ADVERTISEMENT

ಖಾಸಗೀಕರಣ ವಿರೋಧಿಸಿ ಪ್ರತಿಭಟನೆ

ವಿಐಎಸ್‌ಎಲ್‌ ಕಾರ್ಖಾನೆಯ ನೌಕರರ ಪ್ರತಿಭಟನಾ ಮೆರವಣಿಗೆ

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2017, 4:01 IST
Last Updated 18 ಏಪ್ರಿಲ್ 2017, 4:01 IST
ಖಾಸಗೀಕರಣ ವಿರೋಧಿಸಿ ಪ್ರತಿಭಟನೆ
ಖಾಸಗೀಕರಣ ವಿರೋಧಿಸಿ ಪ್ರತಿಭಟನೆ   
ಶಿವಮೊಗ್ಗ: ಭದ್ರಾವತಿಯ ವಿಐ ಎಸ್ಎಲ್‌ ಕಾರ್ಖಾನೆಯನ್ನು ಕೇಂದ್ರ ಸರ್ಕಾರ ಖಾಸಗೀಕರಣ ನೆಪದಲ್ಲಿ ಮುಚ್ಚಲು ಹುನ್ನಾರ ನಡೆಸಿದೆ ಎಂದು ಆರೋಪಿಸಿ ಸೋಮವಾರ ವಿಐ ಎಸ್‌ಎಲ್‌ ಕಾರ್ಮಿಕರು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿದರು.
 
ಕಾರ್ಖಾನೆಯನ್ನೇ ನಂಬಿಕೊಂಡು ಹಲವಾರು ಕಾರ್ಮಿಕರಿದ್ದಾರೆ. ಒಂದು ವೇಳೆ ಕಾರ್ಖಾನೆ ಖಾಸಗೀಕರಣಗೊಳಿಸಿದರೆ ಜಿಲ್ಲೆಗೆ ಅಪಾರ ಪ್ರಮಾಣದ ನಷ್ಟ ಉಂಟಾಗಲಿದೆ ಎಂದು ಆರೋಪಿಸಿದರು.
 
ಉದ್ಯೋಗ ಸೃಷ್ಟಿಯ ಸಾಮರ್ಥ್ಯ ಕುಂಠಿತಗೊಳ್ಳಲಿದೆ.  ಜನ ಜೀವನ ಅಸ್ತವ್ಯಸ್ತಗೊಳ್ಳಲಿದೆ ಹಾಗೂ ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಕಾರ್ಮಿಕರು ಹಾಗೂ ಅವರ ಕುಟುಂಬ ವರ್ಗದವರು ಬೀದಿ ಪಾಲಾಗುತ್ತಾರೆ ಎಂದು ದೂರಿದರು.
 
ಕೇಂದ್ರ ಸರ್ಕಾರ ತನ್ನ ನಿಲುವನ್ನು ಬದಲಿಸಬೇಕು ಎಂದು ಆಗ್ರಹಿಸಿದರು. ವಿಐಎಸ್‌ಎಲ್ ಕಾರ್ಮಿಕರ ಸಂಘ, ವಿಐಎಸ್‌ಪಿ ಗುತ್ತಿಗೆ ಕಾರ್ಮಿಕರ ಸಂಘ, ವಿಐಎಸ್‌ಎಲ್ ಎಂಪ್ಲಾಯೀಸ್ ಅಸೋಸಿ ಯೇಷನ್ ಸದಸ್ಯರು ಜಂಟಿಯಾಗಿ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.
 
