ADVERTISEMENT

ಗ್ರಾಮದ ಅಭಿವೃದ್ಧಿಗೆ ಶ್ರಮಿಸಿ: ಮಂಜುನಾಥ ಭಂಡಾರಿ

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2015, 8:47 IST
Last Updated 3 ಆಗಸ್ಟ್ 2015, 8:47 IST

ಶಿವಮೊಗ್ಗ: ಗ್ರಾಮ ವಿಕಾಸದ ದೃಷ್ಟಿಯಿಂದ ಗ್ರಾ.ಪಂ ಸದಸ್ಯರು ಗ್ರಾಮದ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಎಐಸಿಸಿ ಸದಸ್ಯ ಮಂಜುನಾಥ ಭಂಡಾರಿ ಹೇಳಿದರು.

ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಭಾನುವಾರ ಗ್ರಾಮ ಪಂಚಾಯ್ತಿ ಚುನಾವಣೆಯಲ್ಲಿ ಗೆಲುವು ಗಳಿಸಿದ ಪಕ್ಷ ಬೆಂಬಲಿತ ಸದಸ್ಯರಿಗೆ ಆಯೋಜಿಸಲಾಗಿದ್ದ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಅಧಿಕಾರ ವಿಕೇಂದ್ರೀಕರಣ ವ್ಯವಸ್ಥೆಯಲ್ಲಿ ಗ್ರಾಮ ಪಂಚಾಯ್ತಿಗಳು ಭದ್ರಬುನಾದಿಯಿದ್ದಂತೆ. ಗ್ರಾಮ ವಿಕಾಸದಿಂದ ದೇಶದ ಅಭಿವೃದ್ಧಿ ಸಾಧ್ಯವಾಗಿದ್ದು, ಗ್ರಾ.ಪಂ. ಸದಸ್ಯರು ಸರ್ಕಾರ ಬಿಡುಗಡೆ ಮಾಡುವ ಅನುದಾನವನ್ನು ಗ್ರಾಮದ ಏಳಿಗೆಗೆ ವಿನಿಯೋಗ ಮಾಡಬೇಕು ಎಂದರು.

ಗ್ರಾ.ಪಂ ಸದಸ್ಯರು ಪಕ್ಷಕ್ಕೆ ನಿಷ್ಠಾವಂತರಾಗಿ ದುಡಿಯಬೇಕು. ಜಿ.ಪಂ, ತಾ.ಪಂ, ವಿಧಾನಸಭಾ, ಲೋಕಸಭಾ ಕ್ಷೇತ್ರಗಳಲ್ಲಿ ಪಕ್ಷ ಜಯಗಳಿಸುವುದಾದರೆ, ಅದಕ್ಕೆ 
ಗ್ರಾ.ಪಂ ಸದಸ್ಯರೇ ಕಾರಣ.  ಒಂದು ವೇಳೆ ಪಕ್ಷ ಸೋತರೂ  ಅದಕ್ಕೂ ಗ್ರಾಮಮಟ್ಟದ ಕಾರ್ಯಕರ್ತರೇ ಜವಾಬ್ದಾರರು. ಈ ಹಿನ್ನೆಲೆಯಲ್ಲಿ ಗ್ರಾ.ಪಂ ಸದಸ್ಯರು ಪಕ್ಷ ಸಂಘಟನೆಯತ್ತ ಗಮನಹರಿಸಬೇಕು ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರವು ಬಡವರಿಗೆ, ದೀನದಲಿತರಿಗೆ, ಅಲ್ಪಸಂಖ್ಯಾತರಿಗೆ ಹತ್ತು ಹಲವು ಜನಪರ ಯೋಜನೆಗಳನ್ನು ಕಾರ್ಯಗತಗೊಳಿಸಿದೆ. ಸರ್ಕಾರ ಜಾರಿಗೊಳಿಸಿರುವ ಜನಪರ ಯೋಜನೆಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು ಎಂದರು
ರೈತರ ಆತ್ಮಹತ್ಯೆ ಪ್ರಕರಣ ಹೆಚ್ಚಾಗುತ್ತಿರುವುದು ನಿಜಕ್ಕೂ ವಿಷಾದಕರ ಸಂಗತಿಯಾಗಿದೆ. ಗ್ರಾಮೀಣ ಭಾಗದ ಪಕ್ಷದ ಕಾರ್ಯಕರ್ತರು ರೈತರಲ್ಲಿ ಆತ್ಮವಿಶ್ವಾಸ ತುಂಬುವ ಕೆಲಸ ಮಾಡಬೇಕು ಎಂದರು.

ಪಕ್ಷದ ಜಿಲ್ಲಾಧ್ಯಕ್ಷ ಆರ್.ಪ್ರಸನ್ನಕುಮಾರ್ ಮಾತನಾಡಿ, ಕಳೆದ ಗ್ರಾ.ಪಂ. ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷ ಬೆಂಬಲಿತ ಅಭ್ಯರ್ಥಿಗಳು ಅತ್ಯಧಿಕ ಸಂಖ್ಯೆಯಲ್ಲಿ ಆಯ್ಕೆಯಾಗಿದ್ದಾರೆ.

ಇದಕ್ಕೆ ರಾಜ್ಯ ಸರ್ಕಾರದ ಜನಪರ ಆಡಳಿತವೇ ಮುಖ್ಯ ಕಾರಣವಾಗಿದೆ ಎಂದರು. ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಕಲಗೋಡು ರತ್ನಾಕರ ಮಾತನಾಡಿ, ಗ್ರಾ.ಪಂ ಸದಸ್ಯರಿಗೆ ಜಿ.ಪಂ ವತಿಯಿಂದ ಶೀಘ್ರದಲ್ಲಿಯೇ ಕಾರ್ಯಾಗಾರ ಹಮ್ಮಿಕೊಳ್ಳಲಾಗುವುದು ಎಂದರು. ಉಪಾಧ್ಯಕ್ಷೆ ಗಾಯಿತ್ರಿ ಷಣ್ಮುಖಪ್ಪ, ಮಾಜಿ ಶಾಸಕ ಕರಿಯಣ್ಣ, ಎಸ್.ಪಿ. ದಿನೇಶ್, ಎಸ್.ಟಿ. ಹಾಲಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.