ADVERTISEMENT

ಗುತ್ತಿಗೆ ಪದ್ಧತಿ ರದ್ದತಿಗೆ ಒತ್ತಾಯ

ಪೌರಸೇವಾ ನೌಕರರ ಸೇವಾ ಸಂಘದ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2015, 10:33 IST
Last Updated 26 ನವೆಂಬರ್ 2015, 10:33 IST

ಶಿವಮೊಗ್ಗ: ಗುತ್ತಿಗೆ ಪದ್ಧತಿ ರದ್ದುಗೊಳಿಸಿ ಸ್ಥಳೀಯ ಸಂಸ್ಥೆಯಿಂದಲೇ ನೌಕರರಿಗೆ ವೇತನ ನೀಡಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ರಾಜ್ಯ ಪೌರಸೇವಾ ನೌಕರರ ಸೇವಾ ಸಂಘದ ವತಿಯಿಂದ ಬುಧವಾರ ನಗರದಲ್ಲಿ ಪ್ರತಿಭಟನಾ ರ‍್ಯಾಲಿ ನಡೆಸಿ, ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.

ಒಂದು ವರ್ಷದಿಂದ ಸರ್ಕಾರ ಪೌರ ಸೇವಾ ನೌಕರರಿಗೆ ಸಕಾಲದಲ್ಲಿ ವೇತನ ಬಿಡುಗಡೆ ಮಾಡುತ್ತಿಲ್ಲ. ಬೇಕಾ ಬಿಟ್ಟಿಯಾಗಿ ವೇತನ ಬಿಡುಗಡೆ ಮಾಡ ಲಾಗುತ್ತಿದೆ. ಸರ್ಕಾರದಿಂದ ಸ್ಥಳೀಯ ಸಂಸ್ಥೆಗಳಿಗೆ ಬಿಡುಗಡೆ ಮಾಡುವ ವೇತನ ನಿಧಿ ಬಿಡುಗಡೆಯಲ್ಲಿ ಆಗುತ್ತಿರುವ ವಿಳಂಬದಿಂದ ನೌಕರರು ಸಂಕಷ್ಟ ಅನುಭವಿಸುವಂತಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಈ ಹಿಂದೆ ವೇತನ ನಿಧಿಯಲ್ಲಿ ಸರ್ಕಾರದ ಎಸ್ಎಫ್‌ಸಿ ನಿಧಿಯಿಂದ ಭರಿಸಲು ಅವಕಾಶ ಕಲ್ಪಿಸಲಾಗಿತ್ತು. ಆದರೆ ಈಚಿನ ದಿನಗಳಲ್ಲಿ ಈ ಆದೇಶ ರದ್ದುಗೊಳಿಸಲಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಕೂಡಲೇ ವೇತನ ನಿಧಿಯನ್ನು ಸಕಾಲಕ್ಕೆ ಬಿಡುಗಡೆಗೊಳಿಸಬೇಕು. ಈ ಹಿಂದಿನಂತೆ ರಾಜ್ಯ ಹಣಕಾಸು ನಿಧಿಯಿಂದ ವೇತನ ಭರಿಸುವ ಅವಕಾಶ ಕಲ್ಪಿಸಬೇಕು. ಶಿವಮೊಗ್ಗ ಪಾಲಿಕೆಗೆ ಅನ್ಯ ಇಲಾಖೆಯ ನೌಕರರ ಎರವಲು ಸೇವೆಯನ್ನು ತಕ್ಷಣದಿಂದ ರದ್ದುಗೊಳಿಸಬೇಕು ಎಂದು ಆಗ್ರಹಿಸಿದರು.

ಶಿವಮೊಗ್ಗ ನಗರಸಭೆ ಪಾಲಿಕೆಯಾಗಿ ಮೇಲ್ದರ್ಜೆಗೇರಿ 2 ವರ್ಷಗಳಾಗಿದೆ. ನಿಯಮದ ಪ್ರಕಾರ ಜ್ಯೇಷ್ಠತೆ ಆಧಾರದ ಮೇಲೆ ಡಿ’ದರ್ಜೆ ನೌಕರರಿಗೆ ಮುಂಬಡ್ತಿ ನೀಡಬೇಕು. ಖಾಲಿ ಹುದ್ದೆಗಳನ್ನು ಭರ್ತಿ ಮಾಡಬೇಕು. ದಿನಗೂಲಿ ನೌಕರರ ಕ್ಷೇಮಾಭಿವೃದ್ಧಿ ಅಡಿಯಲ್ಲಿ ಪರಿಗಣಿಸುವ ನೌಕರರನ್ನು ಸರ್ಕಾರದ ಆದೇಶದಂತೆ ಕಾಯಂಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ.

ಸ್ಥಳೀಯ ಸಂಸ್ಥೆ ನೌಕರರಿಗೂ ಕೆಜಿಐಡಿ ಸೌಲಭ್ಯ ಮತ್ತು ಸಾಮಾನ್ಯ ಭವಿಷ್ಯನಿಧಿ ವಿಸ್ತರಿಸಬೇಕು. ಪ್ರಾವಿಡೆಂಡ್ ಫಂಡ್‌ ವಂತಿಗೆ ಹೆಚ್ಚಿಸಿ ಸೌಲಭ್ಯ ವಿಸ್ತರಿಸಬೇಕು ಎಂದು ಒತ್ತಾಯಿಸಿ, ಜಿಲ್ಲಾಡಳಿತ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು.

ಸಂಘದ ಅಧ್ಯಕ್ಷ ಎನ್.ಗೋವಿಂದ, ಜಿ.ಸಿದ್ದಪ್ಪ, ಎಸ್.ಜಿ. ಮಂಜುನಾಥ್, ಮಾದಪ್ಪ, ಕೃಷ್ಣಪ್ಪ, ಪರಮೇಶ್, ಕೆ,ಆರ್. ಮಂಜುನಾಥ್, ವೇಣುಗೊಪಾಲ್ ಇತರರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.