ADVERTISEMENT

ಪಾರಂಪರಿಕ ಅರಣ್ಯಹಕ್ಕು ಕಾಯ್ದೆಗೆ ಮರುಜೀವ

ಹಕ್ಕುಪತ್ರ ವಿತರಣೆಗೆ ಲಂಚ ಕೇಳಿದರೆ ಮಾಹಿತಿ ನೀಡಿ: ಗ್ರಾಮಸ್ಥರಿಗೆ ಶಾಸಕ ಕಿಮ್ಮನೆ ರತ್ನಾಕರ ಸೂಚನೆ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2017, 6:06 IST
Last Updated 20 ಮಾರ್ಚ್ 2017, 6:06 IST

ಹೊಸನಗರ: ‘ಪಾರಂಪರಿಕ ಅರಣ್ಯ ಹಕ್ಕು ಕಾಯ್ದೆ ಜಾರಿಯಲ್ಲಿ ಹಲವು ಗೊಂದಲಗಳಿದ್ದು ಅವುಗಳನ್ನು ನಿವಾರಿಸಿ, ಕಾಯ್ದೆಗೆ ಮರುಜೀವ ನೀಡಲಾಗಿದೆ’ ಎಂದು ಕಿಮ್ಮನೆ ರತ್ನಾಕರ ಹೇಳಿದರು.

ತಾಲ್ಲೂಕಿನ ಮೂಡುಗೊಪ್ಪ ನಗರ ಗ್ರಾಮ ಪಂಚಾಯ್ತಿ ಸಭಾಂಗಣದಲ್ಲಿ ಭಾನುವಾರ ನಗರ ಹೋಬಳಿಯ ಅರಣ್ಯ ಹಕ್ಕು ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಿ ಅವರು ಮಾತನಾಡಿದರು.

ಈ ಹಿಂದಿನಿಂದಲೂ ಜಾರಿಯಲ್ಲಿದ್ದ ಪಾರಂಪರಿಕ ಅರಣ್ಯ ಕಾಯ್ದೆ ಸಮರ್ಪಕ ನಿಲುವು ಹೊಂದಿರಲಿಲ್ಲ. ಸಮಿತಿಗೆ ಬಂದ ಎಲ್ಲಾ ಅರ್ಜಿಗಳು ಕಸದಬುಟ್ಟಿಗೆ ಸೇರಿದ್ದವು. 2013ರ ನಂತರ ಕಾಂಗ್ರೆಸ್ ಸರ್ಕಾರ ಕಾಯ್ದೆಗೆ ಒಂದು ಅಸ್ತಿತ್ವ ನೀಡಿದೆ. ಅದರ ಫಲವಾಗಿ ಇಂದು ಲಕ್ಷಾಂತರ ಮಂದಿ ಕಾಯ್ದೆ ಉಪಯೋಗ ಪಡೆಯುವಂತಾಗಿದೆ ಎಂದರು.

ತೀರ್ಥಹಳ್ಳಿ ಕ್ಷೇತ್ರದಲ್ಲಿ ಅತೀ ಹೆಚ್ಚು ಸಮಸ್ಯೆ ನಗರ ಹೋಬಳಿಯಲ್ಲಿದೆ. ಇಲ್ಲಿ ವನ್ಯಜೀವಿ ಕಾಡು, ಸಂರಕ್ಷಿತ ಅರಣ್ಯ ಸೇರಿದಂತೆ ಹಲವು ಸಮಸ್ಯೆಗಳು ಜನತೆ
ಯನ್ನು ಕಿತ್ತುತಿನ್ನುತ್ತಿವೆ. ಕರ್ನಾಟಕ ವಿದ್ಯುತ್ ನಿಗಮದ ಭೂಮಿ, ಸಂತ್ರಸ್ತರ ಸಮಸ್ಯೆ ಕುರಿತು ಚರ್ಚಿಸಲು ಇಂಧನ ಸಚಿವ ಡಿ.ಕೆ.ಶಿವಕುಮಾರ್ ಶೀಘ್ರದಲ್ಲಿ ನಗರ ಹೋಬಳಿಗೆ ಬರುತ್ತಿದ್ದಾರೆ ಎಂದರು.

