ADVERTISEMENT

ಜಿಲ್ಲೆಯಾದ್ಯಂತ ಡೆಂಗಿ ಜಾಗೃತಿ: ರಾಜೇಶ್

​ಪ್ರಜಾವಾಣಿ ವಾರ್ತೆ
Published 24 ಮೇ 2017, 5:14 IST
Last Updated 24 ಮೇ 2017, 5:14 IST

ಶಿವಮೊಗ್ಗ: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು 2022ರೊಳಗೆ ಡೆಂಗಿ, ಮಲೇರಿಯಾ, ಚಿಕುನ್‌ ಗುನ್ಯ ಸೇರಿದಂತೆ ಸಾಂಕ್ರಾಮಿಕ ರೋಗಗಳ ನಿರ್ಮೂಲನೆಗೆ ವಿವಿಧ ಜಾಗೃತಿ ಕಾರ್ಯಕ್ರಮಗಳನ್ನು ರೂಪಿಸಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಜೇಶ್ ಸುರಗೀಹಳ್ಳಿ ಮಾಹಿತಿ ನೀಡಿದರು.

ರಾಷ್ಟ್ರೀಯ ಡೆಂಗಿ ದಿನಾಚರಣೆ ಅಂಗವಾಗಿ ಜಿಲ್ಲಾ ಆರೋಗ್ಯಾಧಿಕಾರಿ ಕಚೇರಿ ಆವರಣದಲ್ಲಿ ಮಂಗಳವಾರ ‘ಇಂಡಿಯಾ ಡೆಂಗಿ ವಿರುದ್ಧ ಹೋರಾಡುತ್ತಿದೆ’ ಎಂಬ ಘೋಷಣೆಯಡಿ ಏರ್ಪಡಿಸಿದ್ದ ಜನಜಾಗೃತಿ ಜಾಥಾ ಕಾರ್ಯಕ್ರಮದಲ್ಲಿ   ಮಾತನಾಡಿದರು. ‘ಡೆಂಗಿ ರೋಗ ತಡೆಗಟ್ಟುವ ಸಲುವಾಗಿ   ಜಿಲ್ಲೆಯಾದ್ಯಂತ  ಜನ ಜಾಗೃತಿ ಹಮ್ಮಿಕೊಳ್ಳಲಾಗಿದೆ’ ಎಂದರು.

ಜಾಥಾಕ್ಕೆ ಚಾಲನೆ ನೀಡಿದ ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಜ್ಯೋತಿ ಎಸ್.ಕುಮಾರ್ ಮಾತನಾಡಿ, ಡೆಂಗಿ, ಚಿಕುನ್‌ಗುನ್ಯ, ಮೆದುಳು ಜ್ವರ ಮತ್ತು ಆನೆಕಾಲಿನಂತಹ ಸಾಂಕ್ರಾಮಿಕ ರೋಗಗಳು  ಸೊಳ್ಳೆ ಕಡಿತದಿಂದ  ಉಂಟಾಗುತ್ತವೆ. ಈ ಬಗ್ಗೆ ಜನರು ಮುನ್ನೆಚ್ಚರಿಕೆ ಕ್ರಮ ಅನುಸರಿಸುವುದು ಸೂಕ್ತ ಎಂದರು.

ADVERTISEMENT

ಮನೆಯ ಸುತ್ತಮುತ್ತ ನೀರು ನಿಲ್ಲದಂತೆ ನೋಡಿಕೊಳ್ಳಬೇಕು,  ಒಡೆದ ಮಡಿಕೆ, ಬಕೆಟ್, ಪ್ಲಾಸ್ಟಿಕ್ ವಸ್ತುಗಳು ಹಾಗೂ ತೆಂಗಿನ ಚಿಪ್ಪು, ರುಬ್ಬುವ ಕಲ್ಲುಗಳು, ಟೈರ್‌ಗಳಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ನಿಯಮಿತ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು  ಎಂದು ಕಿವಿಮಾತು ಹೇಳಿದರು.

ಡಾ.ಕಾಂತರಾಜು, ಡಾ.ಬಿ.ಎಸ್. ಶಂಕರಪ್ಪ ಹಾಗೂ ಮೈತ್ರಿ ಮತ್ತು ಎಎನ್‌ಎಂಟಿಸಿ ಕಾಲೇಜಿನ ನರ್ಸಿಂಗ್ ವಿದ್ಯಾರ್ಥಿಗಳು ಇದ್ದರು. ಜಾಥಾವು ಪ್ರಮುಖ ಬೀದಿಗಳಲ್ಲಿ ಸಂಚರಿಸಿ, ಅಂತಿಮವಾಗಿ ಭಾರತೀಯ ವೈದ್ಯಕೀಯ ಅಸೋಸಿಯೇಷನ್ ಶಿವಮೊಗ್ಗ ಶಾಖೆಯ ಬಳಿ ಮುಕ್ತಾಯಗೊಂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.