ ಆಯೋಜಿಸಬೇಕು ಎಂದು ಸಲಹೆ ನೀಡಿದರು.
 
ನ್ಯಾಯಾಲಯ, ವಕೀಲರ ಸಂಘಗಳಿಗೆ ಸುಸಜ್ಜಿತ ಕಟ್ಟಡ ಕಟ್ಟಿದರೆ ಸಾಲದು, ನೊಂದವರಿಗೆ ಸೂಕ್ತ ನ್ಯಾಯ ದೊರೆಯಬೇಕು. ಅದಕ್ಕಾಗಿ ವಕೀಲರು ಪಣತೊಡಬೇಕು ಎಂದು ಕರೆ ನೀಡಿದರು.
 
ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಮಾತನಾಡಿ, ವೈದ್ಯರು ರೋಗಿಗಳಿಗೆ ಜೀವ ನೀಡಿದಂತೆ ವಕೀಲರು ತಮ್ಮ ಕಕ್ಷಿದಾರರಿಗೆ ನ್ಯಾಯ ನೀಡುತ್ತಾರೆ. ಹಾಗಾಗಿ, ವೈದ್ಯ ವೃತ್ತಿಯಷ್ಟೇ ವಕೀಲರ ವೃತ್ತಿಯೂ ಶ್ರೇಷ್ಠವಾದುದು ಎಂದರು.
 
ವಕೀಲರಿಗೆ ಅಗತ್ಯ ಬಡಾವಣೆ ನಿರ್ಮಿಸಲು, ನಿವೇಶನ ಹಂಚಿಕೆ ಮಾಡಲು ಸರ್ಕಾರ ಸಿದ್ಧವಿದೆ. ತಹಶೀಲ್ದಾರ್‌ ಅವರಿಗೆ ಸ್ಥಳದ ಮಾಹಿತಿ ಇರುವ ಅರ್ಜಿ ನೀಡಿದರೆ ವಾರದ ಒಳಗೆ  ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದರು.
 
ಸಂಸದ ಬಿ.ಎಸ್‌.ಯಡಿಯೂರಪ್ಪ ಮಾತನಾಡಿ, ‘ವಕೀಲರ ಸಂಘದ ಸದಸ್ಯರಾಗಿದ್ದ ಕಡಿದಾಳು ಮಂಜಪ್ಪ, ಎಸ್‌.ಬಂಗಾರಪ್ಪ, ಜೆ.ಎಚ್‌.ಪಟೇಲರು ಈ ರಾಜ್ಯದ ಮುಖ್ಯಮಂತ್ರಿಗಳಾಗಿ ಉತ್ತಮ ಹೆಸರು ಮಾಡಿದ್ದಾರೆ. ತಾವು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ವಕೀಲರ ಭವನಕ್ಕೆ ₹ 1.50 ಕೋಟಿ ಅನುದಾನ ನೀಡಲಾಗಿತ್ತು. 57 ಹೊಸ ನ್ಯಾಯಾಲಯ, ನ್ಯಾಯಾಧೀಶರ ವಸತಿ ಗೃಹ ಸೇರಿದಂತೆ ಸಾಕಷ್ಟು ನೆರವು ನೀಡಲಾಗಿತ್ತು’ ಎಂದು ಮಾಹಿತಿ ನೀಡಿದರು.
 
‘ನ್ಯಾಯಾಂಗದ ಮೇಲೆ ಜನರಿಗೆ ಈಗಲೂ ಅಪಾರ ವಿಶ್ವಾಸವಿದೆ. ಆದರೆ, ನ್ಯಾಯದಾನದ ವಿಳಂಬದ ಕಾರಣ ಜನರು ತೊಂದರೆ ಅನುಭವಿಸುತ್ತಿದ್ದಾರೆ. ಗ್ರಾಮೀಣ ಪ್ರದೇಶದ ಜನರೂ ಸಾಕಷ್ಟು ಕಷ್ಟ ಅನುಭವಿಸುತ್ತಿದ್ದಾರೆ’ ಎಂದು ಕಳವಳ ವ್ಯಕ್ತಪಡಿಸಿದರು.
 
‘ಸಂಸದರ ನಿಧಿಯ ಅನುದಾನವನ್ನು ಬರ ಪರಿಸ್ಥಿತಿಗೆ ಮಾತ್ರ ಮೀಸಲಿಡುವಂತೆ ಪ್ರಧಾನಿ ಸೂಚಿಸಿದ್ದಾರೆ. ಹಾಗಾಗಿ, ವಕೀಲರ ಭವನಕ್ಕೆ ನೆರವು ನೀಡಲು ಸಾಧ್ಯವಿಲ್ಲ’ ಎಂದು ಸ್ಪಷ್ಟಪಡಿಸಿದರು.
 
ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಭೀಮನಗೌಡ ಕೆ. ನಾಯಿಕ, ವಕೀಲರ ಸಂಘದ ಅಧ್ಯಕ್ಷ ಎನ್‌.ದೇವೇಂದ್ರಪ್ಪ, ಮಂಜುಳಾದೇವಿ, ಕೆ.ಎಂ.ಜಯರಾಮ್‌ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.