ADVERTISEMENT

ನೌಕರರು ಸದೃಢ ಸಮಾಜದ ರೂವಾರಿಗಳು

ಸರ್ಕಾರಿ ನೌಕರರ ಜಿಲ್ಲಾ ಸಮ್ಮೇಳನ, ಎನ್‌ಪಿಎಸ್‌ ಕಾರ್ಯಾಗಾರ, ವಿಶ್ವ ಮಹಿಳಾ ದಿನಾಚರಣೆ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2018, 11:36 IST
Last Updated 20 ಮಾರ್ಚ್ 2018, 11:36 IST
ಶಿವಮೊಗ್ಗದಲ್ಲಿ ಸೋಮವಾರ ಏರ್ಪಡಿಸಿದ್ದ ಸರ್ಕಾರಿ ನೌಕರರ ಜಿಲ್ಲಾ ಸಮ್ಮೇಳನ, ಎನ್‌ಪಿಎಸ್‌ ಕಾರ್ಯಾಗಾರ ಹಾಗೂ ವಿಶ್ವ ಮಹಿಳಾ ದಿನಾಚರಣೆಯಲ್ಲಿ ಸಾಧಕಿ ಅನಿತಾ ಮೇರಿ ಅವರನ್ನು ಸನ್ಮಾನಿಸಲಾಯಿತು.
ಶಿವಮೊಗ್ಗದಲ್ಲಿ ಸೋಮವಾರ ಏರ್ಪಡಿಸಿದ್ದ ಸರ್ಕಾರಿ ನೌಕರರ ಜಿಲ್ಲಾ ಸಮ್ಮೇಳನ, ಎನ್‌ಪಿಎಸ್‌ ಕಾರ್ಯಾಗಾರ ಹಾಗೂ ವಿಶ್ವ ಮಹಿಳಾ ದಿನಾಚರಣೆಯಲ್ಲಿ ಸಾಧಕಿ ಅನಿತಾ ಮೇರಿ ಅವರನ್ನು ಸನ್ಮಾನಿಸಲಾಯಿತು.   

ಶಿವಮೊಗ್ಗ: ‘ಸರ್ಕಾರಿ ನೌಕರರು ಸದೃಢ ಸಮಾಜ ನಿರ್ಮಾಣದ ರೂವಾರಿಗಳಾಗಿದ್ದು, ಅಂಥವರಿಗೆ ಅನ್ಯಾಯವಾದರೇ ಅನ್ಯಾಯ ಸರಿಪಡಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ’ ಎಂದು ವಿಧಾನ ಪರಿಷತ್‌ ವಿರೋಧ ಪಕ್ಷದ ನಾಯಕ ಕೆ.ಎಸ್‌.ಈಶ್ವರಪ್ಪ ಹೇಳಿದರು.

ಕುವೆಂಪು ರಂಗಮಂದಿರದಲ್ಲಿ ಜಿಲ್ಲಾ ಸರ್ಕಾರಿ ನೌಕರರ ಸಂಘದಿಂದ ಸೋಮವಾರ ಏರ್ಪಡಿಸಿದ್ದ ಸರ್ಕಾರಿ ನೌಕರರ ಜಿಲ್ಲಾ ಸಮ್ಮೇಳನ, ಎನ್‌ಪಿಎಸ್‌ ಕಾರ್ಯಾಗಾರ ಹಾಗೂ ವಿಶ್ವ ಮಹಿಳಾ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು

ಸರ್ಕಾರ ಯಾವುದೇ ಯೋಜನೆ ಜಾರಿಗೊಳಿಸಿದರೂ ಅದನ್ನು ಸಮಾಜದ ಕಟ್ಟಕಡೆಯ ವ್ಯಕ್ತಿಗೆ ತಲುಪಿಸುವಲ್ಲಿ ಸರ್ಕಾರಿ ನೌಕರರು ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದಾರೆ. ಸರ್ಕಾರಿ ನೌಕರರ ಶ್ರಮದ ಫಲವಾಗಿ ರಾಜ್ಯ ಎಲ್ಲಾ ಕ್ಷೇತ್ರಗಳಲ್ಲೂ ಪ್ರಗತಿ ಸಾಧಿಸುತ್ತಿದೆ. ಹಾಗಾಗಿ, ಸರ್ಕಾರದ ಸಾಧನೆಗೆ ಸರ್ಕಾರಿ ನೌಕರರ ಶಕ್ತಿಯೇ ಕಾರಣವಾಗಿದೆ. ಈ ರೀತಿಯ ಜಿಲ್ಲಾ ಸಮ್ಮೇಳನಗಳನ್ನು ನಿರಂತರವಾಗಿ ಆಯೋಜಿಸಬೇಕು. ಇದರಿಂದಾಗಿ ನೌಕರರ ಸಮಸ್ಯೆ, ಬೇಡಿಕೆಗಳು ಜನಪ್ರತಿನಿಧಿಗಳ ಗಮನಕ್ಕೆ ಬರಲು ಸಾಧ್ಯವಾಗುತ್ತದೆ ಎಂದರು.

