ADVERTISEMENT

ಐದು ವರ್ಷದ ಒಳಗೆ ಎಲ್ಲರಿಗೂ ‘ಸೂರು’

ಕ್ರಿಯಾ ಯೋಜನೆ ರೂಪಿಸಿ, ಸಲ್ಲಿಸಲು ಜಿಲ್ಲಾಡಳಿತ ಸೂಚನೆ

​ಪ್ರಜಾವಾಣಿ ವಾರ್ತೆ
Published 11 ಜುಲೈ 2017, 6:35 IST
Last Updated 11 ಜುಲೈ 2017, 6:35 IST

ಶಿವಮೊಗ್ಗ:  ಸರ್ವರಿಗೂ ಸೂರು ಯೋಜನೆ ಅನ್ವಯ 2022ರ ಒಳಗೆ ದೇಶದಲ್ಲಿರುವ ಎಲ್ಲ ವಸತಿರಹಿತರಿಗೂ ಸೂರು ಕಲ್ಪಿಸಲಾಗುವುದು. ಅದಕ್ಕಾಗಿ ಸೂಕ್ತ ಕ್ರಿಯಾ ಯೋಜನೆ ರೂಪಿಸಬೇಕು ಎಂದು ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಎಚ್.ಆರ್. ರಾಜಪ್ಪ ಸೂಚಿಸಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ನಗರ, -ಪಟ್ಟಣ ಸಂಸ್ಥೆ ಹಾಗೂ ಕೊಳಚೆ ನಿರ್ಮೂಲನಾ ಮಂಡಳಿ ಅಧಿಕಾರಿಗಳಿಗೆ ಆಯೋಜಿಸಿದ್ದ ‘ಸರ್ವರಿಗೂ ಸೂರು’ ಯೋಜನೆ ತರಬೇತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು. ಅರ್ಹ ಫಲಾನುಭವಿಗಳ ಪಟ್ಟಿ ವಾರದ ಒಳಗೆ ಜಿಲ್ಲಾಡಳಿತಕ್ಕೆ ಸಲ್ಲಿಸಬೇಕು. 

ಸರ್ವರಿಗೂ ಸೂರು ಯೋಜನೆ ಅಡಿ ಮನೆ ನಿರ್ಮಿಸಿಕೊಳ್ಳುವ ವಸತಿ ರಹಿತರಿಗೆ ಕೇಂದ್ರ, ರಾಜ್ಯ ಸರ್ಕಾರಗಳಿಂದ ನಿರ್ದಿಷ್ಟ ಮೊತ್ತದ ಸಹಾಯಧನ ಲಭ್ಯವಾಗಲಿದೆ. ಮಧ್ಯಮ ಆದಾಯ ಹೊಂದಿದ ವ್ಯಕ್ತಿ ಮನೆ ನಿರ್ಮಾಣ ಮಾಡಲು ಶೇ 6.5 ರಷ್ಟು ಹಾಗೂ ಆರ್ಥಿಕವಾಗಿ ದುರ್ಬಲವಾಗಿರುವ ವ್ಯಕ್ತಿಗೆ ₹ 1.50 ಲಕ್ಷ ಸಹಾಯಧನ  ಕೇಂದ್ರ ಸರ್ಕಾರ ನೀಡಲಿದೆ ಎಂದರು.

ADVERTISEMENT

ರಾಜ್ಯ ಸರ್ಕಾರ ಹಿಂದುಳಿದ ವರ್ಗ, ಪರಿಶಿಷ್ಟರಿಗೆ  ₹ 1.80 ಲಕ್ಷ ಹಾಗೂ ಇತರ ವರ್ಗಗಳಿಗೆ ₹ 1.20 ಲಕ್ಷ ಸಹಾಯಧನ ಕಲ್ಪಿಸಲಿದೆ ಎಂದು ಸಭೆಯಲ್ಲಿ ಮಾಹಿತಿ ನೀಡಿದರು.

ಮಾಹಿತಿ ಸಂಗ್ರಹಿಸಿ:  ಈಗಾಗಲೇ ವಸತಿ ರಹಿತ ನಾಗರಿಕರು ಕೊಳಚೆ ನಿರ್ಮೂಲನಾ ಮಂಡಳಿ, ನಗರ, ಸ್ಥಳೀಯ ಸಂಸ್ಥೆ ಹಾಗೂ ಸಿಟಿಜನ್ ಪೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿಗಳಲ್ಲಿನ ಮಾಹಿತಿಯ ಸತ್ಯಾಸತ್ಯತೆ ಪರಿಶೀಲಿಸಬೇಕು. ನಂತರ ಅರ್ಹ ಅರ್ಜಿಗಳ ಪಟ್ಟಿ ಜಿಲ್ಲಾಡಳಿತಕ್ಕೆ ಕಳುಹಿಸಿಕೊಡಬೇಕು ಎಂದು ಸೂಚಿಸಿದರು.
ನಗರಾಭಿವೃದ್ಧಿ ಕೋಶದ ಅಧಿಕಾರಿ ಪ್ರಮೋದ್ ಕುಮಾರ್ ಉಪಸ್ಥಿತರಿದ್ದರು.

***

ವಸತಿ ಫಲಾನುಭವಿಗಳು 22,252

ಜಿಲ್ಲೆಯ 9 ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಒಟ್ಟಾರೆ 22,252 ಫಲಾನುಭವಿಗಳನ್ನು ಗುರುತಿಸಲಾಗಿದೆ. ಕೊಳಚೆ ನಿರ್ಮೂಲನಾ ಮಂಡಳಿ, ನಗರ-ಪಟ್ಟಣ ಸ್ಥಳೀಯ ಸಂಸ್ಥೆ ಹಾಗೂ ಸಿಟಿಜನ್ ಪೋರ್ಟ್‌ನಲ್ಲಿ ಅಪ್‌ಡೇಟ್ ಮಾಡಿದ ಅರ್ಜಿದಾರರಲ್ಲಿ ಪರಿಷ್ಕರಣೆ ಮಾಡಿದ ನಂತರ ಪಟ್ಟಿ ತಯಾರಿಸಲಾಗಿದೆ.

ಪಾಲಿಕೆಯಲ್ಲಿ 19,885, ಭದ್ರಾವತಿ ನಗರಸಭೆ 15,957, ಸಾಗರ ನಗರಸಭೆ 955, ಶಿಕಾರಿಪುರ ಪುರಸಭೆ 3731, ತೀರ್ಥಹಳ್ಳಿ ಪಟ್ಟಣ ಪಂಚಾಯ್ತಿ 375, ಶಿರಾಳಕೊಪ್ಪ ಪಟ್ಟಣ ಪಂಚಾಯ್ತಿ 50, ಸೊರಬ ಪಟ್ಟಣ ಪಂಚಾಯ್ತಿ 427, ಹೊಸನಗರ ಪಟ್ಟಣ ಪಂಚಾಯ್ತಿ 603 ಹಾಗೂ ಜೋಗ - ಕಾರ್ಗಲ್ ಪಟ್ಟಣ ಪಂಚಾಯ್ತಿ 154 ಅರ್ಜಿಗಳು ಸಲ್ಲಿಕೆಯಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.