‘ಇತಿಹಾಸ ವಿವರಿಸಲು ಸಂಸದರು ವಿಫಲ’
ಭದ್ರಾವತಿ:  ‘ಸರ್ಎಂವಿ ವಿಶ್ವೇಶ್ವರಯ್ಯ ಸ್ಥಾಪಿತ ವಿಐಎಸ್ಎಲ್ ಕಾರ್ಖಾನೆಯ ಕಾರ್ಯವೈಖರಿ ಹಾಗೂ ಅದರ  ಇತಿಹಾಸವನ್ನು ಪ್ರಧಾನಿ ಮೋದಿ ಅವರ ಗಮನಕ್ಕೆ ತರುವಲ್ಲಿ ಸಂಸದರು ವಿಫಲರಾಗಿದ್ದಾರೆ’ ಎಂದು ಹಿರಿಯ ಕಾರ್ಮಿಕರ ಮುಖಂಡ ಎಸ್.ಎನ್. ಬಾಲಕೃಷ್ಣ ದೂರಿದರು.
 
ವಿಐಎಸ್ಎಲ್ ಕಾರ್ಖಾನೆ ಆವರಣದಲ್ಲಿ ಖಾಸಗೀಕರಣ ವಿರೋ ಧಿಸಿ ಹಮ್ಮಿಕೊಂಡಿದ್ದ ಪ್ರತಿ ಭಟನಾ ಸಭೆಯಲ್ಲಿ ಅವರು ಮಾತನಾಡಿದರು. ‘ಕಾರ್ಖಾನೆ ಬಗ್ಗೆ ನಿರ್ಧಾರ ಸರ್ಕಾರಕ್ಕೆ   ಬೇಜವಾಬ್ದಾರಿ ನಡವಳಿಕೆ ತೋರಿಸುತ್ತಿರುವುದು ಖಂಡನೀಯ’ ಎಂದರು.
 
‘ರಾಜ್ಯ ಸರ್ಕಾರ  ಕಾರ್ಖಾನೆ ಖಾಸಗೀಕರಣ ಮಾಡದ ರೀತಿಯಲ್ಲಿ ಪ್ರತಿಭಟಿಸಬೇಕು. ಇದಕ್ಕಾಗಿ ಕೇಂದ್ರದ ಮೇಲೆ ಒತ್ತಡ ಹೇರಬೇಕು. ನೌಕರರ ಬೇಡಿಕೆಗೆ ಕೂಡಲೇ ಸ್ಪಂದಿಸಬೇಕು ಎಂದು ಆಗ್ರಹಿಸಿದರು.
 
‘ಜಿಲ್ಲೆಯ ಸಂಸದರಾದ ಯಡಿಯೂರಪ್ಪ ಜನರ ಪ್ರತಿನಿಧಿಯಾಗಿ ಪ್ರತಿಷ್ಠಿತ ಕಾರ್ಖಾನೆ ಉಳಿಸಲು ನೀತಿ ಆಯೋಗದ ಅಧ್ಯಕ್ಷರ ಮನವೊಲಿಸುವ ಪ್ರಯತ್ನ ಮಾಡಬೇಕು. ಇದಕ್ಕಾಗಿ ನಿಯೋಗ ಒಯ್ಯುವ ಕೆಲಸ ಮಾಡಬೇಕು’ ಎಂದು ಒತ್ತಾಯಿಸಿದರು.
 
ಪ್ರತಿಭಟನೆಯಲ್ಲಿ ಕಾರ್ಮಿಕ ಸಂಘದ ಅಧ್ಯಕ್ಷ ಜೆ.ಎನ್. ಚಂದ್ರಹಾಸ, ಪದಾಧಿಕಾರಿಗಳಾದ ಜಗದೀಶ, ರಫೀಕ್ ಪಟೇಲ್, ಶಿವಬಸಪ್ಪ ಪಾಟೀಲ್, ಮಲ್ಲಿಕಾರ್ಜುನ, ಭೈರಪ್ಪಗೌಡ ಹಾಜರಿದ್ದರು. ಪ್ರತಿಭಟನಾಕಾರರು ಕಾರ್ಖಾನೆ ಒಳಗೆ ಅಧಿಕಾರಿಗಳು ಪ್ರವೇಶಿಸದಂತೆ ನಿರ್ಬಂಧ ಹೇರಿದ್ದರು. ಹಾಗಾಗಿ ಅಧಿಕಾರಿಗಳು  ತೊಂದರೆ ಅನುಭವಿಸಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.