ADVERTISEMENT

ನೇಮಕಾತಿ ತಡೆಗೆ ಅತಿಥಿ ಉಪನ್ಯಾಸಕರ ಒತ್ತಾಯ

​ಪ್ರಜಾವಾಣಿ ವಾರ್ತೆ
Published 13 ಜುಲೈ 2017, 5:26 IST
Last Updated 13 ಜುಲೈ 2017, 5:26 IST

ಶಿವಮೊಗ್ಗ:  ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸಿದ ಸಹಾಯಕ ಪ್ರಾಧ್ಯಾಪಕರ  ನೇಮಕಾತಿ ಪ್ರಕ್ರಿಯೆ ಸ್ಥಗಿತಗೊಳಿಸಬೇಕು. ಅಕ್ರಮ ಕುರಿತು ಉನ್ನತ ತನಿಖೆ ನಡೆಸಬೇಕು ಎಂದು ಸರ್ಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ರಾಜ್ಯ ಸಮನ್ವಯ ಸಮಿತಿ  ಅಧ್ಯಕ್ಷ ಡಾ.ಎಚ್. ಸೋಮಶೇಖರ್ ಶಿವಮೊಗ್ಗಿ ಒತ್ತಾಯಿಸಿದರು.

‘ರಾಜ್ಯದ 412 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಖಾಲಿ ಇರುವ  2,160 ಸಹಾಯಕ ಪ್ರಾಧ್ಯಾಪಕರ ಹುದ್ದೆ ಭರ್ತಿ ಮಾಡಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ಜವಾಬ್ದಾರಿ ನೀಡಲಾಗಿತ್ತು. ಆದರೆ, ಈ ನೇಮಕಾತಿ ಪರೀಕ್ಷೆ ಗೊಂದಲಮಯವಾಗಿತ್ತು. 

ಪ್ರಶ್ನೆ ಪತ್ರಿಕೆ ತಯಾರಿಕೆಯಿಂದ ಹಿಡಿದು ಕೀ ಉತ್ತರಗಳಲ್ಲೂ ಲೋಪ ಬೆಳಕಿಗೆ ಬಂದಿದೆ. ಅಕ್ರಮ ನೇಮಕಾತಿ ನಡೆದಿದೆ. ಸರ್ಕಾರ ಉನ್ನತ ಮಟ್ಟದ ತನಿಖೆಗೆ ಆದೇಶಿಸಬೇಕು’ ಎಂದು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಒತ್ತಾಯಿಸಿದರು.

ADVERTISEMENT

ನೇಮಕಾತಿ ಮೂಲಕ ವಿವಿಧ ಇಲಾಖೆಯ ಶೇ 80ರಷ್ಟು ಕಾಯಂ ನೌಕರರು ಆಯ್ಕೆಯಾಗಿದ್ದಾರೆ. ಅಂತಿಮ ಹಂತದ ಆಯ್ಕೆ ಪಟ್ಟಿಯಲ್ಲಿ ಇರುವ 1,733 ಅಭ್ಯರ್ಥಿಗಳ ಆದಾಯ, ಜಾತಿ ಪ್ರಮಾಣ ಪತ್ರ ಇತರೆ ದಾಖಲಾತಿಗಳು ಬಾಕಿ ಉಳಿದಿವೆ. ಈ ಹಂತದಲ್ಲಿ ಅವರಿಗೆ ನೇಮಕಾತಿ ಆದೇಶ ನೀಡಲು ಸರ್ಕಾರ ಮುಂದಾಗಿದೆ. ಇಂತಹ ಕ್ರಮ ನಿಯಮ ಬಾಹಿರ ಎಂದು ದೂರಿದರು.

ಉನ್ನತ ಶಿಕ್ಷಣ ಬೋಧಿಸಲು ನಕಲಿ ಪದವೀಧರರು ಆಯ್ಕೆಯಾಗಿದ್ದಾರೆ.   ಪ್ರಾಮಾಣಿಕ ತನಿಖೆಗೆ ಅಡ್ಡಿಪಡಿಸುವವರ ವಿರುದ್ಧ ಇಲಾಖೆ ಶಿಸ್ತು ಕ್ರಮ ಜರುಗಿಸ ಬೇಕು. ಇಲ್ಲದಿದ್ದರೆ ಸಮಿತಿ ವತಿಯಿಂದ ಕಾನೂನು ಹೋರಾಟ  ಹಾಗೂ ರಾಜ್ಯದ ಎಲ್ಲೆಡೆ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಸಮಿತಿ ಮುಖಂಡರಾದ ಪಿ.ಶ್ವೇತಾ, ರಾಜೇಶ್ ಕುಮಾರ್, ಅರುಣ್‌ ಕುಮಾರ್‌, ಎಂ.ಸಿ.ನರಹರಿ, ಮಮತಾ, ಮಂಜುನಾಥ್, ಸತೀಶ್, ಸರ್ವಜ್ಞಮೂರ್ತಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.