ADVERTISEMENT

ನೋಟು ಅಮಾನ್ಯ: ಬಿಜೆಪಿ, ಕಾಂಗ್ರೆಸ್‌ ಸಮರ

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2017, 9:40 IST
Last Updated 9 ನವೆಂಬರ್ 2017, 9:40 IST

ಶಿವಮೊಗ್ಗ: ಕೇಂದ್ರ ಸರ್ಕಾರ ₹ 500 ಹಾಗೂ ₹ 1000 ಮುಖ ಬೆಲೆಯ ನೋಟು ರದ್ದು ಮಾಡಿ ವರ್ಷ ತುಂಬಿದ ದಿನವನ್ನು ಬಿಜೆಪಿ ಕಪ್ಪುಹಣ ವಿರೋಧಿ ದಿನವಾಗಿ ಆಚರಿಸಿದರೆ, ಕಾಂಗ್ರೆಸ್ ಕರಾಳ ದಿನವಾಗಿ ಆಚರಿಸಿತು. ಕಪ್ಪು ಹಣದ ಪ್ರತಿಕೃತಿ ದಹಿಸಿದ ಬಿಜೆಪಿ: ಜಿಲ್ಲಾ ಬಿಜೆಪಿ ಕಾರ್ಯಕರ್ತರು ನಗರದ ಗೋಪಿ ವೃತ್ತದಲ್ಲಿ ಬುಧವಾರ ಕಪ್ಪುಹಣ ವಿರೋಧಿ ದಿನ ಆಚರಿಸಿದರು. ನಂತರ ಕಪ್ಪು ಹಣದ ಪ್ರತಿಕೃತಿ ದಹಿಸಿದರು.

ವಿಧಾನಪರಿಷತ್ ಮಾಜಿ ಸದಸ್ಯ ಆರ್.ಕೆ. ಸಿದ್ದರಾಮಣ್ಣ ಮಾತನಾಡಿ, ‘ಭ್ರಷ್ಟಾಚಾರ ನಮ್ಮ ಮಧ್ಯೆ ಇರುವ ದೊಡ್ಡ ಪಿಡುಗು. ಇದನ್ನು ತೊಲಗಿಸಲು ಕಳೆದ ವರ್ಷ ಮೋದಿ ಹೆಚ್ಚಿನ ಮುಖಬೆಲೆಯ ನೋಟು ರದ್ದು ಮಾಡಿದಾಗ ದೇಶದಾದ್ಯಂತ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು. ಆದರೆ, ವಿರೋಧ ಪಕ್ಷಗಳು ಇದೊಂದು ಮೂರ್ಖತನದ ನಿರ್ಧಾರ ಎಂದು ಪ್ರಧಾನಿ ಅವರನ್ನು ತೆಗಳಿದವು. ಕಪ್ಪು ಹಣದಿಂದ ಯಾರು ರಾಜಕಾರಣ ಮಾಡುವವರು  ಈ ನಿರ್ಧಾರ ವಿರೋಧಿಸುತ್ತಿದ್ದಾರೆ’ ಎಂದು ಆರೋಪಿಸಿದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎಸ್. ರುದ್ರೇಗೌಡ ಮಾತನಾಡಿ, ಪ್ರಧಾನಿ ಮೋದಿ ಈ ದೇಶದ ದೊಡ್ಡ ಭರವಸೆ. ಅವರ ಕ್ರಾಂತಿಕಾರಕ ನಿರ್ಧಾರಗಳಿಂದ ದೇಶದಲ್ಲಿ ಆಮೂಲಾಗ್ರ ಬದಲಾವಣೆಗಳಾಗುತ್ತಿವೆ. ಕಪ್ಪು ಹಣ ಹಾಗೂ ಭಯೋತ್ಪಾದನೆ ಹತ್ತಿಕ್ಕುವ ಸಲುವಾಗಿ ಕೈಗೊಂಡ ನೋಟು ರದ್ದು ನಿರ್ಧಾರದಿಂದ ದೇಶಕ್ಕೆ ಸಾಕಷ್ಟು ಪ್ರಯೋಜನವಾಗಿದೆ. ಒಂದು ವರ್ಷದಲ್ಲಿ ₹29,213 ಕೋಟಿ ಕಪ್ಪು ಹಣ ಕೈಸೇರಿದೆ ಎಂದರು.

