ADVERTISEMENT

ನಿಯಮಬಾಹಿರ ತಂಬಾಕು ಉತ್ಪನ್ನ ಮಾರಾಟ: ದಾಳಿ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2017, 6:24 IST
Last Updated 2 ಫೆಬ್ರುವರಿ 2017, 6:24 IST
ಶಿವಮೊಗ್ಗ: ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುವ, ನಿಯಮ ಬಾಹಿರವಾಗಿ ತಂಬಾಕು ಉತ್ಪನ್ನ ಮಾರುವ ಅಂಗಡಿಗಳ ಮೇಲೆ ಮಂಗಳವಾರ ಆರೋಗ್ಯ ಇಲಾಖೆ ಅಧಿಕಾರಿಗಳ ತಂಡ ಪೊಲೀಸರ ಸಹಯೋಗದೊಂದಿಗೆ  ದಾಳಿ ನಡೆಸಿತು.
 
ರಾಷ್ಟ್ರೀಯ ತಂಬಾಕು ನಿಯಂತ್ರಣಾಧಿಕಾರಿ ಡಾ.ಬಿ.ಎನ್. ಶಂಕರಪ್ಪ ನೇತೃತ್ವದಲ್ಲಿ  ಐದು ತಂಡಗಳು ಏಕಕಾಲಕ್ಕೆ ನಗರದ ವಿವಿಧೆಡೆ ಕಾರ್ಯಾಚರಣೆ ನಡೆಸಿದವು. ಒಟ್ಟು 98 ಪ್ರಕರಣ ದಾಖಲಿಸಿ, ₹ 10,350 ದಂಡ ವಿಧಿಸಲಾಗಿದೆ.
 
ಸುದ್ದಿಗಾರರೊಂದಿಗೆ ಮಾತನಾಡಿದ ಡಾ.ಬಿ.ಎನ್. ಶಂಕರಪ್ಪ, ಜಿಲ್ಲೆಯಾದ್ಯಂತ ಕಟ್ಟುನಿಟ್ಟಾಗಿ ‘ಕೊಟ್ಪಾ’ ಕಾಯ್ದೆ ಅನುಷ್ಠಾನಕ್ಕೆ ತರಲು ಕ್ರಮಕೈಗೊಳ್ಳ ಲಾಗಿದೆ. ನಿರಂತರ ಕಾರ್ಯಾಚರಣೆ ನಡೆಸಲಾಗುತ್ತಿದ್ದು, ಪೊಲೀಸರ ನೆರವಿನೊಂದಿಗೆ ಐದು ತಂಡಗಳಲ್ಲಿ ವಿವಿಧೆಡೆ ಕಾರ್ಯಾಚರಣೆ ನಡೆಸಲಾಗಿದೆ ಎಂದು ಮಾಹಿತಿ ನೀಡಿದರು. 
 
ಧೂಮಪಾನ ಮಾಡಲು ಅವಕಾಶ ಕಲ್ಪಿಸುವ ವಾಣಿಜ್ಯ ಸ್ಥಳ, ಶಾಲೆಯ ಸರಹದ್ದಿನಿಂದ 100 ಮೀಟರ್ ವ್ಯಾಪ್ತಿಯಲ್ಲಿ ತಂಬಾಕು ಉತ್ಪನ್ನ ಮಾರಾಟ ಮಾಡುವ ಅಂಗಡಿ, ಹೋಟೆಲ್‌ಗಳು, ತಂಬಾಕು ಉತ್ಪನ್ನಗಳ ಸೇವನೆಗೆ ಪ್ರಚೋದಿಸುವ ಜಾಹೀರಾತು ಪ್ರದರ್ಶಿಸುವುದು ಮತ್ತು ನಿಯಮಾನುಸಾರ ಎಚ್ಚರಿಕೆಯ ಜಾಹೀರಾತು ಫಲಕ ಪ್ರಕಟಣೆ ಮಾಡದವರು ಸೇರಿದಂತೆ ಕಾಯ್ದೆಯ ನಿಯಮ ಉಲ್ಲಂಘಿಸಿದವರಿಂದ ದಂಡ ವಸೂಲಿ ಮಾಡಲಾಗಿದೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.