ADVERTISEMENT

‘ನೀರು ರಕ್ಷಣೆ ಎಲ್ಲರ ಜವಾಬ್ದಾರಿ’

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2017, 5:27 IST
Last Updated 23 ಮಾರ್ಚ್ 2017, 5:27 IST

ಭದ್ರಾವತಿ: ‘ನಿಸರ್ಗದತ್ತ ಕೊಡುಗೆಯಾದ ನೀರನ್ನು ರಕ್ಷಿಸುವುದು ಎಲ್ಲರ ಜವಾಬ್ದಾರಿ. ಇದನ್ನು ಸರಿಯಾಗಿ ನಿರ್ವಹಿಸಿದರೆ ಭವಿಷ್ಯಕ್ಕೆ ನೆರವು ನೀಡಿದಂತೆ’ ಎಂದು ತಾಲ್ಲೂಕು ವೈದ್ಯಾಧಿಕಾರಿ ಡಾ. ಗುಡದಪ್ಪ ಕಸಬಿ ಹೇಳಿದರು.

ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ಬುಧವಾರ ತಾಲ್ಲೂಕು ಪಂಚಾಯ್ತಿ ನೆರವಿನಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಫಾಗಿಂಗ್ ಯಂತ್ರ, ಆರೋಗ್ಯ ತಪಾಸಣಾ ಸಾಮಗ್ರಿ ವಿತರಣೆ ಸಂದರ್ಭದಲ್ಲಿ ಆಯೋಜಿಸಲಾದ ವಿಶ್ವ ಜಲ ಸಂರಕ್ಷಣಾ ದಿನಾಚರಣೆಯಲ್ಲಿ ಅವರು ಮಾತನಾಡಿದರು.

‘ಕೊಳವೆಬಾವಿ ಕೊರೆಸಲು  ಹೆಚ್ಚು ಮಹತ್ವ ನೀಡಿದ ಪರಿಣಾಮ ಸಹಜವಾಗಿ ಅಂತರ್ಜಲ ಹೆಚ್ಚು ಕುಸಿದಿದೆ. ಇದನ್ನು ಸರಿಪಡಿಸಿಕೊಳ್ಳುವ ಗುರುತರ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ’ ಎಂದರು.

ಕೃಷಿ ಚಟುವಟಿಕೆಯಲ್ಲಿ ವೈಜ್ಞಾನಿಕ ಪದ್ಧತಿ ಅಳವಡಿಕೆ ಮಾಡಿಕೊಂಡು ಉತ್ತಮ ಬೆಳೆ ತೆಗೆಯಲು ಮನಸ್ಸು ಮಾಡಬೇಕು. ನೀರು ಸಂರಕ್ಷಣೆಗೆ ಇರುವ ವಿನೂತನ ಮಾರ್ಗೋಪಾಯಗಳ ಅಳವಡಿಕೆ ಇಂದಿನ ಅಗತ್ಯ ಎಂದರು.

ಸರ್ಕಾರ ವಿವಿಧ ಯೋಜನೆಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸ್ವಚ್ಛತಾ ಕಾರ್ಯಕ್ಕಾಗಿ ಹಲವು ಸಾಮಾಗ್ರಿ ವಿತರಣೆ ಮಾಡಿದೆ. ಇದನ್ನು ಸರಿಯಾಗಿ ಬಳಸಿಕೊಂಡು ನಾಗರಿಕರ ಉಪಯೋಗಕ್ಕೆ ನೆರವಾಗಿ ಎಂದು ಅವರು ಹೇಳಿದರು.

ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ಗೀತಾ ಜಗದೀಶ್ ಮಾತನಾಡಿ, ‘ಮೊದಲ ಹಂತದಲ್ಲಿ ಐದು ಗ್ರಾಮ ಪಂಚಾಯ್ತಿಗಳ ವ್ಯಾಪ್ತಿಯ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಪರಿಕರ ವಿತರಿಸಲಾಗಿದೆ. ಮುಂದಿನ ದಿನಗಳಲ್ಲಿ ಇತರ ಕೇಂದ್ರಗಳಿಗೆ ವಿತರಿಸಲಾಗುವುದು’ ಎಂದರು.

ಉಪಾಧ್ಯಕ್ಷೆ ತುಂಗಮ್ಮ, ಸ್ಥಾಯಿ ಸಮಿತಿ ಅಧ್ಯಕ್ಷ ಕುಮರಿ ಚಂದ್ರಣ್ಣ, ತಾಲ್ಲೂಕು ಪಂಚಾಯ್ತಿ ಸದಸ್ಯರಾದ ರುದ್ರಪ್ಪ, ತಿಪ್ಪೇಶರಾವ್, ಮಂಜುನಾಥ, ಲಕ್ಷ್ಮೀದೇವಿ, ರಮೇಶ, ಪ್ರೇಮ್‌ಕುಮಾರ್, ಸರೋಜ, ನೇತ್ರಾಬಾಯಿ, ಯಶೋದಮ್ಮ,  ಸಿಬ್ಬಂದಿ ವಿಫುಲಾ, ನಿಲೇಶರಾವ್ ಇದ್ದರು. ಕಲಾವತಿ ಪ್ರಾರ್ಥಿ
ಸಿದರು. ಪ್ರತಿಮಾ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.