ADVERTISEMENT

ಜಾನುವಾರು ತುತ್ತಿನ ಚೀಲಕ್ಕೂ ಕನ್ನ

ಶುಂಠಿ ಬೆಳೆಯುವ ಧಾವಂತ, ದನ–ಕರು ಮೇಯುವ ಒಣಹುಲ್ಲು ಗದ್ದೆ ಪಾಲು

​ಪ್ರಜಾವಾಣಿ ವಾರ್ತೆ
Published 29 ಮೇ 2017, 4:37 IST
Last Updated 29 ಮೇ 2017, 4:37 IST
ರಿಪ್ಪನ್‌ಪೇಟೆ:  80ರ ದಶಕದಲ್ಲಿ ಮಲೆನಾಡಿಗೆ ವಲಸೆ ಬಂದ ಕೇರಳಿಗರು ಶುಂಠಿ ಬೆಳೆಯನ್ನೂ ತಂದರು. ಅದರ ಪರಿಣಾಮ ಈಗ ಕಾಣುತ್ತಿದೆ.
ಖಾತೆದಾರರು, ಬಗರ್‌ಹುಕುಂ ಸಾಗುವಳಿದಾರರಿಂದ ಹಿಡಿದು ಸರ್ಕಾರಿ ನೌಕರಿಯಲ್ಲಿ ‘ನಾಲ್ಕು ಅಂಕಿ’ ಸಂಬಳ ಪಡೆಯುವವರೂ ಶುಂಠಿ ಬೆಳೆಯ ಬೆನ್ನು ಬಿದ್ದಿದ್ದಾರೆ. 
 
ಶುಂಠಿಬೆಳೆಗಾರರ ಧನ ದಾಹ ಜಾನುವಾರು ತುತ್ತಿನ ಚೀಲಕ್ಕೂ ಕನ್ನವಿಕ್ಕುತ್ತಿದೆ. ಬಗರ್‌ಹುಕುಂ ಸಾಗುವಳಿದಾರರ ಕಪಿಹಿಡಿತದಲ್ಲಿರುವ ಮಲೆನಾಡು ಇಂದು ಬಯಲಾಗಿದೆ. ಹಿಂದೆಲ್ಲಾ ಶುಂಠಿ ಬೆಳೆಗೆ ಮುಚ್ಚಲು ಬಳಕೆಯಾಗುತ್ತಿದ್ದ ಕಾಡಿನ ದರಗು ಇಂದು ಇಲ್ಲವಾಗಿದೆ. ಹೀಗಾಗಿ ಜಾನುವಾರು ಮೇವಾದ ಭತ್ತದ ಒಣ ಹುಲ್ಲನ್ನು ಶುಂಠಿಬೆಳೆಯಲು ಎಗ್ಗಿಲ್ಲದೆ ಬಳಸಲಾಗುತ್ತಿದೆ.
 
ಜಾನುವಾರು ಹೊಟ್ಟೆ ತುಂಬಿಸಬೇಕಿದ್ದ ಒಣ ಹುಲ್ಲು ಮಲೆನಾಡಿನಲ್ಲಿ ಮಣ್ಣಿಗೆ ಸೇರುತ್ತಿದೆ.ಜಾನುವಾರು ಆಹಾರಕ್ಕೆ ಸರ್ಕಾರದ ನಿರ್ದಿಷ್ಟ ಯೋಜನೆ ಜಾರಿಗೊಂಡಿಲ್ಲ. ಗೋಮಾಳಗಳೂ ಸಾಗುವಳಿ ಭೂಮಿಯಾಗಿ ಪರಿವರ್ತನೆಗೊಂಡಿವೆ.
 
ಮನೆಯಲ್ಲಿನ ದನದ ಮೇವಿನಬ್ಯಾಣ ಶುಂಠಿ ಕಣಜಗಳಾಗುತ್ತಿವೆ. ಆದರೆ, ಕಸ ತಿಂದು ಹಾಲು ಕರೆವ ಹಸುಗಳು ಸೊರಗುತ್ತಿವೆ.  ಎಳೆಯ ಕರುಗಳು ಕಸಾಯಿ ಖಾನೆ ಪಾಲಾಗುತ್ತಿವೆ. 
 
‘ಐಷಾರಾಮಿ ಹೋಟೆಲ್‌ಗಳಲ್ಲಿ ಕಲ್ಯಾಣ ಮಂದಿರಗಳಲ್ಲಿ ಆಹಾರ ಅಪವ್ಯಯದ ಮೇಲೆ ಕಡಿವಾಣ ಹಾಕಲು ಚಿಂತಿಸುತ್ತಿರುವ ಸರ್ಕಾರ ಜಾನುವಾರು ಮೇವನ್ನು ಅಪವ್ಯಯ ಮಾಡುವವರ ವಿರುದ್ಧವೂ ಕಠಿಣ ಕ್ರಮ ಕೈಗೊಳ್ಳಬೇಕು’  ಎಂದು ಒತ್ತಾಯಿಸುತ್ತಾರೆ ರಿಪ್ಪನ್‌ಪೇಟೆ ಗ್ರಾಮಸ್ಥರು.
–ಟಿ.ರಾಮಚಂದ್ರ ರಾವ್‌ 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.