ADVERTISEMENT

ಚುನಾವಣೆ ಬಹಿಷ್ಕರಿಸಲು ಗ್ರಾಮಸ್ಥರ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2018, 5:52 IST
Last Updated 24 ಫೆಬ್ರುವರಿ 2018, 5:52 IST

ಆನವಟ್ಟಿ: ತಿಳವಳ್ಳಿ–ಆನವಟ್ಟಿ ಮುಖ್ಯ ರಸ್ತೆಯಿಂದ ಕೋಡಿಹಳ್ಳಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಮೂರು ಕಿ.ಮೀ ಅಂತರದ ರಸ್ತೆಗೆ ಡಾಂಬರು ಹಾಕಿ ಅಭಿವೃದ್ಧಿಗೊಳಿಸದೇ ಇದ್ದರೆ ಮುಂಬರುವ ವಿಧಾನಸಭಾ ಚುನಾವಣೆಯನ್ನು ಬಹಿಷ್ಕರಿಸಲಾಗುವುದು ಎಂದು ಗ್ರಾಮಸ್ಥರು ಎಚ್ಚರಿಕೆ ನೀಡಿದರು. ಶುಕ್ರವಾರ ವಾಹನ ಸಂಚಾರವನ್ನು ತಡೆದು ಪ್ರತಿಭಟಿಸಿದ ಗ್ರಾಮಸ್ಥರು, ರಸ್ತೆಯ ದುರವಸ್ಥೆಯ ಬಗ್ಗೆ ಅಳಲು ತೋಡಿಕೊಂಡರು.

ತಾಲ್ಲೂಕಿನಿಂದ ಚುನಾಯಿತರಾದ ಎಲ್ಲಾ ಶಾಸಕರು ಕೋಡಿಹಳ್ಳಿ ಗ್ರಾಮವನ್ನು ನಿರ್ಲಕ್ಷ್ಯ ಮಾಡುತ್ತಲೇ ಬಂದಿದ್ದಾರೆ. 10 ವರ್ಷಗಳ ಹಿಂದೆ 1.5 ಕಿ.ಮೀ ರಸ್ತೆ ಡಾಂಬರೀಕರಣ ಮಾಡಲಾಗಿತ್ತು. ಈಗ ಡಾಂಬರು ಸಂಪೂರ್ಣ ಕಿತ್ತುಹೋಗಿದೆ. ಈ ಗ್ರಾಮದಿಂದ ಶಾಲೆಗೆ ಹೋಗುವ ಮಕ್ಕಳು ಹಾಗೂ ನಿತ್ಯ ವಿವಿಧ ಕೆಲಸಕ್ಕಾಗಿ ಆನವಟ್ಟಿಗೆ ಹೋಗುವ ಜನ ಸಾಹಸ ಪಡಬೇಕಾಗಿದೆ. ರಸ್ತೆ ಸಂಪೂರ್ಣ ಹಾಳಾಗಿದ್ದರಿಂದ ಯಾವುದೇ ಆಟೊದವರು ಇಲ್ಲಿ ಬರಲು ಹಿಂದೇಟು ಹಾಕುತ್ತಾರೆ’ ಎಂದು ದೂರಿದರು. ಜನಪ್ರತಿನಿಧಿಗಳು ಕೂಡಲೇ ರಸ್ತೆ ನಿರ್ಮಾಣ ಮಾಡಿಸಿಕೊಡಬೇಕು ಎಂದು ರೈತ ಮುಖಂಡ ಪರಶುರಾಮಪ್ಪ ಮನವಿ ಮಾಡಿದರು.

‘ಗ್ರಾಮದಲ್ಲಿ ಸಿಮೆಂಟ್ ಚರಂಡಿ ನಿರ್ಮಾಣ ಮಾಡದೆ ಬಿಲ್ ಪಡೆದಿದ್ದಾರೆ. ಹುರುಳಿ ಗ್ರಾಮ ಪಂಚಾಯ್ತಿ ಆಡಳಿತವು ಸಂಪೂರ್ಣವಾಗಿ ಕೋಡಿಹಳ್ಳಿಯನ್ನು ಕಡೆಗಣಿಸಿದ್ದಾರೆ. ಗ್ರಾಮದ ಮಕ್ಕಳಿಗೆ ಓದಲು ಶಾಲೆಯಿದ್ದು, ಒಂದೇ ಕೊಠಡಿ ಇದೆ. ಕಳೆದ ವರ್ಷ ಹೆಚ್ಚುವರಿ ಕೊಠಡಿ ನೀಡುವಂತೆ ಪ್ರತಿಭಟನೆ ಕೈಗೊಂಡಿದ್ದರಿಂದ ಮೂರು ಕೊಠಡಿಗಳು ಮಂಜೂರಾಗಿವೆ. ಆದರೆ, ಇನ್ನೂ ಕಟ್ಟಡ ಕೆಲಸ ಪ್ರಾರಂಭಿಸಲು ಅಡಳಿತ್ಮಾಕ ಮಂಜೂರಾತಿ ಸಿಕ್ಕಿಲ್ಲ. ಕೂಡಲೇ ಕಟ್ಟಡ ನಿರ್ಮಿಸಲು ಸಂಬಂಧಿಸಿದ ಇಲಾಖೆ ಮುಂದಾಗಬೇಕು’ ಎಂದು ಬಾಬು ಸಾಬ್ ಒತ್ತಾಯಿಸಿದರು.

ADVERTISEMENT

ಈ ಹಿಂದೆ ನಡೆದ ಚುನಾವಣೆ ವೇಳೆ ಮತ ಪಡೆಯುವುದಕ್ಕಾಗಿ ಕೇಲವು ರಾಜಕೀಯ ಮುಖಂಡರು ರಸ್ತೆ ಅಳತೆ ಮಾಡಿ, ಗ್ರಾಮಸ್ಥರಿಗೆ ವಂಚಿಸಿ ಮತ ಪಡೆದು ಬಳಿಕ ಯಾವುದೇ ರಸ್ತೆಯನ್ನು ನಿರ್ಮಿಸಿಲ್ಲ ಎಂದು ಟಿ. ಮಂಜಪ್ಪ ಬೇಸರ ವ್ಯಕ್ತಪಡಿಸಿದರು.

ರಸ್ತೆ ನಿರ್ಮಾಣ ಮಾಡದೆ ಇದ್ದರೆ ಬರುವ ಚುಣಾವಣೆಗೆ ಯಾವುದೆ ಪಕ್ಷದ ಅಭ್ಯರ್ಥಿಯನ್ನು ಗ್ರಾಮದೊಳಕ್ಕೆ ಬಿಡುವುದಿಲ್ಲ ಎಂದು ಗ್ರಾಮಸ್ಥರು
ಎಚ್ಚರಿಕೆ ನೀಡಿದರು.

ಪ್ರತಿಭಟನೆಯಲ್ಲಿ ಪಕ್ಕಿರಪ್ಪ, ದೆವೇಂದ್ರಪ್ಪ, ಮುನ್ನಾಫ್ ಖಾನ್, ಆಸಿಫ್ ಖಾನ್, ಮಲಾಮ್ಮ, ರೇಣುಕಮ್ಮ, ರೀಯಾನಾ, ಮುಕ್ತಿಯಾರ್ ಅಹ್ಮದ್, ಹನುಮಂತಪ್ಪ ಅವರೂ ಉಪಸ್ಥಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.