ADVERTISEMENT

ಗ್ರಾಹಕಸ್ನೇಹಿ ಉತ್ಪನ್ನಗಳತ್ತ ಉದ್ಯಮಿಗಳ ಚಿತ್ತ

ಉದ್ಯಮಶೀಲತಾ ಶಿಬಿರ ‘ಹ್ಯಾಕಥಾನ್’ ಕಾರ್ಯಕ್ರಮದಲ್ಲಿ ಡಾ. ಲಕ್ಷ್ಮಿ ಜಗನ್ನಾಥನ್ ಅಭಿಮತ

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2017, 6:12 IST
Last Updated 15 ಫೆಬ್ರುವರಿ 2017, 6:12 IST
ಶಿವಮೊಗ್ಗದ ಜೆಎನ್‌ಎನ್‌ ಎಂಜಿನಿಯರಿಂಗ್‌ ಕಾಲೇಜಿನ ಎಂಬಿಎ ಸಭಾಂಗಣದಲ್ಲಿ ಮಂಗಳವಾರ ಬೆಂಗಳೂರಿನ ದಯಾನಂದ ಸಾಗರ ಸಂಸ್ಥೆಯ ಉದ್ಯಮಶೀಲತಾ ವಿಭಾಗದ ಮುಖ್ಯಸ್ಥೆ ಡಾ.ಲಕ್ಷ್ಮಿ ಜಗನ್ನಾಥನ್ ‘ಉದ್ಯಮಶೀಲತಾ ಶಿಬಿರ ಹ್ಯಾಕಥಾನ್- – 2017’ ಕಾರ್ಯಕ್ರಮ ಉದ್ಘಾಟಿಸಿದರು.
ಶಿವಮೊಗ್ಗದ ಜೆಎನ್‌ಎನ್‌ ಎಂಜಿನಿಯರಿಂಗ್‌ ಕಾಲೇಜಿನ ಎಂಬಿಎ ಸಭಾಂಗಣದಲ್ಲಿ ಮಂಗಳವಾರ ಬೆಂಗಳೂರಿನ ದಯಾನಂದ ಸಾಗರ ಸಂಸ್ಥೆಯ ಉದ್ಯಮಶೀಲತಾ ವಿಭಾಗದ ಮುಖ್ಯಸ್ಥೆ ಡಾ.ಲಕ್ಷ್ಮಿ ಜಗನ್ನಾಥನ್ ‘ಉದ್ಯಮಶೀಲತಾ ಶಿಬಿರ ಹ್ಯಾಕಥಾನ್- – 2017’ ಕಾರ್ಯಕ್ರಮ ಉದ್ಘಾಟಿಸಿದರು.   
ಶಿವಮೊಗ್ಗ: ‘ಯಾವುದೇ ಉತ್ಪನ್ನಗಳು ಗ್ರಾಹಕಸ್ನೇಹಿಯಾಗಿ ಇರುವಂತೆ ಮುನ್ನೆಚ್ಚರಿಕೆ ವಹಿಸಬೇಕು’ ಎಂದು ಬೆಂಗಳೂರಿನ ದಯಾನಂದ ಸಾಗರ ಸಂಸ್ಥೆಯ ಉದ್ಯಮಶೀಲತಾ ವಿಭಾಗದ ಮುಖ್ಯಸ್ಥೆ ಡಾ. ಲಕ್ಷ್ಮಿ ಜಗನ್ನಾಥನ್ ಸಲಹೆ ನೀಡಿದರು.
 
 ನಗರದ ಜವಾಹರಲಾಲ್‌ ನೆಹರೂ ರಾಷ್ಟ್ರೀಯ ಎಂಜಿನಿಯರಿಂಗ್‌ ಕಾಲೇಜು ಸಭಾಂಗಣದಲ್ಲಿ ಮಂಗಳವಾರ ಹಮ್ಮಿ ಕೊಂಡಿದ್ದ ಉದ್ಯಮಶೀಲತಾ ಶಿಬಿರ ‘ಹ್ಯಾಕಥಾನ್- – 2017’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
 
‘ಗ್ರಾಹಕರು ಸದಾ ಉತ್ತಮ ಗುಣಮಟ್ಟದ ಉತ್ಪನ್ನಗಳನ್ನೇ ನಿರೀಕ್ಷಿಸುತ್ತಾರೆ. ಒಮ್ಮೆ ಗ್ರಾಹಕರಿಗೆ ಉತ್ಪನ್ನಗಳು ಪ್ರಿಯವಾದರೆ ಮುಗಿಯಿತು, ತೊಡಗಿ ಸಿದ ಬಂಡವಾಳಕ್ಕೆ ಮೋಸ ಆಗುವುದಿಲ್ಲ. ಉದ್ಯಮವೂ ಯಶಸ್ವಿಯಾಗುತ್ತದೆ’ ಎಂದರು. 
 
‘ನೂತನ ಉದ್ಯಮಿಗಳು ಬಂಡವಾಳ ತೊಡಗಿಸುವ ಮುನ್ನ ಗ್ರಾಹಕರ ಮನಸ್ಥಿತಿ ಅರಿಯುವ ಪ್ರಯತ್ನ ನಡೆಸಬೇಕು.  ಗ್ರಾಹಕರ ನಿರೀಕ್ಷೆಯನ್ನು ಸಮರ್ಪಕವಾಗಿ ಅರಿತುಕೊಳ್ಳುವುದು ಹೊಸದಾಗಿ ಬಂಡವಾಳ ಹೂಡುವವರ ಮೊದಲ ಆದ್ಯತೆಯಾಗಬೇಕು’ ಎಂದು ಸಲಹೆ ನೀಡಿದರು.
 
