ADVERTISEMENT

ಧರ್ಮದ ಹೆಸರಿನಲ್ಲಿ ಅಸಹ್ಯಕರ ಚರ್ಚೆ, ವಿಮರ್ಶೆ

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2017, 9:28 IST
Last Updated 7 ನವೆಂಬರ್ 2017, 9:28 IST

ಶಿವಮೊಗ್ಗ: ಸಾಧು- ಸಂತರು, ಸಮಾಜ ಸುಧಾರಕರ ಮಾಗದರ್ಶನ ಪಡೆಯದೇ ಧರ್ಮದ ಹೆಸರಿನಲ್ಲಿ ನಡೆಯುತ್ತಿರುವ ಚರ್ಚೆ, ವಿಮರ್ಶೆಗಳು ಅಸಹ್ಯ ಹುಟ್ಟಿಸುತ್ತಿವೆ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೆ.ಎಸ್. ಈಶ್ವರಪ್ಪ ಕಳವಳ ವ್ಯಕ್ತಪಡಿಸಿದರು.

ಕುವೆಂಪು ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ನಗರಪಾಲಿಕೆ ಹಾಗೂ ಸ್ಥಳೀಯ ಸಂಘ-–ಸಂಸ್ಥೆಗಳ ಸಹಯೋಗದಲ್ಲಿ ಸೋಮವಾರ ಆಯೋಜಿಸಿದ್ದ ಕನಕದಾಸರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಕನಕದಾಸರ ಜೀವನ ಮತ್ತು ಸಂದೇಶಗಳು ಇಂದಿಗೂ ಪ್ರಸ್ತುತ. ಪ್ರತಿಯೊಬ್ಬರೂ ಕುಲಗಳೆಂಬ ಭೇದ ಮರೆತು, ಅಹಂಕಾರ ತೊರೆದು ಎಲ್ಲರೊಳಗೆ ಒಂದಾಗುವ ಸಂದೇಶವನ್ನು ಕನಕದಾಸರು ಜಗತ್ತಿಗೇ ಸಾರಿದ್ದರು.

ADVERTISEMENT

ಆದರೆ, ಇಂದು ಜನಪ್ರತಿನಿಧಿಗಳು, ಅಧಿಕಾರಿಗಳು, ಉನ್ನತ ಸ್ಥಾನದಲ್ಲಿ ಇರುವವರೇ ನಾನೇ ಹೆಚ್ಚು ಎನ್ನುವ ಅಹಂಭಾವ ಬೆಳೆಸಿಕೊಂಡಿದ್ದಾರೆ’ ಎಂದು ಬೇಸರ ವ್ಯಕ್ತಪಡಿಸಿದರು.

ಗುರುಗಳ ಮಾರ್ಗದರ್ಶನವಿಲ್ಲದೇ ಸ್ವತಂತ್ರವಾಗಿ ಭಕ್ತಿಯ ಪಥದಲ್ಲಿ ಸಾಗಿದವರು ಕನಕರು. ಭಾರತೀಯ ಸಂಸ್ಕೃತಿಯ ಪ್ರತೀಕದ ಸಂತ ಶ್ರೇಷ್ಠರು. ಕನಕ ಸತ್ಯದ ಮಾರ್ಗದಲ್ಲಿ ನಡೆಯುವಂತೆ ಜನ ಸಾಮಾನ್ಯರಿಗೆ ಮಾರ್ಗದರ್ಶನ ಮಾಡಿದ್ದಾರೆ ಎಂದು ಶ್ಲಾಘಿಸಿದರು.

ಅಹಂಕಾರ, ಜಾತೀಯತೆ ಕುರಿತ ನಿಲುವಿಗೆ ತಮ್ಮ ಜೀವನ ವಿಧಾನಗಳಿಂದ ಜನರಿಗೆ ಉತ್ತರಿಸಿದ್ದರು. ಅವರ ಸಾಹಿತ್ಯ ಓದಿ, ಜೀವನದಲ್ಲಿ ಅಳವಡಿಸಿಕೊಂಡರೆ ಜಾತಿ, ಧರ್ಮದ ಪರದೆ ಅಳಿಯುತ್ತದೆ ಎಂದರು. ಉಪನ್ಯಾಸಕ ಕೆ. ಭಾಸ್ಕರ್ ಅವರು ಕನಕದಾಸರ ಬದುಕು ಮತ್ತು ಬರಹದ ಕುರಿತು ವಿಶೇಷ ಉಪನ್ಯಾಸ ನೀಡಿದರು.

ಶಾಸಕ ಕೆ.ಬಿ.ಪ್ರಸನ್ನಕುಮಾರ್ ಅಧ್ಯಕ್ಷತೆ ವಹಿಸಿದ್ದರು. ವಿಧಾನ ಪರಿಷತ್ ಸದಸ್ಯ ಎಂ.ಬಿ. ಭಾನುಪ್ರಕಾಶ್, ಆರ್. ಪ್ರಸನ್ನಕುಮಾರ್, ‘ಸೂಡಾ’ ಅಧ್ಯಕ್ಷ ಇಸ್ಮಾಯಿಲ್ ಖಾನ್, ಜೀವವೈವಿದ್ಯ ಮಂಡಳಿ ಅಧ್ಯಕ್ಷ ಎಸ್.ಪಿ. ಶೇಷಾದ್ರಿ, ‘ಕಾಡಾ’ ಅಧ್ಯಕ್ಷ ಎಚ್.ಎಸ್. ಸುಂದರೇಶ್, ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಜ್ಯೋತಿ ಕುಮಾರ್, ಉಪಾಧ್ಯಕ್ಷೆ ಶ್ರೀಮತಿ ವೇದಾ ವಿಜಯಕುಮಾರ್, ಜಿಲ್ಲಾಧಿಕಾರಿ ಡಾ.ಎಂ. ಲೋಕೇಶ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.