ADVERTISEMENT

ಎಂಪಿಎಂ ಪುನಶ್ಚೇತನಕ್ಕೆ ಒತ್ತಾಯ

ಕಾರ್ಮಿಕರಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2017, 5:44 IST
Last Updated 14 ಮಾರ್ಚ್ 2017, 5:44 IST

ಶಿವಮೊಗ್ಗ: ವಿಆರ್ಎಸ್ ಪ್ಯಾಕೇಜ್‌ಗೆ ನೀಡಲು ಉದ್ದೇಶಿಸಿರುವ ₹ 185 ಕೋಟಿ ಹಣವನ್ನು ಎಂಪಿಎಂ ಕಾರ್ಖಾನೆಯ ಪುನಶ್ಚೇತನಕ್ಕೆ ಮತ್ತು ಕಾರ್ಯಾತ್ಮಕ ಬಂಡವಾಳಕ್ಕೆ ತೊಡಗಿಸಿ ತಕ್ಷಣ ಕಾರ್ಖಾನೆಯನ್ನು ಪ್ರಾರಂಭಿಸಬೇಕು ಎಂದು ಒತ್ತಾಯಿಸಿ ಎಂಪಿಎಂ ಕಾರ್ಖಾನೆಯ ಕಾರ್ಮಿಕರು ಸೋಮವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಕಾರ್ಖಾನೆಯನ್ನು ಖಾಸಗಿ ಯವರಿಗೆ ದೀರ್ಘಕಾಲದ ಗುತ್ತಿಗೆ ನೀಡಿ, ಕಾರ್ಮಿಕರಿಗೆ ಹಿಂದಿನಿಂದ ಬಾಕಿ ಉಳಿದಿರುವ ಶಾಸನಬದ್ದವಾದ ಸೌಲಭ್ಯಗಳ ಜತೆಗೆ ಸ್ವಯಂನಿವೃತ್ತಿ ಸೌಲಭ್ಯಗಳನ್ನು ನೀಡಲು ₹ 396 ಕೋಟಿ ಹಣ ಪ್ಯಾಕೇಜ್‌ಗೆ 2016ರಲ್ಲಿ ನಡೆದ ಸಚಿವ ಸಂಪುಟದ ಸಭೆಯಲ್ಲಿ ಅನುಮೋದನೆ ನೀಡಿರುವುದಾಗಿ ಸಚಿವ ಟಿ.ಬಿ. ಜಯಚಂದ್ರ ತಿಳಿಸಿದ್ದಾರೆ.

ಆದರೆ, 2017ರ ಮಾ. 6 ರಂದು ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಹೊರಡಿಸಿರುವ ಆದೇಶದಲ್ಲಿ ಸಚಿವ ಸಂಪುಟದ ಸಭೆಯಲ್ಲಿ ಅನುಮೋದನೆ ನೀಡಿದ್ದ ₹ 396 ಕೋಟಿ ಹಣದಲ್ಲಿ ಅರ್ಧದಷ್ಟು ಮೊತ್ತವನ್ನು ಕಡಿತಗೊಳಿಸಿ ₹ 185 ಕೋಟಿ ಹಣ ಜಾರಿಗೊಳಿಸಲು ಆದೇಶವನ್ನು ಹೊರಡಿಸುವ ಮೂಲಕ ಕಾರ್ಮಿಕರಿಗೆ ದ್ರೋಹ ಬಗೆದಿದ್ದಾರೆ ಎಂದು ಆರೋಪಿಸಿದರು.

ಕಾರ್ಮಿಕರಿಗೆ ಪದೇ ಪದೇ ಮೋಸವಾಗುತ್ತಿರುವ ಕಾರಣ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಜಾರಿ ಮಾಡಲು ಹೊರಟಿರುವ ಸ್ವಯಂ ನಿವೃತ್ತಿ ಪ್ಯಾಕೇಜ್ ಆದೇಶವನ್ನು ತಕ್ಷಣ ರದ್ದುಗೊಳಿಸಬೇಕು ಎಂದು ಆಗ್ರಹಿಸಿದರು.

ಎಂಪಿಎಂ ಕಾರ್ಖಾನೆಯನ್ನು ಗುತ್ತಿಗೆ ನೀಡುವ ಪ್ರಸ್ತಾವನೆಯನ್ನು ಕೈಬಿಡಬೇಕು. ಸಹಸ್ರಾರು ಕಾರ್ಮಿಕ, ರೈತ, ವರ್ತಕರ ಹಾಗೂ ನಾಗರಿಕ ಕುಟುಂಬಗಳಿಗೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಆಶ್ರಯವಾಗಿರುವ ಎಂಪಿಎಂ ಕಾರ್ಖಾನೆಯನ್ನು ಪ್ರಾರಂಭಿಸಬೇಕು ಎಂದು ಒತ್ತಾಯಿಸಿದರು.

ಎಂಪ್ಲಾಯಿಸ್‌ ಅಸೋಸಿಯೇಷನ್ ಅಧ್ಯಕ್ಷ ಸಿ.ಎಸ್. ಶಿವಮೂರ್ತಿ, ಎ.ದಾನಂ, ಎಚ್.ಮಂಜಪ್ಪ, ಬಾಬು, ಡಿ.ಸಿ. ಮಾಯಣ್ಣ, ಗಣೇಶ್, ಜ್ಞಾನಶೇಖರನ್ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.