ADVERTISEMENT

ಮಾಜಿ ಶಾಸಕ ಕೆ.ಜಿ. ಕುಮಾರಸ್ವಾಮಿ, ಪಕ್ಷದ  ಮುಖಂಡರಾದ  ಗಿರೀಶ್ ಪಟೇಲ್, ಎಸ್.ದತ್ತಾತ್ರಿ, ಎಸ್.ಎನ್. ಚನ್ನಬಸಪ್ಪ, ಪದ್ಮನಾಭ ಭಟ್, ಡಿ.ಎಸ್. ಅರುಣ್, ಎಸ್.ಎಸ್. ಜ್ಯೋತಿಪ್ರಕಾಶ್,  ಎಂ.ಶಂಕರ್ ಮಧುಸೂದನ್, ಸುರೇಖಾ, ಸುನಿತಾ, ಅರ್ಚನಾ, ಅನಿತಾ ಭಾಗವಹಿಸಿದ್ದರು.

ಕಾಂಗ್ರೆಸ್‌ನಿಂದ ಕರಾಳ ದಿನಾಚರಣೆ: ಭ್ರಷ್ಟಾಚಾರದ ವಿರುದ್ಧ ಸಮರ ಸಾರುವುದೆ ಪ್ರಧಾನಿ ಮೋದಿ ಅವರ ಉದ್ದೇಶವಾಗಿದ್ದರೆ  ಬಿಜೆಪಿಯಲ್ಲೇ ಕಾಳಧನಿಕರ ಸಂಖ್ಯೆ ಸಾಕಷ್ಟು ಇದ್ದು, ತಮ್ಮ ಪಕ್ಷದವರ ವಿರುದ್ಧವೇ ಮೊದಲು ಸಮರ ಸಾರಲಿ ಎಂದು ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ತೀ.ನಾ.ಶ್ರೀನಿವಾಸ್‌ ಆಗ್ರಹಿಸಿದರು.

ನೋಟು ರದ್ಧತಿ ವಿರುದ್ಧ ಜಿಲ್ಲಾ ಕಾಂಗ್ರೆಸ್‌ ಬುಧವಾರ ಹಮ್ಮಿಕೊಂಡಿದ್ದ ಕರಾಳ ದಿನಾಚರಣೆಯಲ್ಲಿ ಕಪ್ಪುಪಟ್ಟಿ ಧರಿಸಿ ನಡೆಸಿದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.
ನೋಟು ರದ್ದು ನಿರ್ಧಾರ ಕೇಂದ್ರ ಸರ್ಕಾರದ ವಿವೇಚನಾರಹಿತ ನಡೆ.  ಸ್ಥಿರ ಆರ್ಥಿಕತೆ ಹೊಂದಿರುವ ಯಾವ ದೇಶವೂ ಮಾಡದಂತಹ ಕೆಲಸ ಪ್ರಧಾನಿ ಮಾಡಿದ್ದಾರೆ. ಈ ನಿರ್ಧಾರದಿಂದ ಕೂಲಿ ಕಾರ್ಮಿಕರು, ರೈತರು ಕಂಗಾಲಾಗಿದ್ದಾರೆ ಎಂದು ದೂರಿದರು.

‘ಭಾರತ ದೇಶ ವಿಶ್ವದಲ್ಲೇ ವೇಗವಾಗಿ ಆರ್ಥಿಕ ಅಭಿವೃದ್ಧಿ ಹೊಂದುತ್ತಿದ್ದ ದೇಶವಾಗಿತ್ತು. ಆದರೆ, ನೋಟು ರದ್ದು ನಂತರ ದೇಶದ ಜಿಡಿಪಿ ದರ ಶೇ 2ರಷ್ಟು ಕುಸಿದಿದೆ. ನಗದು ವ್ಯವಹಾರ ಆಧಾರಿತ ಉದ್ಯಮಗಳು ತೀವ್ರ ತೊಂದರೆ ಅನುಭವಿಸಿವೆ. ಈ ಮೂರ್ಖ ನಿರ್ಧಾರದಿಂದ ದೇಶ ಸಂಕಷ್ಟಕ್ಕೆ ಸಿಲುಕಿದೆ’ ಎಂದರು.

