ADVERTISEMENT

ತಾಲ್ಲೂಕಿನಲ್ಲಿ 10,300 ಎಕರೆ ಡೀಮ್ಡ್ ಅರಣ್ಯ

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2017, 6:18 IST
Last Updated 17 ನವೆಂಬರ್ 2017, 6:18 IST

ಹೊಸನಗರ: ಸುಪ್ರಿಂ ಕೋರ್ಟ್ ನಿರ್ದೇಶನದ ಮೇರೆಗೆ ತಾಲ್ಲೂಕಿನಲ್ಲಿ ಸುಮಾರು 10,300 ಎಕೆರೆ ಪ್ರದೇಶವನ್ನು ಡೀಮ್ಡ್ (ಪರಿಭಾವಿತ) ಅರಣ್ಯ ಎಂದು ಗುರುತಿಸಲಾಗಿದೆ ಎಂದು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕೇಶವಮೂರ್ತಿ ತಿಳಿಸಿದರು.

ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ವಾಸಪ್ಪ ಗೌಡ ಅಧ್ಯಕ್ಷತೆಯಲ್ಲಿ ತಾಲ್ಲೂಕಿನ ಅರಣ್ಯ ಹಕ್ಕು ಸಮಿತಿ ಅಧ್ಯಕ್ಷರ, ಗ್ರಾಮ ಪಂಚಾಯ್ತಿ ಅಧ್ಯಕ್ಷರ, ಪಿಡಿಒ ಹಾಗೂ ಕಾರ್ಯದರ್ಶಿಗಳ ಸಭೆಯು ಗುರುವಾರ ನಡೆಯಿತು.

ಅರಣ್ಯ ಹಾಗೂ ಕಂದಾಯ ಇಲಾಖೆ ಜಂಟಿ ಸರ್ವೆ ನಡೆಸಿದ ಮೇಲೆ ಗ್ರಾಮ ಪಂಚಾಯ್ತಿಯು ನಡೆಸಿದ ಗ್ರಾಮ ಸಭೆಯಲ್ಲಿ ಅನುಮೋದನೆ ಪಡೆದ ಮೇಲೆ ನಗರ ವಲಯದಲ್ಲಿ 5,600 ಎಕರೆ, ಹೊಸನಗರ ವಲಯದಲ್ಲಿ 4700 ಪ್ರದೇಶವನ್ನು ಮಾತ್ರ ಪರಿಭಾವಿತ ಅರಣ್ಯ ಪಟ್ಟಿಗೆ ಸೇರಿಸಲಾಗಿದೆ ಎಂದು ಸ್ಪಷ್ಟನೆ ನೀಡಿದರು.

ADVERTISEMENT

ಸುಪ್ರಿಂ ಕೋರ್ಟ್ ನೀಡಿದ ಮಾರ್ಗಸೂಚಿಯಂತೆ ಪರಿಭಾವಿತ ಅರಣ್ಯದಲ್ಲಿ ಸೊಪ್ಪಿನ ಬೆಟ್ಟ, ಕಾನು, ಸರ್ಕಾರಿ ದಾಖಲೆ, ಪಹಣಿಯಲ್ಲಿ ಅರಣ್ಯ ಎಂದು ನಮೂದಿಸಿದ್ದರೆ, ಒಂದು ಹೆಕ್ಟರ್ ಪ್ರದೇಶದಲ್ಲಿ 50ಕ್ಕೂ ಹೆಚ್ಚು ಮರಗಳು ಇರುವ ಗರಿಷ್ಠ 5 ಹೆಕ್ಟರ್ ಪ್ರದೇಶವನ್ನು ಕಾಯ್ದಿಟ್ಟ ಅರಣ್ಯ ಎಂದು ಪರಿಗಣಿಸಲಾಗಿದೆ ಎಂದು ವಲಯ ಅರಣ್ಯಾಧಿಕಾರಿ ಜಯೇಶ ಸಭೆಗೆ ತಿಳಿಸಿದರು.

ಜಿಲ್ಸಲಾ ಪಂಚಾಯ್ದತಿ ಸ್ಯ ಕಲಗೋಡು ರತ್ನಾಕರ ಮಾತನಾಡಿ, ತಾಲ್ಲೂಕಿನಲ್ಲಿ ಈಗಾಗಲೇ ಅಭಯಾರಣ್ಯ, ರಾಜ್ಯ ಅರಣ್ಯ, ರಕ್ಷಿತ ಅರಣ್ಯ, ದೇವರ ಕಾಡು ಎಂಬ ಹೆಸರಿನಲ್ಲಿ ಅರಣ್ಯಗಳು ಇದೆ. ಈ ಸಾಲಿಗೆ ಪರಿಭಾವಿತ ಅರಣ್ಯವನ್ನು ಸೇರಿಸಿದರೆ ಗ್ರಾಮ ಪಂಚಾಯ್ತಿಗಳ ಮುಂದಿನ ಅಭಿವೃದ್ಧಿ ಕಾರ್ಯಕ್ಕೆ ತೊಡಕು ಆಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.

ಗ್ರಾಮ ಪಂಚಾಯ್ತಿ ಅಧ್ಯಕ್ಷ ವಾಟಗೋಡು ಸುರೇಶ ಮಾತನಾಡಿ, ಕಂದಾಯ ಇಲಾಖೆಗೆ ಸೇರಿದ ಗೋಮಾಳ, ವಸತಿ ಪ್ರದೇಶವನ್ನು ಮೊದಲು ಅರಣ್ಯ ಇಲಾಖೆಯಿಂದ ಕಂದಾಯ ಇಲಾಖೆಗೆ ವರ್ಗಾಯಿಸುವ ಕಾರ್ಯ ನಡೆಯಲಿ ಎಂದು ಆಗ್ರಹ ಮಾಡಿದರು.

ಜಿಲ್ಲಾ ಪಂಚಾಯ್ತಿ  ಸದಸ್ಯರಾದ ಶ್ವೇತಾ ಬಂಡಿ, ಸುರೇಶ ಸ್ವಾಮಿರಾವ್, ಎಪಿಎಂಸಿ ಅಧ್ಯಕ್ಷ ಬಿ.ಪಿ.ರಾಮಚಂದ್ರ, ತಾ.ಪಂ. ಸದಸ್ಯರಾದ ಚಂದ್ರಮೌಳಿ, ಏರಗಿ ಉಮೇಶ, ಶಕುಂತಲಾ, ರುಕ್ಮಣಿ, ಸರಸ್ವತಿ, ಚಂದ್ರೇಶ  ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.