ADVERTISEMENT

ಕಾಮಗಾರಿಗಳ ಅನುಷ್ಠಾನ ನನೆಗುದಿಗೆ

ಸಾಗರ ತಾಲ್ಲೂಕು ಪಂಚಾಯ್ತಿ ಸಾಮಾನ್ಯ ಸಭೆ: ವಿವಿಧ ಇಲಾಖೆ ಅಧಿಕಾರಿಗಳ ಗೈರು, ಸದಸ್ಯರ ಅಸಮಾಧಾನ

​ಪ್ರಜಾವಾಣಿ ವಾರ್ತೆ
Published 7 ಜುಲೈ 2015, 6:28 IST
Last Updated 7 ಜುಲೈ 2015, 6:28 IST

ಸಾಗರ: ತಾಲ್ಲೂಕು ಪಂಚಾಯ್ತಿಯ ಸಾಮಾನ್ಯ ಸಭೆಗೆ  ಅಧಿಕಾರಿಗಳು ಗೈರು ಹಾಜರಾಗುತ್ತಿರುವ ಬಗ್ಗೆ  ಸೋಮವಾರ ನಡೆದ ಸಾಮಾನ್ಯ ಸಭೆಯಲ್ಲಿ ಸದಸ್ಯರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ವಿಷಯ ಪ್ರಸ್ತಾಪಿಸಿದ  ಸದಸ್ಯ ಷಣ್ಮುಖಪ್ಪ, ‘ಅನೇಕ ಕಾಮಗಾರಿಗಳು ಅನುಷ್ಠಾನಗೊಳ್ಳಬೇಕಿದ್ದು, ಈ ಸಂಬಂಧ ಅಧಿಕಾರಿಗಳೊಂದಿಗೆ ಚರ್ಚಿಸಬೇಕಿತ್ತು. ನಮ್ಮ ಅವಧಿ  ಮುಗಿಯುತ್ತಾ ಬಂದಿದ್ದು ಅಧಿಕಾರಿಗಳು ಸಭೆಗೆ ಬರದಿದ್ದರೆ ಅವರಿಂದ ಕೆಲಸ ಮಾಡಿಸುವುದು ಹೇಗೆ  ’ ಎಂದು ಅವರು  ಪ್ರಶ್ನಿಸಿದರು.

ಸದಸ್ಯೆ ಪಾರ್ವತಿ ಈಶ್ವರ್ ಮಾತನಾಡಿ, ಅಧಿಕಾರಿಗಳು  ಗೈರಾಗುತ್ತಿರುವುದನ್ನು ನೋಡಿದರೆ ತಾಲ್ಲೂಕು ಪಂಚಾಯ್ತಿ ಸಭೆಯನ್ನು ಅವರು ಗಂಭೀರವಾಗಿ ಪರಿಗಣಿಸಿಲ್ಲ ಎಂಬ ಭಾವನೆ ಮೂಡುತ್ತಿದೆ. ಗೈರಾಗಿರುವ ಅಧಿಕಾರಿಗಳ ಮೇಲೆ ಕ್ರಮ ಜರುಗಿಸದೆ ಇದ್ದರೆ ಸಮಸ್ಯೆ ಬಗೆಹರಿಯುವುದಿಲ್ಲ ಎಂದರು.

ಸದಸ್ಯೆ ಶ್ಯಾಮಲಾ ದೇವರಾಜ್ ಮಾತನಾಡಿ,  ಸಭೆಗೆ ಗೈರಾದ ಅಧಿಕಾರಿಗಳಿಗೆ  ನೋಟಿಸ್ ನೀಡಿರುವುದಾಗಿ ಕಾರ್ಯನಿರ್ವಹಣಾಧಿಕಾರಿಗಳು ಹೇಳುತ್ತಿದ್ದಾರೆ.  ಈವರೆಗೆ ಎಷ್ಟು ಅಧಿಕಾರಿಗಳಿಗೆ ನೋಟಿಸ್ ನೀಡಿದ್ದೀರಿ ಎನ್ನುವ ಬಗ್ಗೆ ಸಭೆಗೆ ವಿವರ ನೀಡಿ ಎಂದು  ಒತ್ತಾಯಿಸಿದರು. ಇದಕ್ಕೆ ಉಳಿದ ಸದಸ್ಯರು ದನಿಗೂಡಿಸಿದರು.

ಈ ಹಂತದಲ್ಲಿ ಗೈರು ಹಾಜರಾದ ಅಧಿಕಾರಿಗಳಿಗೆ ಕಾರ್ಯನಿರ್ವಹಣಾಧಿಕಾರಿಗಳು ಯಾವುದೇ ನೋಟಿಸ್ ನೀಡದೆ ಇರುವ ವಿಷಯ ಬೆಳಕಿಗೆ ಬಂತು.  ಸಭೆಗೆ ತಪ್ಪು ಮಾಹಿತಿ ನೀಡಿದ ಬಗ್ಗೆ  ಸದಸ್ಯರು  ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಆಗ ಕಾರ್ಯನಿರ್ವಹಣಾಧಿಕಾರಿ ಡಾ.ಟಿ.ಕಲ್ಲಪ್ಪ ಸಭೆಯ ಕ್ಷಮೆ ಯಾಚಿಸಿದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ಜ್ಯೋತಿ ಮುರಳೀಧರ್ ಮಾತನಾಡಿ, ಇನ್ನು ಮುಂದೆ ಸಭೆಗೆ ಗೈರಾಗುವ ಅಧಿಕಾರಿಗಳ ಮೇಲೆ ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗುವುದು.  ವಿಧಾನಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಅವರ ಗಮನಕ್ಕೆ ತರಲಾಗುವುದು ಎಂದರು. ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಕಲಗೋಡು ರತ್ನಾಕರ, ತಾ.ಪಂ. ಉಪಾಧ್ಯಕ್ಷ ಸೈಯದ್ ಇಬ್ರಾಹಿಂ,
ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.