ADVERTISEMENT

ನೂತನ ತಂತ್ರಜ್ಞಾನ ಅಳವಡಿಕೆಗೆ ಒತ್ತು ನೀಡಿ

​ಪ್ರಜಾವಾಣಿ ವಾರ್ತೆ
Published 23 ಮೇ 2017, 6:31 IST
Last Updated 23 ಮೇ 2017, 6:31 IST
ಸೋಮವಾರ ಮಲೆನಾಡು ಹಾಗೂ ಕರಾವಳಿ ಜಿಲ್ಲೆಗಳ ಕೃಷಿ ಅಧಿಕಾರಿಗಳಿಗೆ ಕೃಷಿ ಭಾಗ್ಯ, ಭೂ ಸಮೃದ್ಧಿ ಹಾಗೂ ಕೃಷಿ ಯಂತ್ರಧಾರೆ ಯೋಜನೆಗಳ ಕುರಿತು ಸಮಾಲೋಚನಾ ಸಭೆ ನಡೆಯಿತು.
ಸೋಮವಾರ ಮಲೆನಾಡು ಹಾಗೂ ಕರಾವಳಿ ಜಿಲ್ಲೆಗಳ ಕೃಷಿ ಅಧಿಕಾರಿಗಳಿಗೆ ಕೃಷಿ ಭಾಗ್ಯ, ಭೂ ಸಮೃದ್ಧಿ ಹಾಗೂ ಕೃಷಿ ಯಂತ್ರಧಾರೆ ಯೋಜನೆಗಳ ಕುರಿತು ಸಮಾಲೋಚನಾ ಸಭೆ ನಡೆಯಿತು.   

 ಶಿವಮೊಗ್ಗ: ಕೃಷಿ ಕ್ಷೇತ್ರದಲ್ಲಿ ನೂತನ ತಂತ್ರಜ್ಞಾನ ಅಳವಡಿಸಿಕೊಳ್ಳುವ ಬಗ್ಗೆ ರೈತರಿಗೆ ಅರಿವು ಮೂಡಿಸುವ ಕಾರ್ಯ ಆಗಬೇಕು ಎಂದು ಕೃಷಿ ಇಲಾಖೆ ಆಯುಕ್ತ ಜಿ. ಸತೀಶ್ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಮಲೆನಾಡು ಹಾಗೂ ಕರಾವಳಿ ಜಿಲ್ಲೆಗಳ ಕೃಷಿ ಅಧಿಕಾರಿಗಳಿಗೆ ಸೋಮವಾರ ಏರ್ಪಡಿಸಿದ್ದ ‘ಕೃಷಿ ಭಾಗ್ಯ, ಭೂ ಸಮೃದ್ಧಿ, ಕೃಷಿ ಯಂತ್ರಧಾರೆ ಯೋಜನೆಗಳ ಅನುಷ್ಠಾನ’ ಕುರಿತ ಸಮಾಲೋಚನೆ ಸಭೆಯಲ್ಲಿ ಅವರು ಮಾತನಾಡಿದರು.

ಭೂ ಚೇತನ ಯೋಜನೆಯಡಿ ತಂತ್ರಜ್ಞಾನ ಬಳಕೆ ಗುರಿಯನ್ನು  ನಿಗದಿಪಡಿಸಿಕೊಳ್ಳಬೇಕು. ಹೊಸ ತಂತ್ರಜ್ಞಾನ ಸಂಪೂರ್ಣ ಮಾಹಿತಿಯನ್ನು ಅಧಿಕಾರಿಗಳು ರೈತರಿಗೆ ತಿಳಿಸಬೇಕು ಎಂದು ಅವರು ತಾಕೀತು ಮಾಡಿದರು.

