ADVERTISEMENT

ಖಾದಿ ಉದ್ಯಮಕ್ಕೆ ₹ 40 ಕೋಟಿ ಅನುದಾನ

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2017, 9:48 IST
Last Updated 9 ಸೆಪ್ಟೆಂಬರ್ 2017, 9:48 IST

ಶಿವಮೊಗ್ಗ: ಸ್ವಾತಂತ್ರ್ಯ ಚಳವಳಿಯಲ್ಲಿ ವಿಶೇಷ ಮಹತ್ವ ಹೊಂದಿದ್ದ ಗ್ರಾಮೀಣ ಕಸುಬುಗಳು ಹಾಗೂ ಖಾದಿ ಉತ್ಪನ್ನಗಳಿಗೆ ಪ್ರೋತ್ಸಾಹ ನೀಡಬೇಕಾದುದು ಇಂದಿನ ತುರ್ತು ಅಗತ್ಯ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕಾಗೋಡು ತಿಮ್ಮಪ್ಪ ಹೇಳಿದರು. ದೈವಜ್ಞ ಕಲ್ಯಾಣ ಮಂದಿರದಲ್ಲಿ ಶುಕ್ರವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ ಹಾಗೂ ಜಿಲ್ಲಾ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಸಹಯೋಗದಲ್ಲಿ 10 ದಿನಗಳ ಕಾಲ ಆಯೋಜಿಸಲಾಗಿರುವ ಖಾದಿ ಉತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು.

ಸಣ್ಣ ಉದ್ಯೋಗ ಮತ್ತು ಸಣ್ಣ ಬಂಡವಾಳಸ್ಥರು ದೇಶದ ಅಭಿವೃದ್ಧಿಗೆ ಪೂರಕವಾಗಿದ್ದಾರೆ ಎಂದು ಗಾಂಧೀಜಿ ನಂಬಿದ್ದರು. ಅವರ ಆಶಯದಂತೆ ಖಾದಿ ಮತ್ತು ಗ್ರಾಮೀಣ ಉತ್ಪನ್ನಗಳನ್ನು ಪ್ರೋತ್ಸಾಹಿಸಬೇಕಿದೆ. ರಾಜ್ಯದ ಪ್ರತಿ ಪಂಚಾಯ್ತಿಯಲ್ಲಿ ಕನಿಷ್ಠ 10 ಜನರನ್ನಾದರೂ ಖಾದಿ ಉದ್ಯಮದಲ್ಲಿ ತೊಡಗಿಸಿಕೊಳ್ಳುವಂತೆ ಪ್ರೇರಣೆ ನೀಡಬೇಕು. ಇದಕ್ಕಾಗಿ ಕನಿಷ್ಠ ₹ 40 ಕೋಟಿ ಅನುದಾನ ಸರ್ಕಾರದಿಂದ ಬಿಡುಗಡೆ ಮಾಡಲು ಪ್ರಯತ್ನಿಸುವುದಾಗಿ ಅವರು ತಿಳಿಸಿದರು.

ಖಾದಿ ಕೈಗಾರಿಕೋದ್ಯಮಿಗಳು ತಮ್ಮ ಗುಣಮಟ್ಟದ ಉತ್ಪನ್ನಗಳನ್ನು ಯಾವುದೇ ಮಧ್ಯವರ್ತಿಗಳಿಲ್ಲದೆ ಗ್ರಾಹಕರಿಗೆ ನೇರವಾಗಿ ರಿಯಾಯಿತಿ ದರದಲ್ಲಿ ಮಾರಾಟ ಮಾಡಲು ಈ ಖಾದಿ ಉತ್ಸವ ಸಹಕಾರಿ ಎಂದರು. ಗ್ರಾಮೀಣ ನಿರುದ್ಯೋಗಿಗಳಿಗೆ ಶಾಶ್ವತ ಉದ್ಯೋಗಾವಕಾಶ ದೊರಕಿಸಿ ಕೊಡುವ ಉದ್ದೇಶದಿಂದ ಖಾದಿ ಉದ್ಯಮ ಹಾಗೂ ಗ್ರಾಮೀಣ ಕರಕುಶಲಕರ್ಮಿಗಳ ತರಬೇತಿಗಾಗಿ ಸುಮಾರು ₹ 100 ಕೋಟಿ ಮಂಜೂರು ಮಾಡುವಂತೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲು ಖಾದಿ ಮಂಡಳಿ ಅಧ್ಯಕ್ಷರಿಗೆ ಸಚಿವ ಕಾಗೋಡು ತಿಮ್ಮಪ್ಪ ಸೂಚಿಸಿದರು. ಶಿವಮೊಗ್ಗದಲ್ಲಿ ಖಾದಿ ಮಂಡಳಿಯ ಶಾಶ್ವತ ಕಟ್ಟಡ ನಿರ್ಮಾಣಕ್ಕೆ ಅಗತ್ಯ ಭೂಮಿಯನ್ನು ನಗರದ ಹೃದಯ ಭಾಗದಲ್ಲಿ ಮಂಜೂರು ಮಾಡುವಂತೆ ಸೂಡಾ ಅಧ್ಯಕ್ಷರಿಗೆ ತಾಕೀತು ಮಾಡಿದರು.

