ADVERTISEMENT

‘ನಾಲೆಗೆ ಹೆಚ್ಚುವರಿ ನೀರು ಪೂರೈಸಿ’

​ಪ್ರಜಾವಾಣಿ ವಾರ್ತೆ
Published 18 ನವೆಂಬರ್ 2017, 9:10 IST
Last Updated 18 ನವೆಂಬರ್ 2017, 9:10 IST

ಹೊಳೆಹೊನ್ನೂರು: ಭದ್ರಾ ಬಲದಂಡೆ ನಾಲೆಗೆ ಹೆಚ್ಚುವರಿಯಾಗಿ ಹತ್ತು ದಿನಗಳ ಕಾಲ ನೀರು ಪೂರೈಸಬೇಕು ಎಂದು ರಾಜ್ಯ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್. ಶಿವಮೂರ್ತಿ ಒತ್ತಾಯಿಸಿದರು.

ಭದ್ರಾ ಕಾಡಾ ಸಮಿತಿ ಆದೇಶದ ಮೇರೆಗೆ ಹತ್ತು ದಿನ ನೀರು ಬಿಡಲಾಗುತ್ತಿದೆ. ಆದರೆ ನಾಲಾ ಕೊನೆಯ ಭಾಗದ ಹಳ್ಳಿಗಳಾದ ನಾಗಸಮುದ್ರ, ಸನ್ಯಾಸಿಕೊಡಮಗ್ಗಿ, ಮಂಗೋಟೆ, ಸಿದ್ಲೀಪುರ, ಅಗಸನಹಳ್ಳಿ, ಎಮ್ಮೆಹಟ್ಟಿ, ದಾಸರಕಲ್ಲಹಳ್ಳಿ, ಮೈದೊಳಲು, ಮಲ್ಲಾಪುರ ವ್ಯಾಪ್ತಿಯ ಹಳ್ಳಿಗಳಿಗೆ ನೀರು ತಲುಪದೇ ಇರುವುದರಿಂದ 1,100 ಕ್ಯುಸೆಕ್‌ ನೀರನ್ನು ಮಧ್ಯರಾತ್ರಿಯಿಂದಲೇ ಹರಿಸಬೇಕು ಎಂದು ಆಗ್ರಹಿಸಿದರು.

ನಾಲೆಗಳಲ್ಲಿ  ಹೂಳು ಹಾಗೂ ಗಿಡ ಗಂಟಿಗಳು ಬೆಳೆದುಕೊಂಡಿದೆ. ತಕ್ಷಣವೇ ಅಧಿಕಾರಿಗಳು ಈ ಬಗ್ಗೆ ಕ್ರಮ ಕೈಗೊಳ್ಳಬೇಕು. ಆದರೆ ಇದೀಗ ಬಿಡುತ್ತಿರುವ ನೀರು ನಾಲೆಯ ಕೊನೆಯ ಭಾಗದ ರೈತರಿಗೆ ದೊರಕುತ್ತಿಲ್ಲ. ಈ ಬಗ್ಗೆ ಕಾಡಾ ಅಧ್ಯಕ್ಷರು ಕ್ರಮ ಕೈಗೊಳ್ಳದ್ದಿರೆ  ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ADVERTISEMENT

ಕುಡಿಯುವುದಕ್ಕಾಗಿ 7 ಟಿಎಂಸಿ ನೀರು ಉಳಿಸಿಕೊಂಡರೆ, ಬೆಳೆಗಳಿಗೆ 34.35 ಟಿಎಂಸಿ. ನೀರು ದೊರೆಯುತ್ತದೆ. ಈ ನೀರನ್ನು ಎರಡೂ ನಾಲೆಗಳಿಗೆ ಸತತ 115 ದಿನ ಕಾಲ ಹರಿಸಬಹುದು ಎಂದರು.

ಗೋಷ್ಠಿಯಲ್ಲಿ ಜಿಲ್ಲಾ  ಘಟಕದ ಗೌರವಾಧ್ಯಕ್ಷ ಅರಬಿಳಚಿ ಈಶಣ್ಣ, ಜಿಲ್ಲಾ ಉಪಾಧ್ಯಕ್ಷ ಡಿ.ಎಸ್. ಜಯಣ್ಣ, ತಾಲ್ಲೂಕು ಅಧ್ಯಕ್ಷ ರಾಮಚಂದ್ರಪ್ಪ, ತಾಲ್ಲೂಕು ಉಪಾಧ್ಯಕ್ಷ ಸಿದ್ದರಾಮಯ್ಯ, ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಜಿ.ಎನ್. ಷಡಕ್ಷರಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.