ADVERTISEMENT

ಕೆರೆಗಳ ಹೂಳೆತ್ತಲು ನೆರವು : ಕಾಗೋಡು

​ಪ್ರಜಾವಾಣಿ ವಾರ್ತೆ
Published 24 ಮೇ 2017, 5:17 IST
Last Updated 24 ಮೇ 2017, 5:17 IST

ಸಾಗರ: ರಾಜ್ಯದಲ್ಲಿ ಬರ ಇರುವ  ಕಾರಣ ಕೆರೆಗಳ ಹೂಳೆತ್ತುವ ಕಾಮಗಾರಿಗೆ ರಾಜ್ಯ ಸರ್ಕಾರ ಹೆಚ್ಚಿನ ನೆರವು ನೀಡುತ್ತಿದೆ ಎಂದು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ತಿಳಿಸಿದರು. ತಾಲ್ಲೂಕಿನ ಮರಸ ಗ್ರಾಮದ ಕೌತಿಯ ನರಸಪ್ಪನ ಕೆರೆ ಹೂಳೆತ್ತುವ ಕಾಮಗಾರಿಗೆ ಮಂಗಳವಾರ ಚಾಲನೆ ನೀಡಿ ಮಾತನಾಡಿದರು.

‘ಬರದಿಂದಾಗಿ ಕೆರೆಕಟ್ಟೆಗಳು ನೀರಿಲ್ಲದೆ ಒಣಗಿವೆ. ಅವುಗಳ ಹೂಳೆತ್ತುವ ಕಾರ್ಯ ನಡೆಸಿದಲ್ಲಿ ಮುಂಬರುವ ಮಳೆಗಾಲದಲ್ಲಿ ಉತ್ತಮ ಫಲಿತಾಂಶ ಕಾಣಲು ಸಾಧ್ಯ’ ಎಂದರು.
ತಾಲ್ಲೂಕಿನ ಗೌತಮಪುರ, ಬರೂರು, ಮಲಂದೂರು, ಆನಂದಪುರ, ಬೆಳೆಯೂರು, ಹೊನ್ನೆಸರ, ಕೇಡಲಸರ, ತ್ಯಾಗರ್ತಿ, ಜಂಬಾನೆ, ಬರದವಳ್ಳಿ ಮೊದಲಾದ ಗ್ರಾಮಗಳಲ್ಲಿ ಸಣ್ಣ ನೀರಾವರಿ ಹಾಗೂ ಜಿಲ್ಲಾ ಪಂಚಾಯ್ತಿ ವಿಭಾಗದಿಂದ ಕೆರೆಗಳ ಹೂಳೆತ್ತುವ ಕಾರ್ಯ ಕೈಗೊಳ್ಳಲಾಗಿದೆ.

ಕೆರೆಗಳಲ್ಲಿ ನೀರಿನ ಪ್ರಮಾಣ ಸಂಪೂರ್ಣವಾಗಿ ಕುಸಿದಿರುವುದರಿಂದ ನೀರು ಖಾಲಿ ಮಾಡುವ ಕೆಲಸ ಸುಲಲಿತವಾಗಿ ನಡೆದಿದ್ದು ನಂತರ ಹೂಳೆತ್ತುವ ಕಾಮಗಾರಿ ನಡೆಸಲಾಗುತ್ತಿದೆ ಎಂದು ತಿಳಿಸಿದರು.

ADVERTISEMENT

ಕೆರೆಗಳ ಹೂಳೆತ್ತುವ ಜೊತೆಗೆ ಕೆರೆಯ ನಿಖರವಾದ ವಿಸ್ತೀರ್ಣವನ್ನು ತಿಳಿದುಕೊಂಡು ಅಳತೆ ಮಾಡಿ ಕೆರೆಯ ಗಡಿ ಗುರುತಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಕೆರೆಯ ಪ್ರದೇಶ ಒತ್ತುವರಿಯಾಗಿರುವುದು ಕಂಡು ಬಂದಲ್ಲಿ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು ಎಂದರು.

ನರಸಪ್ಪನ ಕೆರೆ ಸುಮಾರು ಸಾವಿರ ಎಕರೆಗೂ ಹೆಚ್ಚಿನ ಕೃಷಿಭೂಮಿಗೆ ನೀರುಣಿಸುವ ಕೆಲಸ ಮಾಡುತ್ತಿದೆ. ಹೀಗಾಗಿ ಈ ಕೆರೆಯನ್ನು ಪುನಶ್ಚೇತನಗೊಳಿಸುವ ಕೆಲಸಕ್ಕೆ ಸಂಕಲ್ಪ ಮಾಡಲಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ  ಲೋಕೋ ಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲ  ಎಂಜಿನಿಯರ್‌ ಟಿ.ಪಿ.ರಮೇಶ್, ಸಣ್ಣ ನೀರಾವರಿ ಇಲಾಖೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಅಮೀರ್, ನಗರಸಭೆ ಸದಸ್ಯ ತಾರಾಮೂರ್ತಿ, ಎಪಿಎಂಸಿ ಸದಸ್ಯ ಗಲ್ಲಿ ವೆಂಕಟೇಶ್, ಗ್ರಾಮ ಪಂಚಾಯ್ತಿ ಸದಸ್ಯ ನಾಗರಾಜ್‌ ಎಸ್.ಕೆ, ರಮೇಶ್‌ ಮರಸ, ಮಹಾಬಲ ಕೌತಿ  ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.