ADVERTISEMENT

‘ಉತ್ತಮ ಕಬ್ಬಿನಿಂದ ಗುಣಮಟ್ಟದ ಬೆಲ್ಲ’

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2017, 8:28 IST
Last Updated 21 ಡಿಸೆಂಬರ್ 2017, 8:28 IST

ಭದ್ರಾವತಿ: ‘ಉತ್ತಮ ಗುಣಮಟ್ಟದ ಕಬ್ಬನ್ನು ಉಪಯೋಗಿಸಿದಾಗ ಮಾತ್ರ ಅತ್ಯುತ್ತಮ ಬೆಲ್ಲ ತಯಾರಿಸಲು ಸಾಧ್ಯ’ ಎಂದು ಮಂಡ್ಯ ವಿಸಿ ಫಾರ್ಮ್ ತಜ್ಞ ಡಾ.ಸ್ವಾಮಿಗೌಡ ಹೇಳಿದರು.

ಇಲ್ಲಿನ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ಬುಧವಾರ ಆಹಾರ ಸುರಕ್ಷತಾ ಗುಣಮಟ್ಟ ಇಲಾಖೆ ಸಹಯೋಗದಲ್ಲಿ ನಡೆದ ಬೆಲ್ಲ ತಯಾರಿಕಾ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

12 ತಿಂಗಳು ಪೂರೈಸಿದ, ಉತ್ತಮ ತಳಿ, ಇಳುವರಿಯ ಕಬ್ಬನ್ನು ಉಪಯೋಗ ಮಾಡಿಕೊಂಡು ಆಲೆಮನೆಯಲ್ಲಿ ಬೆಲ್ಲ ತಯಾರಿಸಿದರೆ ಚಿನ್ನದ ಬಣ್ಣದ ಬೆಲ್ಲ ತಯಾರು ಮಾಡಲು ಸಾಧ್ಯ ಎಂದರು.

ADVERTISEMENT

ಬೆಲ್ಲ ಬೆಳ್ಳಗಿದ್ದರೆ ಮಾತ್ರ ಉತ್ತಮ ಎಂಬ ಮಾತುಗಳು ಕೇವಲ ಮಾರುಕಟ್ಟೆ ವಲಯದಲ್ಲಿ ಪ್ರಚಲಿತದಲ್ಲಿವೆ. ಆದರೆ, ಚಿನ್ನದ ಬಣ್ಣದ ಬೆಲ್ಲದಲ್ಲಿ ಇರುವ ಗುಣಮಟ್ಟ ದೈನಂದಿನ ಉಪಯೋಗಕ್ಕೆ ಪೂರಕ ಎಂದರು.

ಬೆಲ್ಲ ಬಿಳಿ ಬಣ್ಣಕ್ಕೆ ಬರಲು ಅನೇಕ ರಾಸಾಯನಿಕ ವಸ್ತುಗಳನ್ನು ಉಪಯೋಗಿಸುವುದರಿಂದ ಅದು ಹಾನಿಕಾರಕ. ಜತೆಗೆ ಆಹಾರ ಸುರಕ್ಷತಾ ಗುಣಮಟ್ಟ ಕಾಯ್ದೆಗೂ ವಿರುದ್ಧವಾಗಿದೆ ಎಂದು ನುಡಿದರು.

ಅನೇಕ ರಾಸಾಯನಿಕ ವಸ್ತುಗಳ ಮೇಲೆ ಬೆಲ್ಲದ ಚಿತ್ರ ಹಾಕಿರುತ್ತಾರೆ ಎಂದಮಾತ್ರಕ್ಕೆ ಅವುಗಳ ಉಪಯೋಗ ತಯಾರಿಕೆಗೆ ಅಗತ್ಯ ಎಂದು ಭಾವಿಸುವುದು ಸರಿಯಲ್ಲ, ಅದರಿಂದ ಉಂಟಾಗುವ ಹಾನಿ ಬಗೆಗೂ ತಿಳಿದಿರಬೇಕು ಎಂದು ಕಿವಿಮಾತು ಹೇಳಿದರು.

ಕಬ್ಬು ಖರೀದಿ, ಅದರ ಗುಣಮಟ್ಟ, ಅದರಲ್ಲಿನ ಜ್ಯೂಸ್ ಪ್ರಮಾಣ ಎಲ್ಲವೂ ಬೆಲ್ಲ ತಯಾರಿಕೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಇದನ್ನು ಸರಿಯಾಗಿ ನಿಭಾಯಿಸಿದಲ್ಲಿ ಚಿನ್ನ ಬಣ್ಣದ ಬೆಲ್ಲ ಸಿದ್ಧವಾಗುತ್ತದೆ. ಇದಕ್ಕೆ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆ ಇದೆ ಎಂದರು.

ಮಂಡ್ಯದ ವಿಸಿ ಫಾರ್ಮ್ ಸಹ ಈ ನಿಟ್ಟಿನಲ್ಲಿ ಪ್ರಯತ್ನ ನಡೆಸಿ ಯಶಸ್ವಿಯಾಗಿದೆ. ಇದಕ್ಕೆ ರೈತರ, ತಯಾರಕರ ಸಹಕಾರ ಅಗತ್ಯ. ಆಗ ಸಹಜವಾಗಿ ಗ್ರಾಹಕರ ಬೆಂಬಲ ಸಿಗಲಿದೆ ಎಂದು ನುಡಿದರು.

ಸಭೆಯಲ್ಲಿ ಜಿಲ್ಲಾ ಆಹಾರ ಸುರಕ್ಷತಾ ಗುಣಮಟ್ಟ ಇಲಾಖೆ ಅಧಿಕಾರಿ ಡಾ. ಶಂಕರಪ್ಪ, ತಾಲ್ಲೂಕು ಅಧಿಕಾರಿ ಡಾ. ಗುಡದಪ್ಪ ಕಸಬಿ, ಬೆಲ್ಲ ತಯಾರಿಕಾ ತಜ್ಞ ಡಾ. ಕೇಶವಯ್ಯ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.