ಶಾಸಕ ಕೆ.ಬಿ. ಪ್ರಸನ್ನಕುಮಾರ್ ಮಾತನಾಡಿ, ‘ನೋಟು ರದ್ದು ಬಿಜೆಪಿಯ ಅವೈಜ್ಞಾನಿಕ ಪ್ರಕ್ರಿಯೆ. ಈ ನಿರ್ಧಾರದಿಂದ ದೇಶ ಸಂಕಷ್ಟಕ್ಕೆ ಸಿಲುಕಿದೆ. ಒಂದು ವರ್ಷದಲ್ಲಿ ಎಷ್ಟು ಕಪ್ಪು ಹಣ ಹೊರಬಂದಿದೆ, ಎಷ್ಟು ನಕಲಿ ನೋಟುಗಳ ಹಾವಳಿ ತಡೆಗಟ್ಟಲಾಗಿದೆ.  ಭಯೋತ್ಪಾದನಾ ಚಟುವಟಿಕೆ ಹತ್ತಿಕ್ಕಲಾಗಿದೆ ಎಂದು ಕೇಂದ್ರ ಸರ್ಕಾರ ಜನರಿಗೆ ಉತ್ತರ ನೀಡಬೇಕು’ ಎಂದು ಆಗ್ರಹಿಸಿದರು.

ಪಕ್ಷದ ಮುಖಂಡರಾದ ಇಸ್ಮಾಯಿಲ್ ಖಾನ್, ಎನ್. ರಮೇಶ್, ಪಂಡಿತ್ ವಿ. ವಿಶ್ವನಾಥ್, ಕೆ. ರಂಗನಾಥ್, ವಿಜಯಲಕ್ಷ್ಮೀ, ಸುನಿಲ್, ಎಚ್‌.ಪಿ. ಗಿರೀಶ್, ತಂಗರಾಜು ಪ್ರತಿಭಟನೆಯ ನೇತೃತ್ವ ವಹಿಸಿದ್ದರು. ಜಿಲ್ಲಾ ಎನ್‌ಎಸ್‌ಯುಐ: ಜಿಲ್ಲಾ ಎನ್ಎಸ್‌ಯುಐ ಕಾರ್ಯಕರ್ತರು ಬುಧವಾರ ಗಾಂಧಿಪಾರ್ಕ್‌ನ ಗಾಂಧಿ ಪ್ರತಿಮೆ ಮುಂದೆ ಕರಾಳ ದಿನ ಆಚರಿಸಿದರು.

ಪ್ರಧಾನಿ ಮೋದಿ ಅಧಿಕಾರಕ್ಕೆ ಬರುವ ಮೊದಲು ವಿದೇಶದಲ್ಲಿರುವ ಕಪ್ಪು ಹಣ ತರುವುದಾಗಿ ಭರವಸೆ ನೀಡಿದ್ದರು. ಆದರೆ, ಆ ಭರವಸೆ ಈಡೇರಿಸಲಾಗದೇ ಜನರ ಗಮನ ಬೇರೆ ಕಡೆಗೆ ಸೆಳೆಯಲು ನೋಟು ರದ್ದು ಮಾಡುವ ನಿರ್ಧಾರ ತೆಗೆದುಕೊಂಡರು. ಇದರಿಂದ ಸಾಮಾನ್ಯರ ನಿತ್ಯದ ಜೀವನಕ್ಕೆ ಸಂಚಕಾರವಾಗಿದೆ ಎಂದು ದೂರಿದರು.
ಚೇತನ್, ಶ್ರೀಜಿತ್, ಬಾಲಾಜಿ, ವಿಕಾಸ್ ನಾಡಿಗ್, ವಿಜಯ್, ಪ್ರಮೋದ್, ಧನಂಜಯ, ಅನಿಲ್ ಅಚಾರ್, ಶರವಣ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.