‘ಎಲ್ಲೆಡೆ ಜಾಗತೀಕರಣದ ಪ್ರಭಾವ ಗಾಢವಾಗಿದೆ. ಹಾಗಾಗಿ, ಉದ್ಯಮ ಕ್ಷೇತ್ರದ ಪರಿಣತಿ ಪಡೆಯಲು ಕೌಶಲ ಆಧಾರಿತ ತರಬೇತಿ ಪಡೆಯುವುದು ಆವಶ್ಯಕ. ಉದ್ಯಮದಾರ ಮಾರುಕಟ್ಟೆಯ ಎಲ್ಲಾ ವಿಭಾಗಗಳಲ್ಲೂ ಕುಶಲಮತಿ ಯಾಗಿರಬೇಕು. ಉತ್ತಮ ಜ್ಞಾನ, ಕೌಶಲವಿದ್ದರೆ ನಿರಾಯಾಸವಾಗಿ ಯಶಸ್ಸು ಪಡೆಯಬಹುದು’ ಎಂದು ಪ್ರತಿಪಾದಿಸಿದರು.
 
‘ಹೊಸ ಉದ್ಯಮದಲ್ಲೇ ಬಂಡವಾಳ ತೊಡಗಿಸುವ ಮೊದಲು ಸಾಕಷ್ಟು ಎಚ್ಚರ ವಹಿಸಬೇಕು. ಮಾರುಕಟ್ಟೆಯ ಒಳಹೊರಗು ಅರಿಯುವುದರ ಜತೆಗೆ  ಸಂಪನ್ಮೂಲ ಕ್ರೋಡೀಕರಣ, ತಂಡದ ಒಗ್ಗಟ್ಟು, ಪರಿಶ್ರಮ, ಗ್ರಾಹಕರ ಜತೆಗಿನ ನಿಕಟ ಸಂಪರ್ಕ ಎಲ್ಲವನ್ನೂ ಕರಗತ ಮಾಡಿಕೊಳ್ಳಬೇಕು’ ಎಂದು ಸಲಹೆ ನೀಡಿದರು. 
 
‘ಒಂದು ಉದ್ಯಮ ಸಂಸ್ಥೆ ತಯಾರಿಸಿದ ಉತ್ಪನ್ನಗಳು ಗ್ರಾಹಕರಿಗೆ ಮೆಚ್ಚುಗೆಯಾಗುವಂತೆ ನೋಡಿ ಕೊಳ್ಳುವುದೇ ಬಂಡವಾಳದ ಮೂಲ ತಂತ್ರಗಾರಿಕೆ. ಮೆಚ್ಚುಗೆಪಡಿಸುವುದು ವ್ಯಾಪಾರ ತಾಂತ್ರಿಕತೆಯ ಭಾಗವೂ ಹೌದು. ಹಾಗಾದಾಗ ಮಾತ್ರ ಗ್ರಾಹಕರೇ ಉತ್ಪನ್ನವನ್ನು ಗೆಲ್ಲಿಸುತ್ತಾರೆ’ ಎಂದು ಮಾಹಿತಿ ನೀಡಿದರು.
 
‘ಉದ್ಯಮ ಕ್ಷೇತ್ರದ ಬಗ್ಗೆ ಹಲವು ವಿಚಾರಗಳನ್ನು ಅರಿಯಲು ಕೇವಲ ತರಬೇತಿ ಸಾಲದು. ಕ್ರಿಯಾಶೀಲ ಮನಸ್ಸು ಹಾಗೂ ಸ್ವಂತಿಕೆ ಗುಣಗಳನ್ನು ಅಳವಡಿಸಿಕೊಳ್ಳುವುದು ಬಹುಮುಖ್ಯ. ವಿವಿಧ ಸಂಘ, ಸಂಸ್ಥೆಗಳು ನಡೆಸುವಂತಹ ಉದ್ಯಮಶೀಲತಾ ಶಿಬಿರದಲ್ಲಿ ಬಂಡವಾಳ ಕುರಿತ ಸಂಪೂರ್ಣ ವಿವರ ಪಡೆಯಬೇಕು. ಸಂಪೂರ್ಣ ಮನವರಿಕೆ ಮಾಡಿಕೊಳ್ಳಬೇಕು’ ಎಂದು ಸಲಹೆ ನೀಡಿದರು. 
 
ರಾಷ್ಟ್ರೀಯ ಶಿಕ್ಷಣ ಸಮಿತಿ ಕಾರ್ಯದರ್ಶಿ ಎಚ್.ಎಂ. ಮಲ್ಲಪ್ಪ, ಕಾಲೇಜಿನ ಪ್ರಾಂಶುಪಾಲ ಎಚ್.ಆರ್. ಮಹದೇವ ಸ್ವಾಮಿ, ಡಾ.ಮಂಜುನಾಥ್, ಮಲ್ಲೇಶ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.
 
* ಯಾವುದೇ ವ್ಯವಹಾರ ಪ್ರಾರಂಭಿಸುವ ಮುನ್ನ ವ್ಯವಸ್ಥಿತ ಯೋಜನೆ ಸಿದ್ಧಪಡಿಸುವುದು ಮುಖ್ಯ.
–ಡಾ. ಲಕ್ಷ್ಮೀ ಜಗನ್ನಾಥನ್, ದಯಾನಂದ ಸಾಗರ ಸಂಸ್ಥೆ
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.