ADVERTISEMENT

ಎಂಪಿಎಂ ನಷ್ಟಕ್ಕೆ ಭ್ರಷ್ಟಾಚಾರವೇ ಕಾರಣ

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2014, 10:00 IST
Last Updated 20 ಡಿಸೆಂಬರ್ 2014, 10:00 IST

ಶಿವಮೊಗ್ಗ: ‘ಸಮೃದ್ಧ ಸಂಪನ್ಮೂಲ ಹೊಂದಿರುವ ಭದ್ರಾವತಿಯ ಎಂಪಿಎಂ ಕಾರ್ಖಾನೆ ಅಲ್ಲಿನ ಭ್ರಷ್ಟಾಚಾರ ದಿಂದಾಗಿಯೇ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ’ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಕಾರ್ಯಾಧ್ಯಕ್ಷ ಎಚ್.ಆರ್. ಬಸವರಾಜಪ್ಪ ಗಂಭೀರ ಆರೋಪ ಮಾಡಿದರು.

ಅಗತ್ಯ ಇರುವಷ್ಟು ಅರಣ್ಯ ಪ್ರದೇಶ, ಪಲ್ಪ್, ದಕ್ಷ ಅಧಿಕಾರಿಗಳ ಸೇವೆ ಸಿಕ್ಕರೂ, ಕಾರ್ಖಾನೆ ಲಾಭದತ್ತ ಸಾಗಲು ಸಾಧ್ಯವಾಗಲಿಲ್ಲ. ಅದಕ್ಕೆ ಕಾರ್ಖಾನೆಯಲ್ಲಿನ ಭ್ರಷ್ಟಾಚಾರವೇ ಕಾರಣ ಎಂದು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ದೂರಿದರು.

ಚೆನ್ನೈನಲ್ಲಿರುವ ಸುಪ್ರೀಂ ಕೋರ್ಟ್‌ನ ಪ್ರಾದೇಶಿಕ ಹಸಿರು ಪೀಠದಿಂದ ತಡೆಯಾಜ್ಞೆ ಸಿಗುವುದು ತಡವಾದರೆ ರೈತರು ಬೆಳೆದ ಕಬ್ಬು ಒಣಗುತ್ತದೆ. ಹಾಗಾಗಿ, ಕುಕ್ಕುವಾಡದ ಸಕ್ಕರೆ ಕಾರ್ಖಾನೆಗೆ ಕಬ್ಬು ಸಾಗಿಸಬೇಕು. ಅಲ್ಲಿಗೆ ಸಾಗಿಸುವ ಸಾಗಣೆ ವೆಚ್ಚವನ್ನು ಸರ್ಕಾರವೇ ಭರಿಸಬೇಕು ಎಂದು ಒತ್ತಾಯಿಸಿದರು.

ಎಂಪಿಎಂ ಸೇರಿದಂತೆ ಯಾವುದೇ ಕಾರ್ಖಾನೆಗೆ ರಾಜಕೀಯ ಸಂತ್ರಸ್ತರನ್ನು ಅಧ್ಯಕ್ಷರನ್ನಾಗಿ ನೇಮಿಸುವ ಪರಿಪಾಠ ನಿಲ್ಲಬೇಕು. ಅಭಿವೃದ್ಧಿಯ ವಿಚಾರದಲ್ಲಿ ಯಾವುದೇ ಪಕ್ಷಗಳು ರಾಜಕೀಯ ಬೆರೆಸಬಾರದು ಎಂದು ಕಿವಿಮಾತು ಹೇಳಿದರು.

ಖಾಸಗಿ ಸಹಭಾಗಿತ್ವದತ್ತ ಒಲವು: ಕಾರ್ಖಾನೆ ಉಳಿಸಬೇಕಾದರೆ ಖಾಸಗಿ– ಸರ್ಕಾರಿ ಸಹಭಾಗಿತ್ವದಲ್ಲಿ ಕಾರ್ಖಾನೆ ಆರಂಭಿಸಬೇಕು. ವ್ಯವಸ್ಥಾಪಕ ನಿರ್ದೇಶಕರ ಸ್ಥಾನ ಖಾಸಗಿಗೆ ಬಿಟ್ಟುಕೊಟ್ಟರೆ ಕಾರ್ಖಾನೆ ವಹಿಸಕೊಳ್ಳಲು ಅನೇಕ ಕಂಪೆನಿಗಳು ಮುಂದೆ ಬವರಲಿವೆ ಎಂದರು.