ಹದ್ದು ಮೀರಿದ ಅಧಿಕಾರಿಗಳು:  ತಾಲೂಕಿನಲ್ಲಿ ಸರ್ಕಾರಿ ಅಧಿಕಾರಿಗಳು ಮಾತು ಕೇಳದವರಾಗಿದ್ದಾರೆ. ಆನೆ ನಡೆದಿದ್ದೇ ಹಾದಿ ಎಂದು ತಿಳಿದಿರುವ ಅವರು ರೈತರ ಸಮಸ್ಯೆಗೆ ಸ್ಪಂದಿಸುತ್ತಿಲ್ಲ. ಕರ್ತವ್ಯ ಮರೆತು ವ್ಯವಹರಿಸುವ ಅಧಿಕಾರಿಗಳು ತಮ್ಮ ನಿಲುವೇ ಅಂತಿಮ ಎಂದು ತಿಳಿದಿದ್ದಾರೆ. ರೈತರು ಸಣ್ಣ ಪುಟ್ಟ ಕೆಲಸಕ್ಕೂ ಕಚೇರಿ ಸುತ್ತುವ ಸಂದರ್ಭ ಬಂದಿದೆ. ಇದಕ್ಕೆಲ್ಲಾ ಮಂಗಳ ಹಾಡುವ ಕಾಲ ಹತ್ತಿರ ಆಗಿದೆ ಎಂದು ಎಚ್ಚರಿಕೆ ನೀಡಿದರು.

ಅರಣ್ಯ ಹಕ್ಕು, ಬಗರ್‌ಹುಕುಂ ಹಕ್ಕು ವಿಲೇವಾರಿಯಲ್ಲಿ ಲಂಚದ ಆಮಿಷದ ಬಗ್ಗೆ ಆಪಾದನೆ ಕೇಳಿಬಂದಿದೆ. ಹಕ್ಕು ಪತ್ರ ಪಡೆಯಲು ಹಣ ನೀಡಿದ್ದೀರಾ ಎಂದು ಸಭೆಯಲ್ಲಿ ಶಾಸಕರು ರೈತರನ್ನು ಪ್ರಶ್ನಿಸಿದರು.

ಲಂಚ ಕೊಡಬೇಡಿ:  ‘ಯಾರಿಗೂ ಹಣ ನೀಡಬೇಡಿ. ಯಾರಾದರೂ ಅಧಿಕಾರಿ, ಜನಪ್ರತಿನಿಧಿಗಳು ಹಣ ಕೇಳಿದರೆ ಕೂಡಲೇ ನನಗೆ ಮಾಹಿತಿ ನೀಡಿ. ಮಾಹಿತಿ ನೀಡಿದವರ ಹೆಸರನ್ನು ಗೌಪ್ಯವಾಗಿಟ್ಟು ಸಂಬಂಧಪಟ್ಟವರ ಮೇಲೆ ತನಿಖೆ ನಡೆಸಿ ಶಿಸ್ತು ಕ್ರಮ ಜರುಗಿಸಲಾಗುವುದು’ ಎಂದು ಎಚ್ಚರಿಸಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯ್ತಿ ಸದಸ್ಯ ಸುರೇಶ್ ಸ್ವಾಮಿರಾವ್, ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ವಾಸಪ್ಪಗೌಡ, ಸದಸ್ಯರಾದ ಚಂದ್ರಮೌಳಿ, ಮತ್ತಿಮನೆ ಸುಬ್ರಹ್ಮಣ್ಯ, ಶೋಭಾ ಮಂಜುನಾಥ ಗೌಡ, ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಲತಾ ನಾಗೇಶ್, ಉಪಾಧ್ಯಕ್ಷ ಕರುಣಾಕರ ಶೆಟ್ಟಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.