ADVERTISEMENT

ಶಾಸಕ ಕೆ.ಬಿ.ಪ್ರಸನ್ನಕುಮಾರ್ ಜಿಲ್ಲಾ ಸಂಘದ ಸಾಧನೆಗಳ ಪಕ್ಷಿನೋಟ ಬಿಡುಗಡೆಮಾಡಿ ಮಾತನಾಡಿ, ‘ಸರ್ಕಾರಕ್ಕೆ ಒಳ್ಳೆಯ ಹೆಸರು ಅಥವಾ ಕೆಟ್ಟ ಹೆಸರು ತರುವ ಸಾಮರ್ಥ್ಯ ಸರ್ಕಾರಿ ನೌಕರರಿಗಿದೆ. ಸರ್ಕಾರ ಹಾಗೂ ಸರ್ಕಾರಿ ನೌಕರರ ನಡುವಿನ ಬಾಂಧವ್ಯ ಅನ್ಯೋನ್ಯವಾಗಿದ್ದರೆ, ರಾಜ್ಯದ ನಾಗರಿಕರು ಸಂತೋಷದಿಂದ ಇರಲು ಸಾಧ್ಯ. ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರಿ ನೌಕರರ ವೇತನವನ್ನು ಶೇ 30ರಷ್ಟು ಹೆಚ್ಚಳ ಮಾಡುವ ಮೂಲಕ ಅವರ ಬಹುದಿನದ ಬೇಡಿಕೆ ಈಡೇರಿಸಿದ್ದಾರೆ. ಈ ಮೂಲಕ ನೌಕರರ ಹಿತ ಕಾಪಾಡಿದ್ದಾರೆ’ ಎಂದರು.

ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಸಿ.ಎಸ್.ಷಡಕ್ಷರಿ ಮಾತನಾಡಿ, ‘ಜಿಲ್ಲಾ ಸಂಘವು ರಾಜ್ಯದಲ್ಲಿಯೇ ಮಾದರಿ ಯಾಗಿ ಮುನ್ನಡೆಯುತ್ತಿದೆ. ಹಲವು ಪ್ರಥಮಗಳಿಗೆ ಸಂಘ ಕಾರಣವಾಗಿದೆ. ನೌಕರರ ಹಿತ ಕಾಪಾಡುತ್ತ ಮುನ್ನಡೆ ಯುತ್ತಿದೆ. ಸರ್ಕಾರಿ ನೌಕರರು ಕೂಡ ಯಾವುದೋ ಸರ್ಕಾರ, ಜನಪ್ರತಿನಿಧಿಗಳು, ಜನರನ್ನು ಮೆಚ್ಚಿಸುವುದಕ್ಕಾಗಿ ಕೆಲಸ ಮಾಡದೇ, ಆತ್ಮತೃಪ್ತಿಗಾಗಿ ಕೆಲಸ ನಿರ್ವಹಿಸಬೇಕು. ಸರ್ಕಾರದ ಯೋಜನೆಗಳನ್ನು ಸಮಾಜದ ಪ್ರತಿಯೊಬ್ಬರಿಗೂ ತಲುಪಿಸಬೇಕು’ ಎಂದರು.

ಸಂಘದ ರಾಜ್ಯ ಘಟಕದ ಅಧ್ಯಕ್ಷ ಬಿ.ಪಿ.ಮಂಜೇಗೌಡ ಮಾತನಾಡಿ, ‘6ನೇ ವೇತನ ಆಯೋಗ ವರದಿ ಜಾರಿ ಮಾಡಿರುವ ರಾಜ್ಯ ಸರ್ಕಾರಕ್ಕೆ ನೌಕರರ ಸಂಘವು ಅಭಿನಂದನೆ ಸಲ್ಲಿಸುತ್ತದೆ. ಸರ್ಕಾರಿ ನೌಕರರ ಹಲವು ಬೇಡಿಕೆಗಳಿದ್ದು, ಸರ್ಕಾರ ಈಡೇರಿಸಲಿದೆ ಎಂಬ ಆಶಾಭಾವ ಇದೆ’ ಎಂದರು.

ಕಾರ್ಯಕ್ರಮದಲ್ಲಿ ಸಾಧಕಿ ಅನಿತಾ ಮೇರಿ ಹಾಗೂ ಸರ್ವೋತ್ತಮ ಪ್ರಶಸ್ತಿಗೆ ಭಾಜನರಾದ ಜಿಲ್ಲಾ ಸರ್ಕಾರಿ ನೌಕರರನ್ನು ಸನ್ಮಾನಿಸಲಾಯಿತು. ಡಾ.ಸಿ.ಸೋಮಶೇಖರ ಉಪನ್ಯಾಸ ನೀಡಿದರು. ಪ್ರಮುಖರಾದ ಆರ್.ಪ್ರಸನ್ನ ಕುಮಾರ್, ಆಯನೂರು ಮಂಜುನಾಥ್, ಎಸ್‌.ಪಿ.ದಿನೇಶ್‌, ಜ್ಯೋತಿ ಎಸ್.ಕುಮಾರ್, ವೇದಾ ವಿಜಯಕುಮಾರ್, ನಾಗರಾಜ ಕಂಕಾರಿ, ಇಸ್ಮಾಯಿಲ್ ಖಾನ್, ಎಸ್.ಪಿ.ಶೇಷಾದ್ರಿ ಜಿಲ್ಲಾ ಮತ್ತು ರಾಜ್ಯ ಸರ್ಕಾರಿ ನೌಕರರ ಸಂಘದ ಪ್ರಮುಖರು ಇದ್ದರು. ಜಿಲ್ಲಾ ಸಂಘದ ಕಾರ್ಯದರ್ಶಿ ಮೋಹನ್‌ಕುಮಾರ್‌ ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.