ಬಡ ರೈತರ ಒತ್ತುವರಿ ತೆರವು ಬೇಡ: ನಗರ ಪ್ರದೇಶದಲ್ಲಿ ಕಂದಾಯ ಭೂಮಿ ಒತ್ತುವರಿ ಮಾಡಿಕೊಂಡ ಭೂಗಳ್ಳರನ್ನು ಪತ್ತೆಹಚ್ಚಲು ರಚಿಸಿದ ಎ.ಟಿ.ರಾಮಸ್ವಾಮಿ ನೇತೃತ್ವದ ಸಮಿತಿ ಪ್ರಕಾರ ಭೂ ಒತ್ತುವರಿ ತೆರವು ಮಾಡಲು ಸಂಘದ ವಿರೋಧವಿಲ್ಲ. ಆದರೆ, ಭೂಮಿಯೇ ಇಲ್ಲದ ಬಡ ರೈತರು ಮಾಡಿಕೊಂಡ ಒತ್ತುವರಿ ತೆರವಿಗೆ ಸಂಘದ ವಿರೋಧವಿದೆ. ರೈತರ ಹೆಸರಲ್ಲಿ ಭೂ ಒತ್ತುವರಿ ಮಾಡಿಕೊಂಡು ರಿಯಲ್‌ ಎಸ್ಟೇಟ್‌ ದಂಧೆ ನಡೆಸುವ ಪಟ್ಟಭದ್ರರ ಮಟ್ಟಹಾಕಲಿ. ಆದರೆ, ಬಡ ರೈತರಿಗೆ ತೊಂದರೆ ಮಾಡುವುದು ಬೇಡ ಎಂದು ಸಲಹೆ ನೀಡಿದರು.

ಅರಣ್ಯಹಕ್ಕು ಕಾಯ್ದೆ, ಬಗರ್‌ಹುಕುಂ ಸಾಗುವಳಿ ಅಡಿ ಅರ್ಜಿ ಸಲ್ಲಿಸಿದ ಸಣ್ಣಪುಟ್ಟ ಬಡ ರೈತರಿಗೆ ಅಗತ್ಯ ಭೂಮಿ ನೀಡಬೇಕು. ಈಗಿರುವ ಸ್ಥಿತಿಯಲ್ಲೇ ಕಸ್ತೂರಿರಂಗನ್‌ ವರದಿ ಜಾರಿಗೊಳಿಸಬಾರದು. ಸುಪ್ರೀಂ ಕೋರ್ಟ್‌ ಆದೇಶದಂತೆ ಅರಣ್ಯಭೂಮಿ ಸಾಗುವಳಿ ಮಾಡಿದ ರೈತರಿಗೆ 3 ಎಕರೆ, ಕಂದಾಯ ಭೂಮಿಯಲ್ಲಿ 5 ಎಕರೆ ಜಮೀನು ಮಂಜೂರು ಮಾಡಬೇಕು. ಕರ್ನಾಟಕ ಭೂ ಕಂದಾಯ ಕಾಯ್ದೆ–1964ರ ಕಾಲಂ 192 (2)ಕ್ಕೆ ಸೂಕ್ತ ತಿದ್ದುಪಡಿ ತರಬೇಕು ಎಂದು ಆಗ್ರಹಿಸಿದರು.

ಪತ್ರಿಕಾಗೋಷ್ಠಿಯಲ್ಲಿ ರೈತ ಮುಖಂಡರಾದ ಡಾ.ಬಿ.ಎಂ. ಚಿಕ್ಕಸ್ವಾಮಿ, ಹಿಟ್ಟೂರು ರಾಜು, ಕೆ.ರಾಘವೇಂದ್ರ, ಎಸ್.ಶಿವಮೂರ್ತಿ, ಟಿ.ಎಂ.ಚಂದ್ರಪ್ಪ, ಇ.ಬಿ.ಜಗದೀಶ್ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.