ADVERTISEMENT

ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಅಧ್ಯಕ್ಷ ಯಲವಳ್ಳಿ ಎನ್.ರಮೇಶ್ ಮಾತನಾಡಿ, ‘ಗ್ರಾಮೀಣ ಜನರಿಗೆ ಗುಡಿ ಕೈಗಾರಿಕೆಗೆ ಉತ್ತೇಜನ ನೀಡಲು ಹಾಗೂ ಗ್ರಾಮೀಣ ಜನರನ್ನು ಆರ್ಥಿಕ ಸ್ವಾವಲಂಬಿಗಳನ್ನಾಗಿ ಮಾಡಲು ಮಂಡಳಿಯು ಅವಿರತವಾಗಿ ಶ್ರಮಿಸುತ್ತಿದೆ. ರಾಜ್ಯದಾದ್ಯಂತ 146 ಖಾದಿ ಸಂಸ್ಥೆಗಳು ನಿರಂತರವಾಗಿ ಕಾರ್ಯನಿರ್ವಹಿಸುತ್ತಿದೆ. ಸುಮಾರು 9 ಸಾವಿರ ಜನರಿಗೆ ಉದ್ಯೋಗ ಒದಗಿಸಿವೆ. ಉತ್ಸವದಲ್ಲಿ ಗುಣಮಟ್ಟದ ವಸ್ತುಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡಲಾಗುತ್ತಿದೆ’ ಎಂದರು.

ಮಂಡಳಿಯು ಅನೇಕ ಕಾರ್ಯಕ್ರಮಗಳನ್ನು ರೂಪಿಸಿ ಅನುಷ್ಠಾನಗೊಳಿಸಿದೆ. ಪ್ರಸ್ತುತ ಜಾರಿಯಾದ ಪಿಎಂಇಜಿಪಿ ಹಾಗೂ ಸಿಎಂಇಜಿಪಿ ಯೋಜನೆಯಡಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಹಾಗೂ ಮಹಿಳೆಯರಿಗೆ ವಿಶೇಷ ಪ್ರಾತಿನಿಧ್ಯ ನೀಡಲಾಗಿದೆ. ಈ ಯೋಜನೆಯಡಿ ಶೇ 25ರಿಂದ ಶೇ 35ರಷ್ಟು ಮೊತ್ತಕ್ಕೆ ಸಹಾಯಧನ ನೀಡಲಾಗುತ್ತಿದೆ. ಸಾರ್ವಜನಿಕರು ಇದರ ಲಾಭ ಪಡೆದುಕೊಳ್ಳುವಂತೆ ತಿಳಿಸಿದರು.

ವಿಧಾನ ಪರಿಷತ್ ಸದಸ್ಯ ಆರ್.ಪ್ರಸನ್ನಕುಮಾರ್, ಸೂಡಾ ಅಧ್ಯಕ್ಷ ಇಸ್ಮಾಯಿಲ್ ಖಾನ್, ಜಿಲ್ಲಾ ಪಂಚಾಯ್ತಿ ಉಪಾಧ್ಯಕ್ಷೆ ವೇದಾ ವಿಜಯಕುಮಾರ್, ಜಿಲ್ಲಾ ಕೈಗಾರಿಕಾ ಇಲಾಖೆ ಜಂಟಿ ನಿರ್ದೇಶಕ ಎಚ್.ಆರ್. ರಾಜಪ್ಪ, ಮಾದಪ್ಪ, ನಬಾರ್ಡ್‌ನ ಅಧಿಕಾರಿ ಬಿ.ರವಿ, ಜಿಲ್ಲಾ ಖಾದಿ ಮತ್ತು ಗ್ರಾಮೋದ್ಯೋಗ ಅಧಿಕಾರಿ ರಾಘವೇಂದ್ರ ಅಡಿಗ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.