ADVERTISEMENT

ಕೃಷಿ ಭಾಗ್ಯ ಯೋಜನೆ ಕುರಿತು ಚರ್ಚೆ:  ಜೌಗು ಪ್ರದೇಶವಿರುವ ಕಡೆ ಕೃಷಿಭಾಗ್ಯ ಯೋಜನೆಯಡಿ ಹೊಂಡ ನಿರ್ಮಾಣ ಮಾಡಲು ಪಾಲಿಥೀನ್ ಹೊದಿಕೆಯ ಅವಶ್ಯಕತೆ ಬೇಕೆ? ಬೇಡವೇ? ಹಾಗೂ ಮಲೆನಾಡಿನಲ್ಲಿ ಚೌಕಾಕಾರ, ಕರಾವಳಿ ಭಾಗದಲ್ಲಿ ಆಯತಾಕಾರದಲ್ಲಿ ಹೊಂಡ ನಿರ್ಮಾಣದ ಕುರಿತು ಅಧಿಕಾರಿಗಳು  ಅಭಿಪ್ರಾಯ ವ್ಯಕ್ತಪಡಿಸಿದರು.

ಕೃಷಿಹೊಂಡ ನಿರ್ಮಿಸಲು ತೋಟ ಗಾರಿಕಾ ವ್ಯಾಪ್ತಿಯ ರೈತರಿಗೆ ಅವಕಾಶ ವಿಲ್ಲ.  ಇದರಿಂದ ಬಹುತೇಕ ರೈತರಿಗೆ ಈ ಯೋಜನೆಯ ಪ್ರಯೋಜನವೇ ಸಿಗುವುದಿಲ್ಲ ಎಂಬ ವಿಚಾರವೂ ಕೆಲಕಾಲ ಚರ್ಚೆಯಾಯಿತು.

ಇದಕ್ಕೆ ಪ್ರತಿಕ್ರಿಯಿಸಿದ ಆಯುಕ್ತರು, ಕೃಷಿಭಾಗ್ಯ ಯೋಜನೆಯಡಿ  ಜೂನ್ ತಿಂಗಳಿನೊಳಗೆ ಕೃಷಿ ಹೊಂಡ ನಿರ್ಮಿಸದೆ ಇದ್ದಲ್ಲಿ, ವರ್ಷದ ಕೊನೆಯ ವರೆಗೂ  ನಿರ್ಮಿಸಲು ಸಾಧ್ಯವಾಗು ವುದಿಲ್ಲ.  ಯೋಜನೆಯ ಮೂಲ ಉದ್ದೇಶ ಈಡೇರಲಿ ಎಂದು ತಿಳಿಸಿದರು.

ಶಿವಮೊಗ್ಗ, ದಕ್ಷಿಣ ಕನ್ನಡ, ಕೊಡಗು, ಚಿಕ್ಕಮಗಳೂರು, ಉಡುಪಿ ಹಾಗೂ ಉತ್ತರಕನ್ನಡ ಜಿಲ್ಲೆ ಅಧಿಕಾರಿಗಳು ಭಾಗವಹಿಸಿದ್ದರು. ನಿರ್ದೇಶಕ ಶ್ರೀನಿವಾಸ್, ಹೆಚ್ಚುವರಿ ನಿರ್ದೇಶಕ ಶಿವಮೂರ್ತಪ್ಪ, ಜಿಲ್ಲಾ ಪಂಚಾಯ್ತಿ ಸಿಇಒ ಕೆ.ರಾಕೇಶ್ ಕುಮಾರ್,  ವಿಸ್ತರಣಾಧಿಕಾರಿ ಡಾ.ಟಿ.ಎಚ್.ಗೌಡ, ಜಂಟಿ ಕೃಷಿ ನಿರ್ದೇಶಕ ಮಧುಸೂದನ್ ಇದ್ದರು.

* * 

ಗ್ರಾಮ ಪಂಚಾಯ್ತಿ ಮಟ್ಟದಿಂದ   ಹಸಿರೆಲೆ ಗೊಬ್ಬರ ಬಳಕೆ ಪ್ರಮಾಣ ಹೆಚ್ಚಿಸುವ ಬಗ್ಗೆ ಸ್ಪಷ್ಟ ಗುರಿ ಇರಿಸಿಕೊಳ್ಳಬೇಕು
ಜಿ. ಸತೀಶ್ ಕೃಷಿ ಇಲಾಖೆ ಆಯುಕ್ತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.